ಹೆಚ್ಚುತ್ತಿರುವ ವ್ಯಸನ, ಹಣ ವರ್ಗಾವಣೆ ಮತ್ತು ಆರ್ಥಿಕ ವಂಚನೆ ಪ್ರಕರಣಗಳನ್ನು ತಡೆಯುವ ಗುರಿಯನ್ನು ಹೊಂದಿರುವ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ,2025 ಬುಧವಾರ (ಆ.20) ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.
ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವೆ ಅಶ್ವಿನಿ ವೈಷ್ಣವ್ ಅವರು ಮಸೂದೆಯನ್ನು ಮಂಡಿಸಿ ವಿವರಣೆ ನೀಡಿದರು. ಬಳಿಕ, ಧ್ವನಿ ಮತದ ಮೂಲಕ ಕೆಳಮನೆಯಲ್ಲಿ ಮಸೂದೆ ಅಂಗೀಕಾರಗೊಂಡಿತು.
ಮಸೂದೆ ಅಂಗೀಕಾರಗೊಂಡ ಕೂಡಲೇ, ಪ್ರತಿಪಕ್ಷಗಳ ಗದ್ದಲ ಹಿನ್ನೆಲೆ ಸ್ಪೀಕರ್ ಕಲಾಪವನ್ನು ಮುಂದೂಡಿದರು. ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿತು.
ಆನ್‌ಲೈನ್ ಹಣದ ಆಟಗಳಿಗೆ ಸಂಬಂಧಿಸಿದ ಜಾಹೀರಾತನ್ನು ನಿಷೇಧಿಸುವುದು, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಅಂತಹ ಯಾವುದೇ ಆಟಗಳಿಗೆ ಹಣಕಾಸು ಒದಗಿಸುವುದು ಅಥವಾ ವರ್ಗಾಯಿಸುವುದನ್ನು ನಿರ್ಬಂಧಿಸುವ ಈ ಮಸೂದೆ ಹೊಂದಿದೆ ಎಂದು ಸಚಿವ ವೈಷ್ಣವ್ ಹೇಳಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಆನ್‌ಲೈನ್ ಫ್ಯಾಂಟಸಿ ಕ್ರೀಡೆಗಳಿಂದ ಆನ್‌ಲೈನ್ ಜೂಜಾಟ (ಪೋಕರ್, ರಮ್ಮಿ ಮತ್ತು ಇತರ ಕಾರ್ಡ್ ಆಟಗಳು) ಮತ್ತು ಆನ್‌ಲೈನ್ ಲಾಟರಿಗಳವರೆಗೆ ಎಲ್ಲಾ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟ ಚಟುವಟಿಕೆಗಳನ್ನು ಈ ಮಸೂದೆಯು ನಿಷೇಧಿಸುತ್ತದೆ.
ಈ ಕ್ರಮವು ಜಾಗತಿಕ ಹೂಡಿಕೆದಾರರ ಗಮನ ಸೆಳೆದಿರುವ ಮತ್ತು ಡ್ರೀಮ್11, ಗೇಮ್ಸ್24X7 ಮತ್ತು ಮೊಬೈಲ್ ಪ್ರೀಮಿಯರ್ ಲೀಗ್‌ನಂತಹ ಫ್ಯಾಂಟಸಿ ಕ್ರೀಡಾ ಅಪ್ಲಿಕೇಶನ್‌ಗಳನ್ನು ಪೋಷಿಸಿದ ದೇಶದ 3.8 ಬಿಲಿಯನ್ ಡಾಲರ್ ಗೇಮಿಂಗ್ ಉದ್ಯಮಕ್ಕೆ ಹೊಡೆತ ನೀಡಲಿದೆ ಎಂದು ವರದಿ ಹೇಳಿದೆ.
ಈ ಮಸೂದೆಯು ಆನ್‌ಲೈನ್ ಹಣದ ಗೇಮಿಂಗ್ ಅನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡುತ್ತದೆ. ಇದರಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ ರೂ.1 ಕೋಟಿಯವರೆಗೆ ದಂಡ ವಿಧಿಸಬಹುದು.


