ಅಂತಾರಾಷ್ಟೀಯ ‘ಬೂಕರ್ ಪ್ರಶಸ್ತಿ’ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು 2025ರ ಮೈಸೂರು ದಸರಾ ಉದ್ಘಾಟಿಸಲು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದರ ವಿರುದ್ದ ಕೋಮುವಾದಿಗಳ ಅರಚಾಟ ಜೋರಾಗಿದೆ.
ಜಾಗತಿಕವಾಗಿ ಕನ್ನಡಕ್ಕೆ ಕೀರ್ತಿ ತಂದ ಶ್ರೇಷ್ಠ ಸಾಹಿತಿಯೊಬ್ಬರನ್ನು ಧರ್ಮ, ರಾಜಕೀಯ, ಕೋಮು ವಿಷದ ಮಾನದಂಡಗಳ ಮೂಲಕ ಅಳೆಯುವ ನೀಚ ರಾಜಕಾರಣ ಗರಿಗೆದರಿದೆ.
ಬಾನು ಮುಷ್ತಾಕ್ ಅವರ ಆಯ್ಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಾನು ಮುಷ್ತಾಕ್, ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.
ಮಂಗಳವಾರ (ಆ.26) ಕನ್ನಡ ಸಾಹಿತ್ಯ ಪರಿಷತ್‌ನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದಸರಾ ಉದ್ಘಾಟಿಸಲು ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.
“ಕನ್ನಡವನ್ನು ನನ್ನಷ್ಟು ಪ್ರೀತಿಸಿ, ನನ್ನಷ್ಟು ಬಳಕೆಗೆ ತನ್ನಿ, ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ. ಇಷ್ಟು ಸಾಧನೆ ಮಾಡಿದರೆ ನೀವು ನನ್ನ ಮೇಲೆ ಕೆಸರೆರಚಾಟ ಮಾಡುವ ಅರ್ಹತೆ ಪಡೆಯುತ್ತೀರಿ” ಎಂದು ತನ್ನ ಆಯ್ಕೆಯನ್ನು ವಿರೋಧಿಸುತ್ತಿರುವವರಿಗೆ ಹೇಳಿದ್ದಾರೆ.
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂಬ ಕೆಲ ರಾಜಕಾರಣಿಗಳ ಮಾತಿಗೆ ಪ್ರತಿಕ್ರಿಯಿಸಿದ ಅವರು, ಬೂಕರ್ ಪ್ರಶಸ್ತಿಗೆ ನನ್ನ ಪುಸ್ತಕ ಸಲ್ಲಿಕೆಯಾಗಿ ಪಟ್ಟಿಯಾದ ಸಂದರ್ಭದಲ್ಲಿ ಮೈಸೂರಿನ ನಿವಾಸಿಯಾದ ನನ್ನ ಗೆಳತಿ, ಲೇಖಕಿ ಮೀನಾ ಮೈಸೂರು ನನಗೆ ಕರೆ ಮಾಡಿ, “ನಾನು ನಿಮಗೆ ಬೂಕರ್ ಬರಲಿ ಎಂದು ಚಾಮುಂಡೇಶ್ವರಿಗೆ ಹರಕೆ ಕಟ್ಟಿದ್ದೇನೆ” ಎಂದು ಹೇಳಿದ್ದರು. ನಾನು ಬಹಳ ಸಂತೋಷದಿಂದ “ನನಗೂ ನಿಮಗೂ ಒಳ್ಳೆಯದಾಗಲಿ” ಎಂಬ ಮಾತನ್ನು ಹೇಳಿದ್ದೆ” ಎಂದಿದ್ದಾರೆ.
ಮುಂದುವರಿದು, “ಬೂಕರ್ ಬಂದ ಬಳಿಕ ನನಗೆ ಮೈಸೂರಿಗೆ ಹೋಗುವ ಅವಕಾಶ ಸಿಕ್ಕಿರಲಿಲ್ಲ. ಬಳಿಕ ‘ಮೈಸೂರು ಲಿಟ್ ಫೆಸ್ಟ್’ಗೆ ಹೋದಾಗ ಸುತ್ತೂರು ಮಠದ ಸ್ವಾಮಿಗಳು ಸಾಹಿತಿಗಳಿಗೆ ಉಪಹಾರ ಕೂಟ ಏರ್ಪಡಿಸಿದ್ದರು. ಅಲ್ಲಿ ಸಿಕ್ಕಿದ್ದ ಮೀನಾ, “ಇವತ್ತು ಚಾಮುಂಡಿ ಬೆಟ್ಟಕ್ಕೆ ಹೋಗಿ ನನ್ನ ಹರಕೆ ತೀರಿಸೋಣ” ಎಂದಿದ್ದರು. ಆದರೆ, ನಾನು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ಅದಕ್ಕೆ ಸಮಯ ಸಿಕ್ಕಿರಲಿಲ್ಲ. ಈಗ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ಮೈಸೂರಿಗೆ ಕರೆಸಿಕೊಳ್ಳುತ್ತಿದ್ದಾಳೆ” ಎಂದು ಹೇಳಿದ್ದಾರೆ.
ರಾಜಕಾರಣಿಗಳ ಟೀಕೆಗಳ ಬಗ್ಗೆ ಮಾತನಾಡಿದ ಅವರು, “ಯಾವ ವಿಚಾರದಲ್ಲಿ ರಾಜಕಾರಣ ಮಾಡಬೇಕು, ಯಾವ ವಿಚಾರದಲ್ಲಿ ಮಾಡಬಾರದು ಎಂಬ ಪ್ರಜ್ಞೆ ಸಕ್ರಿಯ ರಾಜಕಾರಣಿಗಳಿಗೆ ಇರಬೇಕು. ಬೂಕರ್ ಎನ್ನುವಂತಹ ಬಹುಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುವುದು ಸುಲಭದ ಮಾತಲ್ಲ. ಅದರ ಬಗ್ಗೆಯೂ ಒಂದಿಬ್ಬರು ಕೇವಲವಾಗಿ ಮಾತನಾಡುತ್ತಿದ್ದಾರೆ. ಅವರು ಮಾತನಾಡಲಿ, ನನಗೆ ಅದರ ಬಗ್ಗೆ ಬೇಸರಿವಿಲ್ಲ. ಏಕೆಂದರೆ, ಅವರು ಅವರ ಅರ್ಹತೆಗೆ ತಕ್ಕಂತೆ ಮಾತನಾಡುತ್ತಾರೆ” ಎಂದು ತಿರುಗೇಟು ನೀಡಿದ್ದಾರೆ.
“2023ರಲ್ಲಿ ನಾನು ಜನ ಸಾಹಿತ್ಯ ಸಮ್ಮೇಳನದಲ್ಲಿ ಆಡಿದ ಮಾತಿನ ಕೆಲ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನನ್ನ ವಿರುದ್ದ ದೊಡ್ಡ ಆರೋಪಗಳನ್ನು ಮಾಡಲಾಗುತ್ತಿದ್ದೆ. ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ದೂರ ಇಟ್ಟಿದ್ದಕ್ಕೆ ಪ್ರತಿರೋಧವಾಗಿ ಜನ ಸಾಹಿತ್ಯ ಸಮ್ಮೇಳನ ಮಾಡಲಾಗಿತ್ತು. ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ನಾನು ಮಹಿಳೆಯರು, ಅಲ್ಪ ಸಂಖ್ಯಾತರು ಮತ್ತು ತುಳಿತಕ್ಕೊಳಗಾದವರ ಪರ ಮಾತನಾಡಿದ್ದೆ” ಎಂದಿದ್ದಾರೆ.
“ನನ್ನ ಭಾಷಣದಲ್ಲಿ ಕನ್ನಡವನ್ನು ಭಾಷೆಯಾಗಿ ಬಳಸುವ ಬದಲು ಭಾವುಕವಾಗಿ ಬಳಸುತ್ತಿದ್ದೀರಿ. ದೇವತೆಯನ್ನಾಗಿ ಮಾಡಿ, ಮಂದಹಾಸದಲ್ಲಿದ್ದಾಗ ಅದಕ್ಕೆ ಕೈ ಮುಗಿದು ಬಂದರೆ ನಮ್ಮ ಕೆಲಸ ಮುಗಿಯಿತು ಎಂಬ ಭಾವನೆಯಲ್ಲಿ ಇದ್ದೀರಿ. ಭಾಷೆಯನ್ನು ಭಾಷೆಯಾಗಿ ಪರಿಗಣಿಸಿದಾಗ ನಾನೂ ಓದಬೇಕಾಗುತ್ತದೆ, ನೀವು ಓದಬೇಕಾಗುತ್ತದೆ. ನಮ್ಮ ಮಕ್ಕಳು ಕೂಡ ಓದಬೇಕಾಗುತ್ತದೆ. ಪ್ರತಿಯೊಬ್ಬರು ಓದಬೇಕಾಗುತ್ತದೆ ಎಂದಿದ್ದೆ.”
ಜೊತೆಗೆ, “ಹಾವೇರಿ ಸಮ್ಮೇಳನದಂತಹ ಕನ್ನಡ ಕಾರ್ಯಕ್ರಮಗಳಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಎಲ್ಲಿ ನಿಲ್ಲಬೇಕು ಎಂಬ ಪ್ರಶ್ನೆಗೆ ‘ನೀವು ದೂರ ನಿಲ್ಲಬೇಡಿ, ಹತ್ತಿರ ಬನ್ನಿ’ ಎಂಬ ಆತ್ಮ ವಿಶ್ವಾಸವನ್ನು ವೃದ್ದಿಸುವ ಮಾತುಗಳನ್ನು ಆಡಿದ್ದೆ” ಎಂದು ತಿಳಿಸಿದ್ದಾರೆ.
“ಗೋಕಾಕ್ ಸಮಿತಿಯ ವರದಿ ಬಂದಾಗ ಹಾಸನದಲ್ಲಿ ಬಹಳ ದೊಡ್ಡ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ನಾನು ಒಬ್ಬಳು ಸಾಮಾನ್ಯ ಮಹಿಳೆಯಾಗಿ ಭಾಗವಹಿಸಿದ್ದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರು ‘ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿದವರು ಮಾತ್ರ ಮಾತನಾಡಿ’ ಎಂಬ ಕರಾರನ್ನು ವಿಧಿಸಿದ್ದರು. ಆ ಸಂದರ್ಭದಲ್ಲಿ ವೇದಿಕೆಗೆ ಬಂದವಳು ನಾನೊಬ್ಬಳೆ, ಏಕೆಂದರೆ ನನ್ನ ಮೂವರು ಹೆಣ್ಣು ಮಕ್ಕಳು ಕೂಡ ಕನ್ನಡ ಶಾಲೆಯಲ್ಲಿ ಓದುತ್ತಿದ್ದರು. ಈ ಕುರಿತ ವರದಿಗಳನ್ನು ನೋಡಬಹುದು” ಎಂದಿದ್ದಾರೆ.
“ನಾನು ಹೇಳಿದಂತಹ ಮಾತುಗಳನ್ನು ತಿರುಚುವ ಅಗತ್ಯವಿಲ್ಲ. ನನ್ನ ಮತ್ತು ಕನ್ನಡದ ನಡುವಿನ ನಂಟನ್ನು ಅನುಮಾನದಿಂದ ನೋಡುವಂತಹ ಎಲ್ಲರಿಗೆ ನಾನು ಹೇಳುವುದು ಏನೆಂದರೆ, ಕನ್ನಡವನ್ನು ನನ್ನಷ್ಟು ಪ್ರೀತಿಸಿ ನನ್ನಷ್ಟು ಬಳಕೆಗೆ ತನ್ನಿ, ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ. ಇಷ್ಟು ಸಾಧನೆ ಮಾಡಿದರೆ ನೀವು ನನ್ನ ಮೇಲೆ ಕೆಸರೆರಚಾಟ ಮಾಡುವ ಅರ್ಹತೆ ಪಡೆಯುತ್ತೀರಿ. ಇಲ್ಲದಿದ್ದರೆ, ನಿಮ್ಮ ಯಾವುದೇ ಮಾತಿನಿಂದ ಯಾವುದೇ ಸ್ಪಷ್ಟತೆ ಸಿಗುವುದಿಲ್ಲ, ಧ್ವಂದ್ವಗಳಿರುತ್ತದೆ. ಕನ್ನಡ ನಂಬಿದವರನ್ನು ಯಾವತ್ತಿಗೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ನಾನೇ ಸಾಕ್ಷಿ” ಎಂದು ಬಾನು ಮುಷ್ತಾಕ್ ಹೇಳಿದ್ದಾರೆ.
ಕುಂಕುಮ ಹಚ್ಚುವ ನೆಪದಲ್ಲಿ ಲೈಂಗಿಕ ಕಿರುಕುಳ ಆರೋಪ: ತುಮಕೂರು ದೇವಾಲಯದಲ್ಲಿ ಅರ್ಚಕನ ಮೇಲೆ ಹಲ್ಲೆ-VIDEO


