ಕೇಂದ್ರ ಸರ್ಕಾರ ಹೊಸದಾಗಿ ಘೋಷಿಸಿದ ಸೇನಾ ನೇಮಕಾತಿ ಕುರಿತ ಅಗ್ನಿಪಥ್ ಯೋಜನೆಗೆ ರಾಷ್ಟ್ರಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ. ಉದ್ಯೋಗಾಕಾಂಕ್ಷಿ ಯುವಜನರು ಸಿಡಿದೆದ್ದಿದ್ದು 7 ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ತಡೆಯಲು ಪೊಲೀಸರು ಲಾಠೀ ಚಾರ್ಜ್ ಮಾಡಿದ್ದರಿಂದ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಇದುವರೆಗೂ ದೇಶಾದ್ಯಂತ ಒಂದು ಸಾವು ಸಂಭವಿಸಿದ್ದು, 8 ಜನರ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ತೆಲಂಗಾಣಕ್ಕೂ ಪ್ರತಿಭಟನೆಯ ಕಿಚ್ಚು ವ್ಯಾಪಿಸಿದ್ದು ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ತೀವ್ರಗೊಂಡಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಒಬ್ಬ ಯುವಕ ಸಾವನಪ್ಪಿದ್ದಾನೆ. ತದನಂತರ ಸಿಟ್ಟಿಗೆದ್ದ ಯುವಜನರು ರೈಲು ಬೋಗಿಗಳಿಗೆ ಕಲ್ಲು ತೂರಿ, ಸಾರ್ವಜನಿಕ ಬಸ್‌ಗಳನ್ನು ಜಖಂಗೊಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬಿಹಾರ-ಉತ್ತರ ಪ್ರದೇಶದಲ್ಲಿ ಮೂರನೇ ದಿನವೂ ಪ್ರತಿಭಟನೆಗಳು ಹೆಚ್ಚಾಗುತ್ತಿವೆ. ರಸ್ತೆ ತಡೆ- ರೈಲು ತಡೆಗಳು ಸಾಮಾನ್ಯವಾಗಿವೆ. ಉತ್ತರ ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ಉಪ ಮುಖ್ಯಮಂತ್ರಿ ರೇಣು ದೇವಿ ಮೇಲೆ ಪ್ರತಿಭಾನಾಕರರು ದಾಳಿ ನಡೆಸಿದ್ದಾರೆ.
ಪ್ರತಿಭಟನೆಗಳು ತೀವ್ರವಾಗುತ್ತಿದ್ದಂತ ಕೇಂದ್ರ ಸರ್ಕಾರ ನೇಮಕಾತಿಗೆ ಇದ್ದ ವಯಸ್ಸಿನ ಮಿತಿಯನ್ನು ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿದೆ. ಈ ಕುರಿತು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕರೋನಾ ಸಾಂಕ್ರಾಮಿಕದಿಂದಾಗಿ ಸೇನೆಯಲ್ಲಿನ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ.
‘ಅಗ್ನಿಪಥ್ ಯೋಜನೆ’ಯಲ್ಲಿ ಆ ಯುವಕರ ಕಾಳಜಿಗಾಗಿ ಮೊದಲ ವರ್ಷದಲ್ಲಿ ಎರಡು ವರ್ಷಗಳ ರಿಯಾಯಿತಿ ನೀಡುವ ಮೂಲಕ ವಯೋಮಿತಿಯನ್ನು 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸುವ ಸೂಕ್ಷ್ಮ ನಿರ್ಧಾರವನ್ನು ನರೇಂದ್ರ ಮೋದಿಯವರು ತೆಗೆದುಕೊಂಡಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
पिछले दो वर्ष कोरोना महामारी के कारण सेना में भर्ती प्रक्रिया प्रभावित हुई थी, इसलिए प्रधानमंत्री श्री @narendramodi जी ने ‘अग्निपथ योजना’ में उन युवाओं की चिंता करते हुए पहले वर्ष उम्र सीमा में दो वर्ष की रियायत देकर उसे 21 साल से 23 साल करने का संवेदनशील निर्णय लिया है।
— Amit Shah (@AmitShah) June 17, 2022
ಆದರೆ ಸರ್ಕಾರದ ಈ ಕ್ರಮಕ್ಕೆ ಉದ್ಯೋಗಾಂಕ್ಷಿಗಳು ಸಮಾಧಾನಗೊಂಡಿಲ್ಲ. ಪ್ರತಿಭಟನೆಗಳನ್ನು ಮುಂದುವರೆಸಿದ್ದು, ಅಗ್ನಿಪಥ್ ಯೋಜನೆ ಕೈಬಿಟ್ಟು, ಈ ಹಿಂದೆ ನೇಮಕಾತಿ ಪ್ರಕ್ರಿಯೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Explainer: ಏನಿದು ಅಗ್ನಿಪಥ್ ಯೋಜನೆ? ಯಾಕಿಷ್ಟು ವಿರೋಧ?


