ಮಾನ್ಸೂನ್ ಸಂಸತ್ ಅಧಿವೇಶನ ಆರಂಭವಾಗಿದ್ದು ಸದನದ ಒಳಗೆ ಪೆಗಾಸಸ್ ಕಣ್ಗಾವಲು ಮತ್ತು ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯದ ಕುರಿತು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿವೆ. ಇದೇ ಸಂದರ್ಭದಲ್ಲಿ ಸದನದ ಹೊರಗಿನಿಂದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದ್ದು ಜುಲೈ 22 ರಿಂದ ಜಂತರ್‌ಮಂತರ್‌ನಲ್ಲಿ ಕಿಸಾನ್ ಪಂಚಾಯತ್ ಹೋರಾಟ ನಡೆಸಲು ತೀರ್ಮಾನಿಸಿದೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 8 ತಿಂಗಳಿನಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ, 200 ಮಂದಿ ರೈತರು ಜುಲೈ 22 ರಿಂದ ಜಂತರ್ ಮಂತರ್‌ನಲ್ಲಿ ಸದನ ಮುಗಿಯುವವರೆಗೂ ಪ್ರತಿದಿನ ರೈತ ಅಧಿವೇಶನ ನಡೆಸಲಿದ್ದಾರೆ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
“ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನುಗಳ ಕುರಿತು ಚರ್ಚೆ ನಡೆಸಲು ಬಯಸಿದರೆ, ನಾವು ಮಾತುಕತೆಗೆ ಸಿದ್ಧರಿದ್ದೇವೆ. ಆದರೆ ಮಾತುಕತೆ ನಡೆಯದಿದ್ದರೆ, ರೈತರ ಪರವಾಗಿ ನಿರ್ಧಾರ ಬರದಿದ್ದರೆ, ಜುಲೈ 22 ರಿಂದ 200 ಮಂದಿ ರೈತರು ಸಂಸತ್ತಿನ ಬಳಿ ಪ್ರತಿಭಟನೆ ನಡೆಸುತ್ತಾರೆ” ಎಂದು ಈ ಮುಂಚೆ ರಾಕೇಶ್ ಟಿಕಾಯತ್ ಹೇಳಿದ್ದರು. ನಂತರ ರೈತರು ಮತ್ತು ಪೊಲೀಸರ ನಡುವೆ ಹಲವಾರು ಸಂದಾನ ಸಭೆಗಳು ನಡೆದು ಪ್ರತಿಭಟನೆ ಜಾಗ ಜಂತರ್ ಮಂತರ್‌ಗೆ ಬದಲಾಗಿದೆ.
ಕಿಸಾನ್ ಪಾರ್ಲಿಮೆಂಟ್ ಪ್ರತಿ ದಿನವೂ ನಡೆಯಲಿದೆ. ನಾವು ಒಬ್ಬ ಸ್ಪೀಕರ್ ಮತ್ತು ಉಪ ಸ್ಪೀಕರ್ ಅನ್ನು ಆಯ್ಕೆ ಮಾಡುತ್ತೇವೆ. ಆರಂಭದ ಎರಡು ದಿನ ಎಪಿಎಂಸಿ ಕಾಯ್ದೆಯ ಬಗ್ಗೆ ಚರ್ಚೆಗಳು ನಡೆಯಲಿವೆ. ನಂತರ ಉಳಿದ ಕಾಯ್ದೆಗಳ ಬಗ್ಗೆ ಚರ್ಚಿಸುತ್ತೇವೆ ಎಂದು ರೈತರು ತಿಳಿಸಿದ್ದಾರೆ.
“ಕೃಷಿ ಕಾನೂನುಗಳನ್ನು ಹಿಂಪಡೆಯದ ಸರ್ಕಾರ, ರೈತ ಪ್ರತಿಭಟನೆಯನ್ನು ಕೊನೆಗೊಳಿಸಲು ಹೇಳುತ್ತಿದ್ದಾರೆ. ರೈತರು 8 ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರದ ಆದೇಶಗಳನ್ನು ಪಾಲಿಸಲು ಅಲ್ಲ. ಸರ್ಕಾರ ಮಾತನಾಡಲು ಬಯಸಿದರೆ, ರೈತರ ಜೊತೆಗೆ ಮಾತನಾಡಬಹುದು, ಆದರೆ ಯಾವುದೇ ಷರತ್ತು ವಿಧಿಸಬಾರದು” ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ವರ್ಷ ನವೆಂಬರ್‌ನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಸಂಘಟನೆಗಳ ಮುಖಂಡರು ಮತ್ತು ಸರ್ಕಾರದ ನಡುವೆ ಹತ್ತಕ್ಕೂ ಹೆಚ್ಚು ಸುತ್ತಿನ ಚರ್ಚೆಗಳು ನಡೆದಿವೆ, ಆದರೆ ಇಲ್ಲಿಯವರೆಗೂ ಸರ್ಕಾರದ ಯಾವುದೇ ಷರತ್ತುಗಳಿಗೂ ರೈತರು ಒಪ್ಪಿಲ್ಲ.
ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಸಂಸತ್ತಿನ ಮೂರು ಅಧಿವೇಶನಗಳನ್ನು ಮೊಟಕುಗೊಳಿಸಲಾಗಿದ್ದು, ಕಳೆದ ವರ್ಷ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಲಾಯಿತು. ಸಾಮಾನ್ಯವಾಗಿ ಜುಲೈನಲ್ಲಿ ಪ್ರಾರಂಭವಾಗುವ ಮಾನ್ಸೂನ್ ಅಧಿವೇಶನವು ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿತ್ತು.
ಇದನ್ನೂ ಓದಿ; ರೈತರ ಪರ ಮಾತನಾಡಿದ್ದಕ್ಕೆ ಮಾಜಿ ಸಚಿವನನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ


