Homeಮುಖಪುಟಕೃಷಿ ಮಸೂದೆಗಳಿಗೆ ವಿರೋಧ: ಹೆದ್ದಾರಿ ತಡೆದು ಪ್ರತಿಭಟಿಸಿದ ರೈತರ ಬಂಧನ!

ಕೃಷಿ ಮಸೂದೆಗಳಿಗೆ ವಿರೋಧ: ಹೆದ್ದಾರಿ ತಡೆದು ಪ್ರತಿಭಟಿಸಿದ ರೈತರ ಬಂಧನ!

- Advertisement -
- Advertisement -

ಕೃಷಿ ಸಂಬಂಧಿ ಸುಗ್ರೀವಾಜ್ಞೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು. ರೈತರ ಬೆಳೆ ಖರೀದಿಗೆ ಶೀಘ್ರವೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಲಾಯಿತು. ತುಮಕೂರಿನ ಜಾಸ್ ಟೋಲ್ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ನೂರಾರು ರೈತರನ್ನು ಪೊಲೀಸರು ಬಂಧಿಸಿದರು.

ಹೆದ್ದಾರಿ ತಡೆಯಿಂದ ವಾಹನಗಳ ದಟ್ಟಣೆ ಹೆಚ್ಚಾಯಿತು. ರೈತರು ಹೆದ್ದಾರಿ ತಡೆ ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿದರು. ಇದಕ್ಕೆ ರೈತರು ಕಿಮ್ಮತ್ತು ನೀಡಲಿಲ್ಲ. ಸ್ವಲ್ಪ ಸಮಯದ ನಂತರ ಬಂಧಿಸಿ ಎಲ್ಲರನ್ನು ವಾಹನಕ್ಕೆ ತುಂಬಿಕೊಂಡು ಡಿಆರ್ ಮೈದಾನಕ್ಕೆ ಪ್ರತಿಭಟನಾನಿರತ ರೈತರನ್ನು ಕರೆತಂದರು. ಹೆಸರು ವಿಳಾಸ ಕೊಟ್ಟು ಹೋಗಿ ಎಂದು ಪೊಲೀಸರು ಮನವಿ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ಮುಖಂಡರು ನಾವು ಇಲ್ಲಿಯೇ ಧರಣಿ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಕುಳಿತಲ್ಲಿಂದ ಕದಲುವುದಿಲ್ಲ. ನಮ್ಮನ್ನು ಬೇಕಾದರೆ ಜೈಲಿಗೆ ಹಾಕಿ ಹೋಗುತ್ತೇವೆ, ಅದು ಬಿಟ್ಟು ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅನಂದ್ ಪಟೇಲ್ ಮಾತನಾಡಿ, “ಭೂ ಸುಧಾರಣಾ ಕಾಯ್ದೆ, ಭೂಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ರಾಗಿ ಮತ್ತು ಶೇಂಗಾ ಖರೀದಿ ಇನ್ನಿತರ ಕೃಷಿ ಉತ್ಪನ್ನಗಳ ಖರೀದಿ ಕೇಂದ್ರಗಳನ್ನು ತೆರೆಯಬೇಕು” ಎಂದು ಆಗ್ರಹಿಸಿದರು.

ಈಗ ಒಕ್ಕಣೆ ಕಾಲ. ದಳ್ಳಾಳಿಗಳು ನೇರ ರೈತರ ಮನೆಗಳಿಗೆ ಹೋಗಿ ರಾಗಿ, ಶೇಂಗಾ ಸೇರಿದಂತೆ ರೈತರ ಕೃಷಿ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ ರಾಗಿಗೆ 3000 ರೂ ಇದೆ. ದಳ್ಳಾಳಿಗಳು ಕೇವಲ 1500 ರೂಗೆ ಖರೀದಿಸುತ್ತಿದ್ದಾರೆ. ರೈತರಿಗೆ ಮೋಸವಾಗುತ್ತಿದೆ. ದಳ್ಳಾಳಿಗಳಿಗೆ ಹೆಚ್ಚಿನ ಲಾಭ ಮತ್ತು ಅನುಕೂಲವಾಗುತ್ತಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಿ ಅಂದ್ರೆ ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಲಾಗುತ್ತಿದೆ. ಇದು ರೈತ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರಿ ನೌಕರರಿಗೆ ವೇತನ ಕೊಡಲು ಹಣವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಇದನ್ನು ನೋಡಿದರೆ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್.ಟಿ. ಪಾಲಿನ ಹಣವನ್ನು ಕೊಡುತ್ತಿಲ್ಲ. ತಾರತಮ್ಯ ಮಾಡುತ್ತಿದೆ. ರಾಜ್ಯದ ಪಾಲಿನ ಹಣವನ್ನು ಕೊಟ್ಟಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ರಾಜ್ಯದ 25 ಬಿಜೆಪಿ ಸಂಸದರಿದ್ದರೂ ಧಮ್ ಕಳೆದುಕೊಂಡಿದ್ದಾರೆ. ಪ್ರಧಾನಿಯನ್ನು ಪಟ್ಟು ಹಿಡಿದು ಕೇಳುತ್ತಿಲ್ಲ. ಕೇಂದ್ರ ಸರ್ಕಾರ ಜಿಎಸ್ ಟಿ ಹಣ ನೀಡಿ ಎಂದರೆ ಸಾಲಕೊಡುತ್ತೇವೆ ಎನ್ನುತ್ತಿದೆ. ಕೇಂದ್ರ ಸರ್ಕಾರದ ಕೆಟ್ಟ ನೀತಿಯಿಂದ ಸಮಸ್ಯೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಮಸೂದೆಗಳಿಗೆ ವಿರೋಧ: ಹೆದ್ದಾರಿ ತಡೆದು ಪ್ರತಿಭಟಿಸಿದ ರೈತರ ಬಂಧನ!

ಕೃಷಿ ಮಸೂದೆಗಳಿಗೆ ವಿರೋಧ: ಹೆದ್ದಾರಿ ತಡೆದು ಪ್ರತಿಭಟಿಸಿದ ರೈತರ ಬಂಧನ!

Posted by Naanu Gauri on Thursday, 5 November 2020

ಉತ್ತರ ಕರ್ನಾಟಕ ಭಾಗದಲ್ಲಿ ಶುಗರ್ ಮಾಫಿಯಾ ನಡೆಯುತ್ತಿದೆ. ಕಬ್ಬು ಖರೀದಿಸಿರುವ ಬಾಕಿ ಹಣ ಕೊಟ್ಟಿಲ್ಲ. ಶುಗರ್ ಮಿಲ್ ಮಾಲಿಕರು ತಮ್ಮದೇ ಸಹಕಾರಿ ಬ್ಯಾಂಕ್ ಗಳನ್ನು ತೆರೆದು ರೈತರಿಗೆ ಸಾಲವನ್ನು ಕೊಡುತ್ತೇವೆ ಎನ್ನುತ್ತಿದ್ದಾರೆ. ಮುರುಗೇಶ್ ನಿರಾಣಿ, ಸಾಹುಕಾರರು ಇದರ ಮುಖ್ಯಸ್ಥರಾಗಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರ ಹೇಳುತ್ತಿದೆ. ರೈತರು ಗೊಬ್ಬರ ಖರೀದಿಸಲು ದುಡ್ಡಿಲ್ಲ. ಸಾಲ ಕೊಡಲು ದುಡ್ಡಿದೆ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುವಂತಹ ಸ್ಥಿತಿಯಲ್ಲಿ ಇಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಕೇರಳ ಸರ್ಕಾರ 16 ಬಗೆಯ ತರಕಾರಿಗಳಿಗೆ ಬೆಂಬಲ ಬೆಲೆ ನೀಡುತ್ತಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಬೇಕು. ಪಂಜಾಬ್ ರಾಜ್ಯದಲ್ಲಿ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಿದರೆ ಅಪರಾಧ ಎಂದಿದೆ. ಹಾಗಾಗಿ ರಾಜ್ಯದಲ್ಲೂ ಇದೇ ಕಾನೂನುನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ರೈತರ ಭೂಮಿ ವಶಪಡಿಸಿಕೊಂಡು ದಶಕಗಳೇ ಕಳೆದಿದ್ದರೂ ಇದುವರೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಸಿಕ್ಕಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿ ರೈತರಿಗೆ ವಂಚನೆ ಮಾಡಿದ್ದಾರೆ. ರೈತರ ಭೂಮಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಬೇಕು. ಹೇಮಾವತಿ ನಾಲೆಗೆ ವಶಪಡಿಸಿಕೊಂಡಿರುವ ರೈತರ ಭೂಮಿಗೆ 450 ಕೋಟಿ ಪರಿಹಾರ ಬಾಕಿ ಇರಿಸಿಕೊಂಡಿದೆ. ಮಾನಮರ್ಯಾದೆ ಇದ್ದರೆ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅದು ಬಿಟ್ಟು ಕೊರೊನ ನೆಪದಲ್ಲಿ ರೈತರು ಮತ್ತು ಕೂಲಿಕಾರರ ನೆರವಿಗೆ ಬಾರದೆ ಸರ್ಕಾರ ಅವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೆಂಕೆರೆ ಸತೀಶ್, ಧನಂಜಯಾರಾಧ್ಯ, ರುದ್ರೇಶ್ ಗೌಡ, ನಾಗೇಂದ್ರ, ಮತ್ತೊಂದು ಕಡೆ ನಡೆದ ಪ್ರತಿಭಟನೆಯಲ್ಲಿ ಎಐಕೆಎಸ್.ಸಿಸಿ. ಕಾರ್ಯದರ್ಶಿ ಸಿ.ಯತಿರಾಜು, ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ  ಆರ್.ಕೆ.ಎಸ್ ಸಂಚಾಲಕ ಎಸ್.ಎನ್.ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.


ಇದನ್ನೂ ಓದಿ: ಪ್ರಧಾನಿ ಮೋದಿ, ಅಂಬಾನಿ, ಅದಾನಿ ಪ್ರತಿಮೆ ಸುಟ್ಟು ಕೃಷಿ ಮಸೂದೆಗಳಿಗೆ ರೈತರ ವಿರೋಧ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...