ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ನಾಯಕ ಸಂಜಯ್ ರಾವುತ್ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಆರ್‌ಎಸ್‌ಎಸ್ ನಾಯಕ ವಿ.ಡಿ.ಸಾವರ್ಕರ್ ಕುರಿತು ರಾಹುಲ್ ಆಡಿದ್ದ ಮಾತುಗಳಿಂದಾಗಿ ಮೈತ್ರಿ ಪಕ್ಷಗಳಲ್ಲಿ ಒಡಕು ಮೂಡಿಸುತ್ತಿದೆ ಎಂದು ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಸಂಜಯ್ ರಾವುತ್ ಅವರು ರಾಹುಲ್ ಗಾಂಧಿಯವರನ್ನು ಹೊಗಳಿದ್ದಾರೆ.
“ನನಗೆ ಕರೆ ಮಾಡಿ ಮಾತನಾಡಿರುವುದು ರಾಹುಲ್ ಗಾಂಧಿಯವರ ಮಾನವೀಯತೆಯನ್ನು ತೋರುತ್ತದೆ. ಬಿಡುವಿಲ್ಲದ ತಮ್ಮ ಯಾತ್ರೆಯ ನಡುವೆಯೂ ತಮ್ಮ ರಾಜಕೀಯ ಸಹೋದ್ಯೋಗಿಗೆ ಕಾಳಜಿ ವ್ಯಕ್ತಪಡಿಸಿದ್ದಾರೆ” ಎಂದು ರಾವುತ್ ಮೆಚ್ಚುಗೆ ಸೂಚಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿದ್ದಾಗಲೂ ರಾಹುಲ್ ರಾತ್ರಿ ನನಗೆ ಕರೆ ಮಾಡಿದರು. ಅವರು ನನ್ನ ಆರೋಗ್ಯದ ಬಗ್ಗೆ ಕೇಳಿದರು. ‘ನಿಮ್ಮ ಬಗ್ಗೆ ನಮಗೆ ಚಿಂತೆಯಾಗಿದೆ’ ಎಂದರು. ರಾಜಕೀಯ ಮಿತ್ರನನ್ನು ನಕಲಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ದುಃಖಿಸಲು ಸಾಧ್ಯವಾಗುವುದು ಮನುಷ್ಯನಿಗೆ ಮಾತ್ರ. 110 ದಿನಗಳ ಕಾಲ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು” ಎಂದು ಸಂಜಯ್ ರಾವುತ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇಂಗ್ಲಿಷ್‌ನಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ರಾವುತ್, “ಕೆಲವು ವಿಷಯಗಳ ಬಗ್ಗೆ ಬಲವಾದ ಭಿನ್ನಾಭಿಪ್ರಾಯಗಳ ನಡುವೆಯೂ, ನಿಮ್ಮ ರಾಜಕೀಯ ಸಹೋದ್ಯೋಗಿಯನ್ನು ವಿಚಾರಿಸುವುದು ಮಾನವೀಯತೆಯ ಸಂಕೇತವಾಗಿದೆ. ರಾಜಕೀಯದ ಕಹಿ ಗಳಿಗೆಯಲ್ಲಿ, ಇಂತಹ ಕ್ರಿಯೆಗಳು ಅಪರೂಪವಾಗುತ್ತಿವೆ. ರಾಹುಲ್‌ಜಿ ತಮ್ಮ ಯಾತ್ರೆಯನ್ನು ಪ್ರೀತಿ ಮತ್ತು ಸಹಾನುಭೂತಿಯ ಮೇಲೆ ಕೇಂದ್ರೀಕರಿಸಿದ್ದಾರೆ. ಹೀಗಾಗಿ ಯಾತ್ರೆಗೆ ಭಾರೀ ಪ್ರತಿಕ್ರಿಯೆ ಸಿಗುತ್ತಿದೆ” ಎಂದು ರಾವುತ್ ಹೊಗಳಿದ್ದಾರೆ.
ಸಾವರ್ಕರ್ ಕುರಿತು ರಾಹುಲ್ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯನ್ನು ಮುರಿಯುವ ಬಗ್ಗೆ ಠಾಕ್ರೆ ಬಣವು ಸುಳಿವು ನೀಡಿತ್ತು. ಇದಾದ ನಂತರ ರಾಹುಲ್ ಗಾಂಧಿಯವರ ಕಾಳಜಿಯ ಬಗ್ಗೆ ಶಿವಸೇನಾ ನಾಯಕ ಸಂಜಯ್ ರಾವುತ್ ಮಾಡಿರುವ ಪೋಸ್ಟ್- ಈ ವಿವಾದವನ್ನು ಸಮತೂಗಿಸುವ ಸೂಚನೆಯಂತೆ ಕಾಣುತ್ತಿದೆ.
ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರಕ್ಕೆ ಕಾಲಿಟ್ಟ ಬಳಿಕ ರಾಹುಲ್ ಗಾಂಧಿಯವರು ಮಾತನಾಡುತ್ತಾ, “ವಿ.ಡಿ.ಸಾವರ್ಕರ್‌ರವರು ಜೈಲಿನಲ್ಲಿದ್ದಾಗ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು” ಎಂದು ಟೀಕಿಸಿದ್ದರು. “ಬ್ರಿಟಿಷರಿಗೆ ಕ್ಷಮೆ ಕೋರುವ ಮೂಲಕ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಸರ್ದಾರ್ ಪಟೇಲ್ ಅವರಂತಹ ಸ್ವಾತಂತ್ರ್ಯದ ಐಕಾನ್‌ಗಳಿಗೆ ಸಾವರ್ಕರ್ ದ್ರೋಹ ಮಾಡಿದ್ದರು” ಎಂದು ಬೇಸರ ವ್ಯಕ್ತಪಡಿಸಿದ್ದರು.
ಈ ಹೇಳಿಕೆಗಳು ಶಿವಸೇನೆಯ ಎರಡೂ ಬಣಗಳನ್ನು ಕೆರಳಿಸಿತು. ಕಾಂಗ್ರೆಸ್‌ನೊಂದಿಗಿನ ಸಂಬಂಧದ ಬಗ್ಗೆ ಪ್ರತಿಸ್ಪರ್ಧಿ ಏಕನಾಥ್ ಶಿಂಧೆ ಬಣ ಕುಟುಕಿತ್ತು. ಕಾಂಗ್ರೆಸ್ ಜೊತೆಗಿನ ಮೈತ್ರಿ ವಿಚಾರವಾಗಿ ಉದ್ಧವ್ ಠಾಕ್ರೆ ಬಣವು ಟೀಕೆಯನ್ನು ಎದುರಿಸಿತು.
ಉದ್ಧವ್ ಠಾಕ್ರೆ ಪ್ರತಿಕ್ರಿಯಿಸಿ, “ನಮ್ಮ ಪಕ್ಷವು ಸಾವರ್ಕರ್ ಬಗ್ಗೆ ಅಪಾರವಾದ ಗೌರವ ಹೊಂದಿದೆ” ಎಂದಿದ್ದರು. ಎನ್‌ಡಿಟಿವಿ ಜೊತೆ ಮಾತನಾಡಿದ್ದ ಸಂಜಯ್ ರಾವುತ್, “ಸಾವರ್ಕರ್ ಅವರ ವಿಷಯ ನಮಗೆ ಮುಖ್ಯವಾಗಿದೆ. ನಾವು ಸಾವರ್ಕರ್ ಸಿದ್ಧಾಂತವನ್ನು ನಂಬುತ್ತೇವೆ. ಕಾಂಗ್ರೆಸ್ ಈ ವಿಷಯವನ್ನು ತರಬಾರದಿತ್ತು” ಎಂದು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿರಿ: ಚಿಕ್ಕಮಗಳೂರು: ‘ಕಳ್ಳ’ ಎಂದು ಕರೆದು ಬಿಜೆಪಿ ಶಾಸಕರನ್ನು ಅಟ್ಟಾಡಿಸಿದ ಗ್ರಾಮಸ್ಥರು!
ಪಕ್ಷದ ಮತ್ತೊಬ್ಬ ನಾಯಕ, ಶಿವಸೇನಾ ಸಂಸದ ಅರವಿಂದ್ ಸಾವಂತ್ ಒಂದು ಹೆಜ್ಜೆ ಮುಂದೆ ಹೋಗಿ, “ನಾವು ಎಂವಿಎ (ಮಹಾ ವಿಕಾಸ್ ಅಘಾಡಿ ಒಕ್ಕೂಟದಲ್ಲಿ) ಮುಂದುವರಿಯುವುದಿಲ್ಲ ಎಂದು ಸಂಜಯ್ ರಾವುತ್ ಹೇಳಿಕೆ ನೀಡಿದ್ದಾರೆ. ಇದು ಪಕ್ಷದಿಂದ ನೀಡಲಾದ ಗಂಭೀರ ಪ್ರತಿಕ್ರಿಯೆಯಾಗಿದೆ. ಉದ್ಧವ್ ಠಾಕ್ರೆ ಅವರು ಶೀಘ್ರದಲ್ಲೇ ಹೇಳಿಕೆ ನೀಡಲಿದ್ದಾರೆ” ಎಂದಿದ್ದರು.
ವಿವಾದ ಭುಗಿಲೆದ್ದ ಬಳಿಕ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, “ರಾಹುಲ್ ಗಾಂಧಿ ಯಾರನ್ನೂ ಅವಮಾನಿಸಿಲ್ಲ. ಆದರೆ ಐತಿಹಾಸಿಕ ಸತ್ಯವನ್ನು ಮಾತ್ರ ಹೇಳಿದ್ದಾರೆ. ನಾನು ಇಂದು ಸಂಜಯ್ ರಾವುತ್ ಅವರೊಂದಿಗೆ ಮಾತನಾಡಿದ್ದೇನೆ. ನಾವು ಭಿನ್ನಾಭಿಪ್ರಾಯವನ್ನು ಒಪ್ಪಿಕೊಳ್ಳುತ್ತೇವೆ. ಇದು ಮಹಾ ವಿಕಾಸ್ ಅಘಾಡಿಯನ್ನು ದುರ್ಬಲಗೊಳಿಸುತ್ತದೆ ಎಂಬುದು ಸುಳ್ಳು. ಈ ಹೇಳಿಕೆ ಮೈತ್ರಿ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದರು.


