ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ಪದಚ್ಯುತಿ ಕೋರಿ ಡಿಎಂಕೆ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಲೋಕಸಭಾ ಸ್ಪೀಕರ್ ಮುಂದೆ ಪ್ರಸ್ತಾವ ಮಂಡಿಸಿದ್ದಾರೆ.
ಡಿಸೆಂಬರ್ 9ರಂದು ಸಂವಿಧಾನದ 124ನೇ ವಿಧಿಯೊಂದಿಗೆ ಓದಲಾದ 217ನೇ ವಿಧಿಯ ಅಡಿಯಲ್ಲಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ನಿರ್ಣಯ ಮಂಡಿಸಲಾಗಿದೆ.
ಡಿಎಂಕೆ ನಾಯಕರಾದ ಟಿ.ಆರ್ ಬಾಲು ಮತ್ತು ಕನಿಮೊಳಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಎನ್‌ಸಿಪಿಎಸ್‌ಪಿಯ ಸುಪ್ರಿಯಾ ಸುಳೆ ಮುಂತಾದವರು ಪ್ರಸ್ತಾವನೆಗೆ ಸಹಿ ಹಾಕಿದ್ದಾರೆ.
‘ದುರ್ವರ್ತನೆ’ ಆಧಾರದ ಮೇಲೆ ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸಲು ಅರ್ಜಿಯಲ್ಲಿ ಕೋರಲಾಗಿದೆ. ನ್ಯಾಯಾಧೀಶರ ನಡವಳಿಕೆಯು ಅವರ ನಿಷ್ಪಕ್ಷಪಾತ, ಪಾರದರ್ಶಕತೆ ಮತ್ತು ಜಾತ್ಯತೀತ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಲಾಗಿದೆ. ನ್ಯಾಯಾಧೀಶರು ಹಿರಿಯ ವಕೀಲರು ಮತ್ತು ನಿರ್ದಿಷ್ಟ ಸಮುದಾಯದ ವಕೀಲರ ಬಗ್ಗೆ ‘ಪಕ್ಷಪಾತಿ ಧೋರಣೆ’ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
‘ನಿರ್ದಿಷ್ಟ ರಾಜಕೀಯ ಸಿದ್ಧಾಂತ’ದ ಆಧಾರದ ಮೇಲೆ ಮತ್ತು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿ ಪ್ರಕರಣಗಳನ್ನು ನಿರ್ಧರಿಸುವ ಕಾರಣಕ್ಕೆ ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸಬೇಕೆಂದು ಸಂಸದರು ಕೋರಿದ್ದಾರೆ.
ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ದೇವಾಲಯದ ಭಕ್ತರು ದರ್ಗಾದ ಬಳಿಯ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬದ ಮೇಲೆ ದೀಪ ಹಚ್ಚಲು ಅನುಮತಿ ನೀಡಿ ಕಳೆದ ವಾರ ಆದೇಶಿಸಿದ್ದರು. ಆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹವಾಗಿದೆ. ಸ್ವಾಮಿನಾಥನ್ ಪೀಠದ ಆದೇಶವನ್ನು ತಮಿಳುನಾಡು ಸರ್ಕಾರ ಜಾರಿಗೆ ತಂದಿಲ್ಲ. ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿದೆ.
ಸ್ವಾಮಿನಾಥನ್ ಅವರ ಪದಚ್ಯುತಿ ಪ್ರಸ್ತಾವನೆಗೆ 107 ಸಂಸದರು ಸಹಿ ಹಾಕಿದ್ದಾರೆ. ಟಿ.ಆರ್ ಬಾಲು, ಎ. ರಾಜಾ, ಕನಿಮೋಳಿ, ಅಖಿಲೇಶ್ ಯಾದವ್, ಸುಪ್ರಿಯಾ ಸುಳೆ, ಅರವಿಂದ್ ಸಾವಂತ್, ಡಿಂಪಲ್ ಯಾದವ್, ಇಟಿ ಮುಹಮ್ಮದ್ ಬಶೀರ್, ಅಸಾದುದ್ದೀನ್ ಓವೈಸಿ, ಟಿಆರ್ ಬಾಲು, ದಯಾನಿಧಿ ಮಾರನ್, ಗೌರವ್ ಗೊಗೊಯ್, ಮಾಣಿಕಂ ಟ್ಯಾಗೋರ್, ತಿರುಮಾವಲವನ್ ಮುಂತಾದವರು ಸಹಿ ಹಾಕಿದ ಪ್ರಮುಖರು.


