ಎರಡು ತಿಂಗಳು ಹಿಂದೆ, ಜಯನಗರದ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತಿದ್ದಾಗ, ಬೀದಿ ವ್ಯಾಪಾರಿಯೊಬ್ಬರು ಹಾಗು ಮನೆಯ ಎರಡನೇ ಮಹಡಿಯಲ್ಲಿದ್ದ ಗ್ರಾಹಕರ ಮಧ್ಯೆ ನಡೆಯುತ್ತಿದ್ದ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದೆ. ಆಗ ಈರುಳ್ಳಿ ಕಿಲೋಗೆ 50 ರುಪಾಯಿ ಆಗಿತ್ತು. ಎರಡನೇ ಮಹಾಯಿಂದ ಆ ಮನೆಯವರು ಅದನ್ನ ಕಿಲೋ 35ಕ್ಕೆ ಕೊಡುವಂತೆ ಒತ್ತಾಯಿಸುತಿದ್ದರು. ಗಾಡಿ ಪಕ್ಕದಲ್ಲಿ ನಿಂತಿದ್ದ ಆ ವ್ಯಾಪಾರಿ “ನಮಗೆ ಅಸಲೆ 40 ರುಪಾಯಿ ಆಗುತ್ತಮ್ಮ, ನಾವು ಅದಕ್ಕೂ ಕಡಿಮೆಗೆ ಹೇಗೆ ಮಾರುವುದು” ಎಂದು ಹೇಳಿದರು. ಆದರೆ ಕೊಳ್ಳುವವರು ಕೇಳಲಿಲ್ಲ. ಆನ್‌ಲೈನ್‌ನಲ್ಲಿ ಸಿಗುವ ರಿಯಾಯಿತಿಗಳಿಗೆ ಅಭ್ಯಾಸಗೊಂಡ ಬೆಂಗಳೂರಿಗರು ಬೀದಿ ವ್ಯಾಪಾರಿಗಳ ಬಳಿಯೂ ಅದೇ ರಿಯಾಯಿತಿಯನ್ನು ಎದುರು ನೋಡುತ್ತಾರೆ. ಕೋವಿಡ್ ಸೋಂಕು ನಾಡಿಗೆ ತಟ್ಟಿದ ನಂತರ ಈ ಆನ್‌ಲೈನ್ ಮಾರುಕಟ್ಟೆಯ ಆಕರ್ಷಣೆಯಿಂದ ಬೀದಿ ವ್ಯಾಪಾರಿಗಳು ಹಾಗು ಎಲ್ಲಾ ಸಣ್ಣ ವ್ಯಾಪಾರಿಗಳಿಗೂ ದೊಡ್ಡ ನಷ್ಟ ಉಂಟಾಗಿದೆ. ಕಳೆದ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಷ್ಟೇ ಆನ್‌ಲೈನ್‌ನಲ್ಲಿ ಕೊಳ್ಳುವುದಕ್ಕೆ ಪ್ರಾರಂಭಿಸಿದ ಹಲವು ಗ್ರಾಹಕರು ಈಗಲೂ ಅದೇ ಅಭ್ಯಾಸದಲ್ಲಿದ್ದಾರೆ ಅಥವಾ ಅಲ್ಲಿ ಸಿಗುವ ಹಾಗೆಯೇ ಬೀದಿ ವ್ಯಾಪಾರಿಗಳು ಅಗ್ಗದ ಬೆಲೆಗೆ ಮಾರಬೇಕೆಂದು ನಿರೀಕ್ಷಿಸುತ್ತಾರೆ. ಆನ್‌ಲೈನ್ ಕಾರ್ಪೊರೆಟ್ ಕುಳಗಳ ವಿರುದ್ಧ ಸಮರ, ಕೋವಿಡ್ ನಂತರ ಬೀದಿ ವ್ಯಾಪಾರಿಗಳು ಎದುರಿಸುತ್ತಿರುವ ಸಾಲುದ್ದದ ಸವಾಲುಗಳಲ್ಲಿ ಮತ್ತೊಂದು.
ದೇಶದೆಲ್ಲೆಡೆಯಂತೆ, ಇಡೀ ಬೆಂಗಳೂರು ನಗರಕ್ಕೆ 2020ನ ಮಾರ್ಚ್ ಕೊನೆಯಿಂದ ಲಾಕ್‌ಡೌನ್ ಪ್ರಾರಂಭವಾಗಿರಬಹುದು, ಆದರೆ ಬೀದಿ ವ್ಯಾಪಾರಿಗಳಿಗೆ ಆಪತ್ತು ಮಾರ್ಚ್ ಮಧ್ಯದಲ್ಲಿಯೇ ಪ್ರಾರಂಭವಾಗಿತ್ತು. ಕಾಲರಾ ಸಾಂಕ್ರ್ರಾಮಿಕ ರೋಗವಿದೆಯೆಂದು ಬೀದಿ ವ್ಯಾಪಾರವನ್ನು ಬಿಬಿಎಂಪಿ ನಿರಾಕರಿಸಿತ್ತು. ಅದಾದ ನಂತರ ಕೆಲವು ತಳ್ಳೋ ಗಾಡಿ ವ್ಯಾಪಾರಿಗಳು ಬಿಟ್ಟರೆ, ನಗರದ ಸ್ಥಿರ ಬೀದಿ ವ್ಯಾಪಾರಿಗಳಿಗೆ (ಒಂದೇ ಕಡೆ ಕುಳಿತು/ನಿಂತು ವ್ಯಾಪಾರ ಮಾಡುವವರು) ಜೂನ್ ತನಕ, ಕೆಲವರಿಗೆ ಜುಲೈ ತನಕ ವ್ಯಾಪಾರ ಪ್ರಾರಂಭವಾಗಲಿಲ್ಲ. ಆ ಇಡೀ ಸಮಯದಲ್ಲಿ, ದಿನನಿತ್ಯ ವ್ಯಾಪಾರ ಮಾಡಿ ಮನೆ ನಡೆಸುವ ವ್ಯಾಪಾರಿಗಳಿಗೆ, ಒಂದು ರುಪಾಯಿ ಕೂಡ ವ್ಯಾಪಾರ ಮಾಡಲು ಆಗಲಿಲ್ಲ. ಬಾಡಿಗೆಗಳನ್ನು ಕಟ್ಟಲು, ಮನೆಗೆ ತರಕಾರಿ-ಮೊಟ್ಟೆ-ಮಾಂಸ-ಹಾಲು ತರಲು ಸಹ ವ್ಯಾಪಾರಿಗಳು ಬಹಳ ಕಷ್ಟಪಟ್ಟರು. ತಳ್ಳುವ ಗಾಡಿಗಳಿಗೂ ಸಹ ಅನೆಕ ರೀತಿಯ ತೊಂದರೆಗಳು. ಕೆಲವು ಬೀದಿ ವ್ಯಾಪಾರಿಗಳು ಹಣ್ಣಿನ ಮೇಲೆ ಬೇಕೆಂದೇ ಉಗಿದಿದ್ದಾರೆ ಎಂದು ಕೂಡ ಹಲವಾರು ಕಿಡಿಗೇಡಿಗಳು ಮತ್ತು ಧರ್ಮಾಂಧರು ಫೇಕ್ ನ್ಯೂಸ್ ಹಬ್ಬಿಸಿದರು. ಅದರಿಂದ ಸಹ ಇದ್ದ ಕೆಲವು ತಳ್ಳುವ ಗಾಡಿಗಳಿಗೂ ವ್ಯಾಪಾರ ಕಡಿಮೆ ಆಯಿತು.
ಲಾಕ್‌ಡೌನ್ ನಂತರ ಅಂಗಡಿಗಳು ಪ್ರಾರಂಭವಾದವು ಆದರೆ ಸರ್ಕಾರ ಮಾರುಕಟ್ಟೆಗಳಿಗೆ ಬಾಗಿಲು ತೆಗೆಯಲು ಅನುವು ನೀಡಲಿಲ್ಲ. ಮಾರುಕಟ್ಟೆಗಳು ತೆರೆದ ಮೇಲೆ ಸಹ ಪೊಲೀಸ್ ಇಲಾಖೆ, ಬಿಬಿಎಂಪಿ ಹಾಗು ಹಲವು ಅಧಿಕಾರಿಗಳು ಕೊಟ್ಟ ಕಿರುಕುಳ ಆಷ್ಟಿಷ್ಟಲ್ಲ. ಉದಾಹರಣೆಗೆ ಶಿವಾಜಿನಗರದಲ್ಲಿ, ಬೀದಿ ವ್ಯಾಪಾರದ ಗುರುತಿನ ಚೀಟಿ ಹೊಂದಿರುವ ವ್ಯಾಪಾರಿಗಳಿಗೂ, ಯಾವುದೇ ಆದೇಶವಿಲ್ಲದೆ, ಕಾರಣವಿಲ್ಲದೆ, ಅಲ್ಲಿನ ಸ್ಥಳೀಯ ಸಂಚಾರಿ ಪೊಲೀಸರು ವ್ಯಾಪಾರ ಮಾಡಲು ಬಿಟ್ಟಿರಲಿಲ್ಲ. ಯಾಕೆಂದು ವ್ಯಾಪಾರಿಗಳು ಕೇಳಿದಾಗ “ಇಲ್ಲಿ ನೀವು ವ್ಯಾಪಾರ ಮಾಡಬಾರದು ಅಷ್ಟೆ” ಎಂದು ಹೇಳಿದರು!

ಇಷ್ಟೆಲ್ಲಾ ತೊಂದರೆಗಳನ್ನು ಎದುರಿಸುತ್ತಿರುವ ಬೀದಿ ವ್ಯಾಪಾರಿಗಳು ಬಿಬಿಎಂಪಿ ಆಯುಕ್ತರನ್ನು ಹಾಗು ಬೆಂಗಳೂರಿನ ಮಹಾಪೌರರನ್ನು ಭೇಟಿ ಆಗಿ ಆರ್ಥಿಕ ನೆರವು ನೀಡುವಂತೆ, ಮಾರುಕಟ್ಟೆಗಳನ್ನು ಪ್ರಾರಂಭಿಸಿ ಅಲ್ಲಿ ನೀರು, ಶೌಚಾಲಯ ಸೌಕರ್ಯ ನೀಡುವಂತೆ ಮನವಿ ಸಲ್ಲಿಸಿದರು. ಅದಕ್ಕೆ ಯಾವುದೇ ಪ್ರತಿಸ್ಪಂದನೆ ಸಿಗಲಿಲ್ಲ. ಬೆಂಗಳೂರು ನಗರ ಉಸ್ತುವಾರಿ ಸಚಿವರಿಲ್ಲದೆ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಪಯತ್ನ ಪಟ್ಟ ಬೀದಿ ವ್ಯಾಪಾರಿಗಳಿಗೆ ಮುಖ್ಯಮಂತ್ರಿಗಳ ಅಪಾಯಿಂಟ್‌ಮೆಂಟ್ ಸಹ ಸಿಕ್ಕಲಿಲ್ಲ. ಇಷ್ಟೆಲ್ಲಾ ಆಗಿ ಬೇಸರಗೊಂಡ 2020 ಜುಲೈ 18ರಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಹಾಗು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸಹಯೋಗದೊಂದಿಗೆ ಬೀದಿ ವ್ಯಾಪಾರಿಗಳು ಪ್ರತಿಭಟನೆ ಸಹ ನಡೆಸಿದರು. ಆಟೋ ಹಾಗು ಟ್ಯಾಕ್ಸಿ ಚಾಲಕರಿಗೆ ನೀಡಿದ ಹಾಗೆ ನಮಗೂ ಪರಿಹಾರ ನೀಡಿ ಎಂದು ರಾಜ್ಯ ಹಾಗು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದರು. ರಾಜ್ಯ ಸರ್ಕಾರ ಯಾವುದೇ ಉತ್ತರ ನೀಡಲಿಲ್ಲ. ಕೇಂದ್ರ ಸರ್ಕಾರ ಆಗಲೇ ಸಾಲದಲ್ಲಿ ಮುಳುಗಿದ್ದ ಬೀದಿ ವ್ಯಾಪಾರಿಗಳಿಗೆ ಮತ್ತೊಂದು ಸಾಲ ನೀಡಿತು!
ಹಾಗಾಗಿ ಈ 10,000 ರೂಪಾಯಿಯ ಕೇಂದ್ರ ಸರ್ಕಾರದ ಸಾಲ ಬಿಟ್ಟರೆ, ನಗರದ ಕೋಟಿ ಸಂಖ್ಯೆಯ ನಿವಾಸಿಗಳಿಗೆ ಸೇವೆ ಮಾಡುವ ಬೀದಿ ವ್ಯಾಪಾರಿಗಳಿಗೆ ಸರ್ಕಾರ ಯಾವುದೇ ಸಹಾಯ ನೀಡಲಿಲ್ಲ. ’ಆತ್ಮ ನಿರ್ಭರ್’ ಯೋಜನೆ ಎಂದರೆ ಸರ್ಕಾರ ಕೈ ಎತ್ತಿದೆ ಎಂದರ್ಥ ಎಂದು ಮನಗಂಡು, ನಮ್ಮ ಬಾಳು ನಾವೇ ನೋಡಿಕೊಳ್ಳಬೇಕೆಂದು ಬೀದಿ ವ್ಯಾಪಾರಿಗಳು ಎಂದಿನಂತೆ ತಮ್ಮ ಶ್ರಮ, ಬೆವರು, ಧೈರ್ಯದಿಂದ ಮತ್ತೆ ವ್ಯಾಪಾರ ಮಾಡಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಕೆಲವು ದಿನ ಬೋಣಿ ಸಹ ಆಗಲಿಲ್ಲ. ಆದರೂ ತಮ್ಮ ಮನೆಯಲ್ಲಿದ್ದ ಮಕ್ಕಳ, ತಂದೆ ತಾಯಂದಿರ ಮುಖಗಳನ್ನು ನೆನೆದು ಆದದ್ದಾಗಲಿ ಎಂದು ಮುಂದುವರೆದರು.
ಕೊರೊನಾ ಸೋಂಕು ಮೊದಲು ಬಂದು, ಲಾಕ್‌ಡೌನ್ ಮಾಡಿ ಈಗ ಒಂದು ವರ್ಷ ಆಗಿದೆ. ಈಗ ಎಲ್ಲಾ ಮಾರುಕಟ್ಟೆಗಳು ತೆರೆದಿವೆ. ಆದರೆ ಎಲ್ಲಾ ಬೀದಿ ವ್ಯಾಪಾರಿಗಳು ಮರಳಿ ಬಂದಿಲ್ಲ. ನಗರದ ವೈಟ್‌ಫೀಲ್ಡ್ ಪ್ರದೇಶದಲ್ಲಿ ಸಾವಿರಾರು ವ್ಯಾಪಾರಿಗಳಿದ್ದಾರೆ. ಆ ಪ್ರದೇಶದಲ್ಲಿ ಹೆಚ್ಚು ಇರುವುದು ಸ್ಟಾರ್ ಹೋಟೆಲ್ ಅಥವಾ ಬೀದಿ ವ್ಯಾಪಾರಿ ಗಾಡಿಗಳು. ನಿಮಗೆ ದರ್ಶಿನಿಗಳು, ಸಣ್ಣ ಮಿಲಿಟರಿ ಹೋಟೆಲ್ ಯಾವುವೂ ಇಲ್ಲ. ಅಲ್ಲಿ ಕಂಪನಿಗಳು ಇನ್ನೂ ಬಾಗಿಲು ತೆಗೆಯದ ಕಾರಣ, ಕೇವಲ 30% ವ್ಯಾಪಾರಿಗಳಷ್ಟೇ ಮರಳಿ ಬಂದಿದ್ದಾರೆ.
ಸತ್ಯ ಸಾಯಿ ಆಸ್ಪತ್ರೆ ಇರುವ ಬೆಂಜ್ ಕಂಪನಿ ಬಳಿ ಇರುವ ಮಂಜುನಾಥ ಅವರನ್ನು ಮಾತನಾಡಿಸಿದಾಗ ಅವರು “ಕಂಪೆನಿಗಳಲ್ಲಿ ಫೆಸಿಲಿಟೀಸ್ ಸಿಬ್ಬಂದಿ ಅಥವಾ ಸೆಕ್ಯೂರಿಟಿ ಅವರು ಇದ್ದಾರೆ ಅಷ್ಟೇ, ಬೇರೆ ಯಾರೂ ಇಲ್ಲ. ಏನೂ ವ್ಯಾಪಾರ ಇಲ್ಲ. ವ್ಯಾಪಾರಿಗಳು ಕಡಿಮೇನೆ. ನಮ್ಮ ರಸ್ತೆಲೆ 30 ಜನ ವ್ಯಾಪಾರಿಗಳಿದ್ದರು, ಈಗ ಹತ್ತು ಜನ ಸಹ ಇಲ್ಲ. ಇರೋರಿಗೂ ಏನೂ ವ್ಯಾಪಾರ ಇಲ್ಲ. ಆರು ತಿಂಗಳಿಂದ ನಾವು ಸಹ ಮನೆ ಬಾಡಿಗೆ ಕಟ್ಟಿಲ್ಲ” ಎಂದರು. ವೈಟ್‌ಫೀಲ್ಡ್ ಏನೋ ಕಂಪನಿಗಳ ಪ್ರದೇಶ, ಅಲ್ಲಿ ಸಾಫ್ಟ್‌ವೇರ್ ಕಂಪೆನಿಗಳಿನ್ನು ಬಾಗಿಲು ತೆಗೆಯದ ಕಾರಣ ಹೀಗಿದೆ ಎನ್ನಬಹುದು. ಆದರೆ ನಗರದ ಬೇರೆ ಪ್ರದೇಶಗಳಲ್ಲಿ ಕೂಡ ಪರಿಸ್ಥಿತಿ ಆಶಾದಾಯಕವಾಗಿಲ್ಲ. ದಕ್ಷಿಣ ವಲಯದ ಪಟ್ಟಣ ವ್ಯಾಪಾರಿ ಸಮಿತಿಯ ಸದಸ್ಯರು ಹಾಗು ವಿಜಯನಗರ ಸರ್ವಿಸ್ ರಸ್ತೆಯ ಬಿಡಿ ವ್ಯಾಪಾರಿಗಳಾದ ಶಶಿಕಲಾ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೀಗೆ ವಿವರಿಸುತ್ತಾರೆ. “ನನ್ನದು ಬಟ್ಟೆ ವ್ಯಾಪಾರ. ಕೋವಿಡ್ ಮುಂಚೆ ಸಂಜೆ ನಾಲಕ್ಕಕ್ಕೆ ವ್ಯಾಪಾರ ಪ್ರಾರಂಭಿಸಿ, ರಾತ್ರಿ ಎಂಟು ಘಂಟೆಗೆ ಮುಗಿಸುತ್ತಿದ್ದೆ. ಈಗ ಬೆಳಗ್ಗೆ 10 ಘಂಟೆಗೆ ಪ್ರಾರಂಭಿಸುತ್ತೇನೆ, ರಾತ್ರಿ 9 ಘಂಟೆ ತನಕ ಇರುತ್ತೇನೆ. ಆದರೆ ಕೋವಿಡ್ ಮುಂಚೆ ಆಗುತ್ತಿದ್ದ ಅರ್ಧಕ್ಕೂ ಕಡಿಮೆ ವ್ಯಾಪಾರ ಆಗುತ್ತಿದೆ. ನಮ್ಮದಾದರೂ ಬಟ್ಟೆ. ಇಂದು ಮಾರಾಟವಾಗಲ್ಲ ಎಂದರೆ ನಾಳೆ ಆಗಬಹುದು. ಆದರೆ ಹಣ್ಣು ತರಕಾರಿ ಮಾರುವವರಿಗೆ ಇನ್ನೂ ಕಷ್ಟ. ಈ ಮಾರುಕಟ್ಟೆಯಲ್ಲಿ ನಮಗೆ ನೆರಳಿರಲಿ ಎಂದು ಹಾಕಿದ್ದ ಟಾರ್ಪಾಲ್‌ಅನ್ನು ಬಿಬಿಎಂಪಿಯವರು ತೆಗೆದ ನಂತರವಂತೂ, ನೆರಳು ಇಲ್ಲದೆ ಅವರ ಸರಕೆಲ್ಲ ಒಣಗಿಹೋಗುತ್ತಿದೆ. ಆ ಸಮಸ್ಯೆ ಬೇರೆ ಇದೆ” ಎಂದರು. ಇದು ಅವರ ಸಮಸ್ಯೆ ಮಾತ್ರವಲ್ಲ. ಇಡೀ ವಿಜಯನಗರ ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರದ ಪ್ರಮಾಣ ಕಡಿಮೆ ಆಗಿದೆ. ಶಶಿಕಲಾ ಅವರು ಮುಂದುವರೆದು ಹೇಳಿದ್ದೇನೆಂದರೆ, “ಜನ ಆಚೆಗೆ ಬರುವುದೇ ಕಡಿಮೆಯಾಗಿದೆಯೆಂದು”.

ಆದರೆ ಜನಕ್ಕೆ ಆಚೆ ಬರುವುದಕ್ಕೆ ಕೊರೊನಾ ಒಂದೇ ಸಮಸ್ಯೆ ಅಲ್ಲ. ಜನ ಮನೆಯಾಚೆಗೆ ಬಂದರೂ, ಅವರ ಬಳಿ ಕೂಡ ಖರ್ಚು ಮಾಡಲು ದುಡ್ಡಿಲ್ಲ. ಕುಸಿದಿರುವ ದೇಶದ ಆರ್ಥಿಕತೆ ಇನ್ನು ಸಹ ಚೇತರಿಸ್ಕೊಂಡಿಲ್ಲ. ಮತ್ತಿಕೆರೆಯ ಜೆ.ಪಿ.ಪಾರ್ಕ್‌ನಿಂದಾಚೆಗೆ ಹಲವಾರು ವರ್ಷಗಳಿಂದ ಸುರೇಶ್ ಗೌಡರು ಚುರ್‌ಮುರಿ ವ್ಯಾಪಾರ ಮಾಡುತ್ತಾರೆ.
ಅದರ ಬಗ್ಗೆ ಮಾತನಾಡುತ್ತ ಅವರು “ಸಾರ್ ಮುಂಚೆ ಒಂದು ಕುಟುಂಬ ಬಂದು ನಾಲಕ್ಕು ಚುರ್‌ಮುರಿ ತೆಗೆದುಕೊಳ್ಳುತ್ತಿದ್ದರು. ಈಗ ಒಂದೇ ಪ್ಲೇಟ್ ತಗೊಂಡು ಮಕ್ಕಳಿಬ್ಬರು ಹಂಚಿಕೊಳ್ಳುತ್ತಾರೆ. ಅಪ್ಪ ಅಮ್ಮ ತಿನ್ನುವುದೇ ಇಲ್ಲ. ವ್ಯಾಪಾರ ತುಂಬಾನೇ ಕಡಿಮೆ ಆಗಿದೆ. ನಮಗಂತೂ ನೆಮ್ಮದಿನೇ ಇಲ್ಲ, ಏನ್ ಮಾಡೋದು ಗೊತ್ತಾಗ್ತಾ ಇಲ್ಲ ಎನ್ನುತ್ತಾರೆ. ಹೀಗಾಗಿ ಜನ ಬರೋದೇ ಕಡಿಮೆ ಆಗಿರುವುದು ಒಂದು ಕಡೆಯಾದರೆ, ಬಂದಾಗ ಕೈ ಬಿಚ್ಚಿ ಕೊಳ್ಳೋದು ಕಡಿಮೆ ಆಗಿದೆ. ಇದರ ಜೊತೆಗೆ ಬೆಲೆ ಏರಿಕೆಯ ಸಮಸ್ಯೆ. ಶಿವಾಜಿನಗರದ ಬೀದಿ ವ್ಯಾಪಾರಿ ಜಮೀರ್ ಅವರು ಸುಮಾರು ೧೫ ವರ್ಷಗಳಿಂದ ಶಿವಾಜಿನಗರದ ಬಸ್ ನಿಲ್ದಾಣ ಬಳಿ ಬಟ್ಟೆ ಮಾರಾಟ ಮಾಡುತ್ತಿದ್ದಾರೆ.
“ಆಗಸ್ಟ್‌ನಲ್ಲಿ ವ್ಯಾಪಾರ ಮತ್ತೆ ಹಾಕಿದ್ದು, ಹಂಗು ಹಿಂಗೂ ಡಿಸೆಂಬರ್ ತನಕ ತಳ್ಳಿ ನಂತರ ಸ್ವಲ್ಪ ಪಿಕ್‌ಅಪ್ ಆಯಿತು. ಆದರೆ ಅದರ ನಂತರ ಹೋಲ್‌ಸೇಲ್ ಅವರ ಬಳಿಯೇ ರೇಟ್‌ಗಳು ಜಾಸ್ತಿ ಆಗಿದ್ದಾವೆ. ಕೆಲವು ಐಟೆಮ್‌ಗಳಂತೂ ಹೋಲ್‌ಸೇಲ್‌ನವರು ಇಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ನಾವು ಜಾಸ್ತಿ ರೇಟ್‌ಗೆ ತೆಗೆದುಕೊಂಡು ಇಲ್ಲಿ ಹಳೆ ರೇಟ್‌ಗೆ ಮಾರಿಕೊಂಡರೆ ನಮಗೆ ಲಾಸ್ ಆಗುತ್ತೆ, ಆದರೆ ರೇಟ್ ಜಾಸ್ತಿ ಮಾಡಿದರೆ ಎಲ್ಲಾ ಗ್ರಾಹಕರು ಅರ್ಥ ಮಾಡಿಕೊಳ್ಳುತ್ತಿಲ್ಲ. ನಮಗೆ ಬಹಳಾನೇ ಕಷ್ಟ ಆಗಿದೆ” ಎನ್ನುತ್ತಾರೆ.
ಹೋಗಲಿ ಜಯನಗರದಂತಹ ಏರಿಯಾದಲ್ಲಿ ಶ್ರೀಮಂತರಿದ್ದಾರೆ. ಅವರಿಗೆ ಕೋವಿಡ್‌ನಿಂದ ಏನು ಕಡಿಮೆ ಆಗಿಲ್ಲ ಎಂದು ಭಾವಿಸಿ, ಅಲ್ಲಿ ಮನೆಮನೆಗೂ ಗಾಡಿ ತಳ್ಳಿಕೊಂಡು ಹೋಗುವ ಚಿತ್ರ ಅವರನ್ನು ಮಾತನಾಡಿಸಿದಾಗ, ಅವರು ಬೈದುಕೊಂಡಿದ್ದು ಆನ್‌ಲೈನ್ ಕಂಪೆನಿಗಳನ್ನ. ಇನ್ನು ಜಯನಗರ 4ನೇ ಬ್ಲಾಕ್‌ನಲ್ಲಿ ಹಣ್ಣಿನ ವ್ಯಾಪಾರ ಮಾಡುವ ಸುಬ್ರಮಣಿಯವರು “ಸಾರ್, ಮುಂಚೆ ಆಗುತಿದ್ದ ಕಾಲ್ ಭಾಗ ವ್ಯಾಪಾರಾನು ಆಗುತ್ತಿಲ್ಲ ಸಾರ್. ಜನ ಆಚೆ ಬರ್ತಾ ಇಲ್ಲ ಮುಂಚೆ ತರಾ. ಬಂದಾಗಲೂ ಕೊಳ್ಳುತ್ತಿಲ್ಲ” ಎನ್ನುತ್ತಾರೆ .
ಇಷ್ಟು ವ್ಯಾಪಾರ ಕಡಿಮೆ ಆದರೂ ವ್ಯಾಪಾರಿಗಳು ಹೇಗೆ ನಿಭಾಯಿಸುತ್ತಿದ್ದಾರೆ ಎಂದುಕೇಳುತ್ತೀರಾ? ಸರ್ಕಾರದ ಕಡೆಯಿಂದ ಅವರಿಗೆ ಸಿಕ್ಕಿದ್ದು ಬರಿ ಪಿ.ಎಂ.ಸ್ವಾನಿಧಿ ಸಾಲ – 10,000 ರೂಪಾಯಿ. ಇದು ಪಡೆಯಲು ನಿಮ್ಮ ಬಳಿ ಆಧಾರ್ ಇರಬೇಕು, ಸ್ಮಾರ್ಟ್ ಫೋನ್ ಇರಲೇ ಬೇಕು ಹಾಗು ಗೂಗಲ್ ಪೇ, ಫೋನ್ ಪೇ ಇತ್ಯಾದಿ ಇರಲೇ ಬೇಕು! ಇದೆಲ್ಲ ಇರುವರಿಗೂ ಸಹ ಸಾಲ ಸಿಕ್ಕೇ ಸಿಗತ್ತೆ ಎಂಬ ಖಾತ್ರಿ ಇಲ್ಲ. ಸಿಕ್ಕವರಿಗೆ ಅದನ್ನು ಪಡೆಯಲು ಹಲವು ಬಾರಿ ಬ್ಯಾಂಕ್‌ಗಳಿಗೆ, ಬಿಬಿಎಂಪಿಗೆ ಎಂದು ಇಲ್ಲಿ ಅಲ್ಲಿ ಸುತ್ತಿದ್ದಾರೆ ವ್ಯಾಪಾರಿಗಳು. ಈ ಸಾಲವನ್ನು ಸರ್ಕಾರದವರು ಪುಕ್ಸಟ್ಟೆ ಕೊಡುತ್ತಿಲ್ಲ. ಬೀದಿ ವ್ಯಾಪಾರಿಗಳ ಡೇಟಾ ಪಡೆಯುತ್ತಿದ್ದಾರೆ. ವ್ಯಾಪಾರಿಗಳ ಆಧಾರ್ ಹಾಗು ಅವರ ಗೂಗಲ್ ಪೇ/ಫೋನ್ ಪೇ ನಂಬರ್ ಪಡೆಯುತ್ತಿದ್ದಾರೆ ಹಾಗು ಅದರಲ್ಲಿ ರೆಕಾರ್ಡ್ ಆಗುವ ಮಾಹಿತಿಯೆಲ್ಲ ಪಡೆಯುತ್ತಿದ್ದಾರೆ! (ಈ ಮಾಹಿತಿ ಕೊಡಲು ಒಪ್ಪದಿದ್ದರೆ ನಿಮಗೆ ಸಾಲವಿಲ್ಲ!) ಇದನ್ನು ಸರ್ಕಾರ ಯಾರಿಗೆ ಮಾರಿಕೊಳ್ಳುತ್ತಾರೋ ಅಥವಾ ಅವರು ಹೇಗೆ ಉಪಯೋಗಿಸುತ್ತಾರೋ ಎಂದು ಭಯವೂ ವ್ಯಾಪಾರಿಗಳಿಗೆ ಕಾಡುತ್ತಿದೆ!

ಹಾಗಾಗಿ ಸರ್ಕಾರದಿಂದ ಏನು ಮಹತ್ವದ್ದು ಸಿಕ್ಕಿಲ್ಲ. ವ್ಯಾಪಾರಿಗಳು ಬೇರೆ ವ್ಯಾಪಾರಿಗಳ ಬಳಿ ಕೈ ಸಾಲ ಮಾಡಿಕೊಂಡು, ಫೈನಾನ್ಸ್‌ನವರ ಬಳಿ ಸಾಲ ಮಾಡಿ, ಮನೆ ಮಾಲೀಕರ ಬಳಿ ಬಾಡಿಗೆ ಕಡಿಮೆ ಮಾಡುವಂತೆ/ ಲೇಟ್ ಆಗಿ ನೀಡಲು ಅವಕಾಶ ನೀಡುವಂತೆ ಮನವಿ ಮಾಡಿ, ಖರ್ಚುಗಳನ್ನು ಕಡಿಮೆ ಮಾಡಿಕೊಂಡು ಹೇಗೋ ಬದುಕು ನೂಕುತ್ತಿದ್ದಾರೆ. ಕೆಲವರು ಮಕ್ಕಳನ್ನು ಈ ಸಾಲಿನಲ್ಲಿ ಶಾಲೆಗೇ ಸೇರಿಸಿಲ್ಲ. ಸೇರಿಸದವರೆಲ್ಲರಿಗೂ ಆನ್‌ಲೈನ್ ಕ್ಲಾಸುಗಳಿಗಾಗಿ ಮೊಬೈಲ್ ಕೊಡಿಸಲು ಆಗಿಲ್ಲ. ಹಬ್ಬಗಳು ಬಂದಾಗ ಖರ್ಚು ಮಾಡುತ್ತಿಲ್ಲ. ವ್ಯಾಪಾರಿಗಳಿಗೆ ಸರ್ಕಾರದಿಂದ ಆಗಿರುವ ಒಂದೇ ಒಂದು ನೆರವೆಂದರೆ – ನಮ್ಮ ಪಡಿತರ ಚೀಟಿ ವ್ಯವಸ್ಥೆ. ಶಿವಾಜಿನಗರದ ಆಯಾಜ್ ಅವರು ಹೇಳಿದಂತೆ, “ಅದೊಂದು ಇರೋದರಿಂದ ಹೇಗೋ ಮನೆ ನಡೆಯುತ್ತಿದೆ” ಎನ್ನುತ್ತಾರೆ. ಇದು ನಮಗೆ ಏನು ತೋರಿಸುತ್ತದೆ ಎಂದರೆ, ಸರ್ಕಾರದ ಕಡೆಯಿಂದೆ ಮೂಲಸೌಕರ್ಯಗಳನ್ನು ಪ್ರಾಮಾಣಿಕವಾಗಿ ದೊರೆತರೆ, ಅಸಂಘಟಿತ ಕಾರ್ಮಿಕರಿಗೆ ನಿಜವಾದ ನೆರವಾಗುತ್ತದೆ.
ಬೀದಿ ವ್ಯಾಪಾರಿಗಳು ಸ್ವಾವಲಂಬಿಗಳು. ಸರ್ಕಾರದಿಂದ ಕೆಲಸ ಕೇಳುತ್ತಿಲ್ಲ. ಎಷ್ಟೇ ಕಷ್ಟ ಬಂದರು, ಬಿಸಿಲು ಮಳೆಯಲ್ಲಿ ನಿಂತು ಬೆವರು ಸುರಿಸಿ ವ್ಯಾಪಾರ ಮಾಡಲು ಸಿದ್ಧರಿದ್ದಾರೆ. ಆದರೆ ಇಡೀ ಆರ್ಥಿಕತೆ ಕುಸಿದಿದ್ದರೆ ಅವರಾದಾರು ಏನು ಮಾಡಿಯಾರು? ಅವರು ಕೇಳುವುದು, ಅವರ ಮಾರುಕಟ್ಟೆಗಳಲ್ಲಿ ಅವರ ಸರಕು ಬಾಡಿ ಹೋಗದಂತೆ ಇರಲು ನೆರಳಿನ ವ್ಯವಸ್ಥೆ, ಮಾರುಕಟ್ಟೆಗಳಲ್ಲಿ ಸರಕು ಇಡಲು ಗೋದಾಮಗಳು, ಕುಡಿಯುವ ನೀರು ಹಾಗು ಉಚಿತ ಶೌಚಾಲಯಗಳು. ಈ ಕನಿಷ್ಠ ಸೌಲಭ್ಯಗಳೂ ಅವರಿಗೆ ದೊರಕುತ್ತಿಲ್ಲ. ಇಷ್ಟನ್ನಾದರೂ ಸರ್ಕಾರ ಕೂಡಲೇ ನೀಡಬೇಕು. ವ್ಯಾಪಾರಿಗಳ ಜೀವನೋಪಾಯಕ್ಕೆ ಪರಿಹಾರ ನೀಡಬೇಕು. ಇಷ್ಟು ಮಾತ್ರವಲ್ಲ. ಸರ್ಕಾರ ಅವರ ಮಕ್ಕಳಿಗೆ ಉತ್ತಮ ಸಾರ್ವಜನಿಕ ಶಿಕ್ಷಣ, ಆನ್‌ಲೈನ್ ಕ್ಲಾಸ್‌ಗಳಿಗಾಗಿ ಉಚಿತ ಲ್ಯಾಪ್‌ಟಾಪ್ ಹಾಗು ಡೇಟಾ ವ್ಯವಸ್ಥೆ ನೀಡಬೇಕು. ಬಾಡಿಗೆ ಸಮಸ್ಯೆ ಪರಿಹರಿಸಲು ಉತ್ತಮ ಮತ್ತು ಕಡಿಮೆ ಬಾಡಿಗೆಯ ಮನೆಗಳನ್ನು ನಿರ್ಮಿಸಿ ಕೊಡಬೇಕು ಅಥವಾ ಕಡಿಮೆ ದರದಲ್ಲಿ ಉತ್ತಮ ವಸತಿಸೌಕರ್ಯ ನೀಡಬೇಕು.
ಬೀದಿ ವ್ಯಾಪಾರಿಗಳಿದ್ದರೆ ನಗರದ ಇತರೆ ಬಡವರಿಗೆ, ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ, ಉತ್ತಮ ಸರಕುಗಳು ಮತ್ತು ಸೇವೆಗಳು ದೊರೆಯುತ್ತವೆ. ಅವರಿಂದ ಸಣ್ಣ ಹೋಲ್‌ಸೇಲ್ ವ್ಯಾಪಾರಿಗಳು ಸಹ ಬದುಕುತ್ತಾರೆ. ಬೀದಿ ವ್ಯಾಪಾರದ ವ್ಯವಸ್ಥೆ ನಿರುದ್ಯೋಗ ನಿವಾರಣೆಗೂ ಸಹಕಾರಿಯಾಗಿದೆ. ಹಲವು ವಯಸ್ಸಾದ, ಹೆಚ್ಚು ಓದುಬರಹ ಬಲ್ಲದ ಅಸಂಘಟಿತ ಕಾರ್ಮಿಕರು ಸುಲಭವಾಗಿ ಬೀದಿ ವ್ಯಾಪಾರ ಮಾಡಬಹುದು. ಬೀದಿ ವ್ಯಾಪಾರ ನಮ್ಮ ನಗರಗಳ ಸಂಸ್ಕೃತಿಯ ಭಾಗ. ಅದನ್ನು ಉಳಿಸುವುದು ನಮ್ಮ ನಿಮ್ಮ ಹಾಗು ಸರ್ಕಾರದ ಜವಾಬ್ದಾರಿ ಕೂಡ ಆಗಿದೆ. ಆದರೆ, ಸಣ್ಣ ರೈತರನ್ನು ಬಲಿಕೊಟ್ಟು ಅದಾನಿ-ಅಂಬಾನಿ ಪರ ಇರುವ ಸರ್ಕಾರ ಬೀದಿ ವ್ಯಾಪಾರಿಗಳ ಸಂಕಷ್ಟಗಳಿಗೆ ಸ್ಪಂದಿಸುತ್ತದೆಯೇ? ಆದರೆ ಬೆಂಗಳೂರಿನ ಜನಸಾಮಾನ್ಯರು ಬೀದಿ ವ್ಯಾಪಾರಿಗಳ ಪರವಾಗಿ ನಿಲ್ಲಲು ಸಾಧ್ಯ. ಬೆಂಗಳೂರು ಬಿಗ್ ಬ್ಯಾಸ್ಕೆಟ್ ಜೊತೆಗಿದೆಯೋ ಅಥವಾ ಬೀದಿ ವ್ಯಾಪಾರಸ್ಥರ ಜೊತೆಗಿದೆಯೋ ನೋಡಬೇಕು.

ವಿನಯ್ ಕೂರಗಾಯಲ ಶ್ರೀನಿವಾಸ
ವಕೀಲರು ಮತ್ತು ಬೀದಿ ವ್ಯಾಪಾರಿಗಳ ಸಂಘದ ಮುಖಂಡರು. ಆಲ್ಟರ್‍ನೇಟಿವ್ ಲಾ ಫೋರಂನಲ್ಲಿ ತೊಡಗಿಸಿಕೊಂಡಿರುವ ವಿನಯ್ ಹಲವು ಹೋರಾಟಗಳಲ್ಲಿ ಭಾಗಿಯಾಗಿರುವುದಲ್ಲದೆ, ಸಂವಿಧಾನದ ಪ್ರಚಾರಕ್ಕಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


