ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 82 ಕಾರ್ಯದರ್ಶಿಗಳಲ್ಲಿ, ಕೇವಲ ನಾಲ್ವರು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ರಾಜ್ಯಸಭೆಗೆ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು.
ಎಲ್ಲ ಸಚಿವಾಲಯಗಳಲ್ಲಿ ಎಸ್‌ಸಿ / ಎಸ್‌ಟಿಗೆ ಸೇರಿದ ಕಾರ್ಯದರ್ಶಿಗಳ ಸಂಖ್ಯೆ ಎಷ್ಟು ಎಂದು ಸಿಪಿಐ(ಎಂ) ಸಂಸದ ಕೆ.ಸೋಮಪ್ರಸಾದ್ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಜಿತೇಂದ್ರ ಸಿಂಗ್, ವಿಕಲಚೇತನರ ಸಬಲೀಕರಣ ಇಲಾಖೆ, ಭೂ ಸಂಪನ್ಮೂಲ ಇಲಾಖೆ, ಔಷಧ ಇಲಾಖೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಎಸ್‌ಸಿ / ಎಸ್‌ಟಿ ಸಮುದಾಯಕ್ಕೆ ಸೇರಿದ ತಲಾ ಒಬ್ಬೊಬ್ಬ ಕಾರ್ಯದರ್ಶಿ ಇದ್ದಾರೆ. ಅಂದರೆ ಕೇವಲ ನಾಲ್ಕು ಇಲಾಖೆಗಳಲ್ಲಿ ಕೇವಲ ನಾಲ್ಕು ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸೇರಿದ ಕಾರ್ಯದರ್ಶಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ದೇಶದ ಪ್ರತಿಷ್ಠಿತ 20 IIM ಗಳಲ್ಲಿ ಕೇವಲ 11 ಜನ ದಲಿತ ಪ್ರಾಧ್ಯಾಪಕರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ರಮೇಶ್ ಪ್ರೋಖ್ರಿಯಾಲ್ ಉತ್ತರಿಸಿದ್ದಾರೆ. ಅತಿದೊಡ್ಡ IIM ಗಳು ಸೇರಿದಂತೆ 12 IIM ಗಳಲ್ಲಿ ಒಬ್ಬರೂ ದಲಿತ ಪ್ರಾಧ್ಯಾಪಕರಿಲ್ಲ ಎಂಬ ಸತ್ಯ ಬೆಳಕಿಗೆ ಬಂದಿದೆ.
ಈ ಬೆಳವಣಿಗೆಯ ನಂತರ ದೇಶದ ಎಲ್ಲಾ IIM ಗಳು ಸಹ ನೇಮಕಾತಿಯಲ್ಲಿ ಮೀಸಲಾತಿ ರೋಸ್ಟರ್ ಅನುಸರಿಸುವಂತೆ ಎಂಎಚ್‌ಆರ್‌ಡಿ ಸಚಿವರು ಸುತ್ತೋಲೆ ಹೊರಡಿಸಿದ್ದಾರೆ. 2019ರ ಕಾಯ್ದೆಯಂತೆ ಎಸ್ಸಿ 15%, ಎಸ್ಟಿ 7.5%, ಒಬಿಸಿ 27% ಮತ್ತು ಇತರ ಆರ್ಥಿಕ ಹಿಂದುಳಿದ ಸಮುದಾಯಗಳಿಗೆ 10% ಮೀಸಲಾತಿಯನ್ನು ಕಡ್ಡಾಯಗೊಳಿಸಬೇಕಾಗಿದೆ.
ಆದರೆ IIM ಗಳ ನಿರ್ದೇಶಕರು ಕೇಂದ್ರದ ಈ ನಿರ್ಧಾರವನ್ನು ಪಾಲಿಸಲು ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
2011 ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ 20.14 ಕೋಟಿ ಜನ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಶೇ. 16.6 ರಷ್ಟು ದಲಿತರು, ಶೇ. 8.6 ರಷ್ಟು ಎಸ್‌ಟಿ ಜನರಿದ್ದಾರೆ ಎಂದು ಮಾಹಿತಿ ಲಭ್ಯವಿದೆ.


