ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಕೊಂಡಿರುವ ರಾಜ್ಯ ಸರ್ಕಾರ 2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಧ್ಯಂತರ ಸೆಮಿಸ್ಟರ್ (intermediate Semester) ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸುವುದಾಗಿ ಪ್ರಕಟಿಸಿದೆ. ಜೊತೆಗೆ, ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಸೆಮಿಸ್ಟರ್ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಯುಜಿಸಿ ಮಾರ್ಗಸೂಚಿ ಅನ್ವಯ ಸೆಪ್ಟೆಂಬರ್ ಅಂತ್ಯದೊಳಗೆ ಪರೀಕ್ಷೆ ನಡೆಸಲೂ ನಿರ್ಧರಿಸಿದೆ.
Next academic session in the universities will be through online classes tentatively from September 1, 2020, for the first and higher semester and offline (classroom) teaching from October 1 or as may be directed by state government/MHA/UGC guidelines: Karnataka government https://t.co/QTJbXCXH8Q
— ANI (@ANI) July 10, 2020
ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯವನ್ನು ಗಣನೆಗೆ ತೆಗೆದುಕೊಂಡು ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳ ಜತೆ ನಿರಂತರ ಸಮಾಲೋಚನೆ ನಡೆಸಿದ ನಂತರ ಈ ಮಹತ್ವದ ನಿರ್ಧಾರ ಕೈಕೊಳ್ಳಲಾಗಿದೆ. ತೀರ್ಮಾನವನ್ನು ಕೈಗೊಳ್ಳುವ ಮುನ್ನ ಯುಜಿಸಿ ಮಾಡಿರುವ ಶಿಫಾರಸುಗಳು ಹಾಗೂ ಅದರ ನಿಯಮಾವಳಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (2019-20) ಮಾತ್ರ ಸೀಮಿತವಾಗಿರುತ್ತದೆ. ಸರಕಾರದ ಈ ನಿರ್ಧಾರಕ್ಕೆ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ವಜೂಭಾಯಿ ವಾಲ ಅವರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಕೋವಿಡ್ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಸಕಾಲಕ್ಕೆ ತರಗತಿಗಳು ನಡೆಸಲು ಸಾಧ್ಯವಾಗಲಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಶಿಕ್ಷಣ ನೀಡಿದ್ದು, ಒಳ್ಳೆಯ ಪ್ರತಿಕ್ರಿಯೆ ಕೂಡ ಬಂದಿದೆ. ಸಾಧ್ಯವಾದಷ್ಟು ಎಲ್ಲರನ್ನೂ ತಲುಪಲು ಪ್ರಾಮಾಣಿಕ ಪ್ರಯತ್ನ ನಡೆಸಲಾಯಿತು. ಇದರ ನಡುವೆ ಕೆಲವು ದಿನಗಳು ತರಗತಿಗಳನ್ನು ನಡೆಸಿ, ಪರೀಕ್ಷೆ ಮಾಡುವ ಚಿಂತನೆಯೂ ಇತ್ತು. ಆದರೆ, ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣಕ್ಕೆ ಅವೆಲ್ಲವನ್ನೂ ಕೈಬಿಟ್ಟು ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ನಿರ್ಧರಿಸಲಾಯಿತು. ಅಂತಿಮ ವರ್ಷ/ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ, ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಪರೀಕ್ಷೆಗಳನ್ನು (ಆನ್‌ಲೈನ್/ಆಫ್‌ಲೈನ್) ನಡೆಸಲು ಆಯಾ ವಿಶ್ವವಿದ್ಯಾಲಯಗಳಿಗೇ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ಮಧ್ಯಂತರ ಸೆಮಿಸ್ಟರ್/ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನ (internal marks) ಮತ್ತು ಹಿಂದಿನ ಸೆಮಿಸ್ಟರ್/ವರ್ಷದ ಅಂಕಗಳ (50:50) ಸಮಗ್ರ ಮೌಲ್ಯಮಾಪನದ (comprehensive evaluation) ಆಧಾರದ ಮೇಲೆ ತೇರ್ಗಡೆ ಮಾಡಲಾಗುತ್ತದೆ. ಹಿಂದಿನ ವರ್ಷದ ಅಂಕಗಳು ಇಲ್ಲದ ವಿದ್ಯಾರ್ಥಿಗಳನ್ನು (ಉದಾ: ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳು) ಪೂರ್ಣ ಅಂತರಿಕ ಮೌಲ್ಯಮಾಪನದ ಮೂಲಕವೇ ಉತ್ತೀರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದರ ನಡುವೆಯೂ ತಮ್ಮ ಅಂಕಗಳನ್ನು ಉತ್ತಮಗೊಳಿಸಿಕೊಳ್ಳಬೇಕೆನ್ನುವ ವಿದ್ಯಾರ್ಥಿಗಳು ಸೆಮಿಸ್ಟರ್‌ನಲ್ಲಿ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗುವುದು. ಬ್ಯಾಕ್‌ಲಾಗ್ ವಿಷಯಗಳ ಕ್ಯಾರಿ ಓವರ್‌ಗೂ ಅವಕಾಶ ಇರುತ್ತದೆ ಎಂದು ಡಿಸಿಎಂ ತಿಳಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ಮತ್ತು ಅವರ ಉದ್ಯೋಗ- ಮತ್ತಿತರ ಭವಿಷ್ಯಕ್ಕೆ ಧಕ್ಕೆಯಾಗದಂತೆ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಉನ್ನತ ಶಿಕ್ಷಣ ಪದ್ಧತಿಯಲ್ಲಿ ಶೈಕ್ಷಣಿಕ ಮೌಲ್ಯಮಾಪನ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ. ಉದ್ಯೋಗದಾತ ಕಂಪನಿಗಳು ಕೂಡ ಉದ್ಯೋಗಾಕಾಂಕ್ಷಿಗಳ ಶೈಕ್ಷಣಿಕ ಗುಣಮಟ್ಟ ಹಾಗೂ ಅವರು ಗಳಿಸಿರುವ ಶ್ರೇಣಿಯನ್ನು ಗುರುತಿಸುತ್ತವೆ. ಇವರಿಗೆ ಪರೀಕ್ಷೆ ನಡೆಸದಿದ್ದರೆ ಭವಿಷ್ಯದಲ್ಲಿ ತೊಂದರೆಯಾಗುವುದು ಖಚಿತ. ಹೀಗಾಗಿ ಈ ಪರೀಕ್ಷೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಎಲ್ಲ ವಿವಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
2020-21ರ ಶೈಕ್ಷಣಿಕ ಸಾಲಿನ ಮೊದಲ ಸೆಮಿಸ್ಟರ್’ಗೆ ಸೆಪ್ಟೆಂಬರ್ 1 ರಿಂದಲೇ ಆನ್‌ಲೈನ್ ತರಗತಿಗಳು ಹಾಗೂ ಅಕ್ಟೋಬರ್ 1 ರಿಂದ ನೇರ ತರಗತಿಗಳು ಆರಂಭವಾಗುತ್ತವೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಗಳು, ಕಾಲೇಜುಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಕೊರೊನಾ ಇಡೀ ಶೈಕ್ಷಣಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡಿದೆ. ವಿದ್ಯಾರ್ಥಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಅವರ ಭವಿಷ್ಯದ ಬಗ್ಗೆಯೂ ನಿರ್ಧರಿಸುವ ಸವಾಲು ಸರಕಾರದ ಮುಂದಿತ್ತು. ಶಿಕ್ಷಣ ತಜ್ಞರು, ವಿವಿಗಳ ಕುಲಪತಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಇದನ್ನೂ ಓದಿ: ಸೆಪ್ಟಂಬರ್‌ನಲ್ಲಿ ಸ್ನಾತಕೋತ್ತರ ಹಾಗೂ ಪದವಿ ಪರೀಕ್ಷೆಗಳು: ಯುಜಿಸಿ


