ಬಾಂಗ್ಲಾದೇಶದ ರಾಜಕೀಯ ಕಾರ್ಯಕರ್ತ ಉಸ್ಮಾನ್ ಹಾದಿ ಹತ್ಯೆಯ ಇಬ್ಬರು ಪ್ರಮುಖ ಶಂಕಿತರು ಮೇಘಾಲಯ ಗಡಿಯ ಮೂಲಕ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಢಾಕಾ ಮೆಟ್ರೋಪಾಲಿಟನ್ ಪೊಲೀಸರು (ಡಿಎಂಪಿ) ತಿಳಿಸಿದ್ದಾರೆ ಎಂದು ದಿ ಡೈಲಿ ಸ್ಟಾರ್ ಮತ್ತು ಪ್ರೋಥೋಮ್ ಅಲೋ ವರದಿಗಳು ತಿಳಿಸಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಎಂಪಿ ಹೆಚ್ಚುವರಿ ಆಯುಕ್ತ ಎಸ್.ಎನ್. ನಜ್ರುಲ್ ಇಸ್ಲಾಂ, ಶಂಕಿತರಾದ ಫೈಸಲ್ ಕರೀಮ್ ಮಸೂದ್ ಮತ್ತು ಅಲಮ್‌ಗೀರ್ ಶೇಖ್, ಸ್ಥಳೀಯ ಸಹಚರರ ಸಹಾಯದಿಂದ ಮೈಮೆನ್ಸಿಂಗ್‌ನ ಹಲುಘಾಟ್ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಹೇಳಿದ್ದಾರೆ. “ಭಾರತದ ಗಡಿ ದಾಟಿದ ನಂತರ, ಅವರನ್ನು ಮೊದಲು ಪೂರ್ತಿ ಎಂಬ ವ್ಯಕ್ತಿ ಸ್ವೀಕರಿಸಿದ್ದಾರೆ. ನಂತರ, ಟ್ಯಾಕ್ಸಿ ಚಾಲಕ ಸಾಮಿ ಅವರನ್ನು ಮೇಘಾಲಯದ ತುರಾ ನಗರಕ್ಕೆ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಪೂರ್ತಿ ಮತ್ತು ಸಾಮಿ ಇಬ್ಬರನ್ನೂ ಭಾರತದ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಅನೌಪಚಾರಿಕ ವರದಿಗಳು ಪೊಲೀಸರಿಗೆ ಬಂದಿವೆ. ಆದರೆ, ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ.
ಹಾದಿ ಹತ್ಯೆಯಲ್ಲಿ ಭಾಗಿಯಾದ ಇಬ್ಬರು ಪ್ರಮುಖ ಶಂಕಿತರನ್ನು ಬಂಧಿಸಿ ಗಡಿಪಾರು ಮಾಡುವುದನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶವು ಭಾರತೀಯ ಸಂಸ್ಥೆಗಳೊಂದಿಗೆ ಔಪಚಾರಿಕ ಮತ್ತು ಅನೌಪಚಾರಿಕ ಮಾರ್ಗಗಳ ಮೂಲಕ ಸಂವಹನ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ.
ಡಿಸೆಂಬರ್ 12ರಂದು ಢಾಕಾದಲ್ಲಿ ಮುಸುಕುಧಾರಿ ದುಷ್ಕರ್ಮಿಗಳು ಪ್ರಮುಖ ರಾಜಕೀಯ ವ್ಯಕ್ತಿ ಮತ್ತು ಭಾರತ ಮತ್ತು ಅವಾಮಿ ಲೀಗ್ ಎರಡರ ಬಗ್ಗೆಯೂ ಕಟು ಟೀಕಾಕಾರರಾಗಿದ್ದ ಉಸ್ಮಾನ್ ಹಾದಿ ಅವರ ತಲೆಗೆ ಗುಂಡು ಹಾರಿಸಿದ್ದರು. ಅವರನ್ನು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಆರು ದಿನಗಳ ನಂತರ ಅವರು ಸಾವನ್ನಪ್ಪಿದರು.
ಕಳೆದ ವರ್ಷದ ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ಹಿಂಸಾತ್ಮಕ ವಿದ್ಯಾರ್ಥಿ ನೇತೃತ್ವದ ಜುಲೈ ದಂಗೆಯ ನಾಯಕರಲ್ಲಿ ಹಾದಿ ಕೂಡ ಒಬ್ಬರಾಗಿದ್ದರು. ಅವರು ಸಾಯುವ ಮೊದಲು, ಇಂಕಿಲಾಬ್ ಮಂಚ್ ಎಂಬ ರಾಜಕೀಯ ವೇದಿಕೆಯನ್ನು ಪ್ರಾರಂಭಿಸಿದ್ದರು ಮತ್ತು ಫೆಬ್ರವರಿಯಲ್ಲಿ ನಿಗದಿಯಾಗಿದ್ದ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದರು.
ಅವರ ಹತ್ಯೆಯು ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳಲ್ಲಿ ವ್ಯಾಪಕ ಅಶಾಂತಿಯನ್ನು ಹುಟ್ಟುಹಾಕಿತು. ಗುಂಪು ಹಿಂಸಾಚಾರವು ನಂತರ ನಡೆಯಿತು. ಇದರಲ್ಲಿ ಪ್ರೋಥೋಮ್ ಅಲೋ ಮತ್ತು ದಿ ಡೈಲಿ ಸ್ಟಾರ್ ಪತ್ರಿಕೆಗಳ ಕಚೇರಿಗಳ ಮೇಲೆ ಹಾಗೂ ಛಾಯನತ್ ಮತ್ತು ಉದಿಚಿ ಶಿಲ್ಪಿ ಗೋಷ್ಠಿಯಂತಹ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ನಡೆದ ದಾಳಿಗಳೂ ಸೇರಿವೆ. ಈ ಅಶಾಂತಿ ಮಧ್ಯ ಬಾಂಗ್ಲಾದೇಶಕ್ಕೂ ಹರಡಿದೆ. ಅಲ್ಲಿ ಮೈಮೆನ್‌ಸಿಂಗ್‌ನಲ್ಲಿ ಕಾರ್ಖಾನೆಯೊಂದರ ಹಿಂದೂ ಕಾರ್ಮಿಕನನ್ನು ಹತ್ಯೆ ಮಾಡಲಾಗಿದೆ.


