ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನಿಗೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ವು ಸೆಪ್ಟೆಂಬರ್ 17 ನ್ನು ‘ಕರಾಳ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿದೆ ಎಂದು ಪಕ್ಷದ ಮುಖಂಡರು ಭಾನುವಾರ ತಿಳಿಸಿದ್ದಾರೆ.
ಪಕ್ಷದ ಅಧ್ಯಕ್ಷ ಸುಖಬೀರ್ ಬಾದಲ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಗುರುದ್ವಾರದ ರಕಾಬ್ ಗಂಜ್ ಸಾಹಿಬ್‌ನಿಂದ ನವದೆಹಲಿಯ ಸಂಸತ್ತಿನವರೆಗೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ರೈತರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಮಸೂದೆ 2021; ಕೃಷಿಗೆ ಮತ್ತು ವಿದ್ಯುತ್ ವಲಯದ ಕಾರ್ಮಿಕರಿಗೆ ಮಾರಕ
ಪಕ್ಷದ ಹಿರಿಯ ನಾಯಕ ದಲ್ಜಿತ್ ಚೀಮಾ ಮಾಧ್ಯಮಗಳ ಜೊತೆ ಮಾತನಾಡಿ, “ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪಂಜಾಬ್ ರೈತರೊಂದಿಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಮಂತ್ರಿ ಸ್ಥಾನ ತ್ಯಾಗ ಮಾಡಿದ ಏಕೈಕ ರಾಜಕೀಯ ಪಕ್ಷ ಅಕಾಲಿ ದಳವಾಗಿದ್ದು, ರೈತರ ಪರವಾಗಿ ಪಕ್ಷವು ಇದುವರೆ ಬಂಡೆಯಂತೆ ನಿಂತಿದೆ” ಎಂದು ಅವರು ಹೇಳಿದ್ದಾರೆ.
ಅಕಾಲಿದಳ ಪಕ್ಷವು ಕರಾಳ ಕಾನೂನುಗಳನ್ನು ರದ್ದುಗೊಳಿಸದವರೆಗೂ ಇದನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.
ಕಳೆದ ವರ್ಷ ಇದೇ ದಿನ ಪಕ್ಷದ ನಾಯಕರುಗಳಾದ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಸುಖ್ಬೀರ್ ಬಾದಲ್ ಅವರು ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳನ್ನು ಅಂಗೀಕರಿಸಿದ್ದನ್ನು ವಿರೋಧಿಸಿದ್ದರು. ಅಲ್ಲದೆ ಅವರು ಮಸೂದೆಗಳ ವಿರುದ್ಧ ಮತ ಚಲಾಯಿಸಿದ್ದರು.
ಕೃಷಿ ಕಾನೂನನ್ನು ವಿರೋಧಿಸಿ ಅಕಾಲಿದಳದ ಸಂಸದೆ ಹರ್ಸಿಮ್ರತ್ ಕೌರ್ ಒಕ್ಕೂಟ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದ್ದು ಮಾತ್ರವಲ್ಲದೆ, ಪಕ್ಷವು ಬಿಜೆಪಿ ನೇತೃತ್ವದ NDA ಮೈತ್ರಿ ಕೂಟದಿಂದ ಹೊರ ಬಂದಿತ್ತು.
ಇದನ್ನೂ ಓದಿ: ನಾಳೆಯಿಂದ ಜಂತರ್ ಮಂತರ್‌ನಲ್ಲಿ ಕಿಸಾನ್ ಪಂಚಾಯತ್: ಕೃಷಿ ಕಾಯ್ದೆ ಹಿಂಪಡೆಯಲು ಪಟ್ಟು


