ಬುಧವಾರ (ಮೇ 7, 2025) ಬೆಳಗಿನ ಜಾವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ವಿವಿಧ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ, ಭಾರತವು ಅಮೆರಿಕ, ಯುಕೆ, ಸೌದಿ ಅರೇಬಿಯಾ, ಯುಎಇ ಮತ್ತು ರಷ್ಯಾಗೆ ದಾಳಿ ಬಗ್ಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
ನಿಖರವಾಗಿ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತಿಳಿಸಿದೆ. ಮಾಹಿತಿ ಪಡೆದ ಎಲ್ಲಾ ಐದು ದೇಶಗಳ ನಾಯಕರು ಕಳೆದ ಎರಡು ವಾರಗಳಿಂದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ವರದಿಗಳು ಹೇಳಿವೆ.
ಭಾರತದ ಆಪರೇಷನ್ ಸಿಂಧೂರ ಹಿನ್ನೆಲೆ, ಇಂದಿಗೆ (ಬುಧವಾರ) ನಿಗದಿಯಾಗಿದ್ದ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರ ಭಾರತ ಭೇಟಿ ಕೊಂಚ ತಡವಾಗಬಹುದು. ಆದರೆ, ಅವರು ಪ್ರವಾಸ ರದ್ದುಗೊಳಿಸಿಲ್ಲ ಎಂದು ಇಂದು ಬೆಳಿಗ್ಗೆ ಮಾಧ್ಯಮಗಳು ವರದಿ ಮಾಡಿತ್ತು. ಆದರೆ, ಅವರು ಭಾರತಕ್ಕೆ ಆಗಮಿಸಿದ ಬಗ್ಗೆ ಮಾಹಿತಿ ದೊರೆತಿಲ್ಲ.
ಕೇಂದ್ರೀಕೃತ, ನಿಖರ ದಾಳಿ
“ನಮ್ಮ ಕ್ರಮ ನಿರ್ದಿಷ್ಟ, ನಿಖರ, ವಿವೇಚನಾಭರಿತ ಮತ್ತು ಉದ್ವಿಗ್ನತೆ ಹೆಚ್ಚಿಸುವ ಉದ್ದೇಶವಲ್ಲದ್ದು. ಯಾವುದೇ ಪಾಕಿಸ್ತಾನಿ ನಾಗರಿಕ, ಅವರ ಆರ್ಥಿಕ ಅಥವಾ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ. ನಿಖರವಾಗಿ ಗೊತ್ತಿದ್ದ ಭಯೋತ್ಪಾದಕ ನೆಲೆಗಳನ್ನು ಮಾತ್ರ ಗುರಿಯಾಗಿಸಲಾಗಿದೆ” ಎಂದು ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಆಪರೇಷನ್ ಸಿಂಧೂರ ಕುರಿತು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
“ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪಾಕಿಸ್ತಾನ ಕಳೆದ 15 ದಿನಗಳಿಂದ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದೆ. ಭಾರತದ ವಿರುದ್ಧ ಸುಳ್ಳು ಕಾರ್ಯಾಚರಣೆಯ ಆರೋಪಗಳನ್ನು ಮಾಡಿದೆ” ಎಂದಿದೆ.
ಭಾರತದ ಕ್ರಮಗಳ ಬಗ್ಗೆ ಎನ್‌ಎಸ್‌ಎ ಅಜಿತ್ ದೋವಲ್ ಅವರು ಅಮೆರಿಕದ ಪ್ರಭಾರ ಎನ್‌ಎಸ್‌ಎ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಮಾತನಾಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಮಾರ್ಕೊ ರೂಬಿಯೊ, “ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ಸಂಘರ್ಷ ಶೀಘ್ರ ಕೊನೆಗೊಳ್ಳಲಿ ಎಂದು ಆಶಿಸುತ್ತೇವೆ. ಭಾರತ-ಪಾಕಿಸ್ತಾನದ ನಾಯಕರು ಮಾತುಕತೆ ಮೂಲಕ ಇದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲಿದ್ದಾರೆ” ಎಂದಿದ್ದಾರೆ.
I am monitoring the situation between India and Pakistan closely. I echo @POTUS's comments earlier today that this hopefully ends quickly and will continue to engage both Indian and Pakistani leadership towards a peaceful resolution.
— Secretary Marco Rubio (@SecRubio) May 6, 2025
“ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಇಂದು ನಿನ್ನೆಯದ್ದಲ್ಲ. ಆಗಾಗ ಅವರ ನಡುವೆ ಸಂಘರ್ಷ ಉಂಟಾಗುತ್ತದೆ ಮತ್ತು ಅವರು ಅದನ್ನು ಬಗೆಹರಿಸಿಕೊಂಡು ಮುಂದುವರಿಯುತ್ತಾರೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದೆ ಹೇಳಿದ್ದರು. ಅದೇ ನಮ್ಮ ನಿಲುವು ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಬಗ್ಗೆ ಭಾರತ ಪಕ್ಕದ ಚೀನಾಗೆ ವಿವರಣೆ ನೀಡಿಲ್ಲ. ಭಾರತದ ದಾಳಿಯನ್ನು ಚೀನಾ ‘ವಿಷಾದನೀಯ’ ಎಂದಿದೆ.
“ಈಗ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ನಮಗೆ ಕಳವಳವಿದೆ. ಚೀನಾ ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ನೆರೆಯ ರಾಷ್ಟ್ರವಾಗಿದೆ. ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಎರಡೂ ಕಡೆಯವರು ಸಂಯಮವನ್ನು ಕಾಪಾಡಿಕೊಳ್ಳಬೇಕು. ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳಬಾರದು” ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಬುಧವಾರ ಬೆಳಿಗ್ಗೆ ಹೇಳಿದ್ದಾರೆ.
ಆಪರೇಷನ್ ಸಿಂಧೂರ | ಪತ್ರಿಕಾಗೊಷ್ಠಿಯಲ್ಲಿದ್ದ ಕರ್ನಲ್ ಸೋಫಿಯಾ, ವಿಂಗ್ ಕಮಾಂಡರ್ ವ್ಯೋಮಿಕಾ ಯಾರು?


