ಸಂಸತ್ತಿನಲ್ಲಿ ಗಾಂಧಿ ಹಂತಕ ನಾಥೂರಾಂ ಗೊಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಬಿಜೆಪಿಯ ವಿವಾದಾತ್ಮಕ ಸಂಸದೆ ಪ್ರಗ್ಯಾ ಠಾಕೂರ್‌ರವರನ್ನು ಉಳಿದ ಚಳಿಗಾಲದ ಅಧಿವೇಶನಕ್ಕಾಗಿ ಪಕ್ಷದ ಸಂಸದರ ನಿಯಮಿತ ಸಭೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿದೆ ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೇ ಪ್ರಜ್ಞಾ ಠಾಕೂರ್ ಅವರನ್ನು ಇತ್ತೀಚೆಗೆ ಸೇರಿಸಿಕೊಂಡಿದ್ದ ರಕ್ಷಣಾ ಸಂಸದೀಯ ಸಮಿತಿಯಿಂದಲೂ ಸಹ ಹೊರಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಕ್ಷಣಾ ಸಚಿವಾಲಯ ಸಂಸದೀಯ ಸಮಿತಿಗೆ ಸಾಧ್ವಿ ಪ್ರಗ್ಯಾ ಸಿಂಗ್ ನೇಮಕ: ಕೇಂದ್ರದ ನಿರ್ಧಾರಕ್ಕೆ ವಿರೋಧ
“ನಿನ್ನೆ ಸಂಸತ್ತಿನಲ್ಲಿ ಅವರು ನೀಡಿದ ಹೇಳಿಕೆ ಖಂಡನೀಯ. ಅಂತಹ ಹೇಳಿಕೆ ಅಥವಾ ಸಿದ್ಧಾಂತವನ್ನು ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ ”ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಎಎನ್‌ಐಗೆ ತಿಳಿಸಿದ್ದಾರೆ.
ನಿನ್ನೆ ಸಂಸತ್ತಿನಲ್ಲಿ ಎಸ್‌ಜೆಪಿ ಕಾಯ್ದೆ ತಿದ್ದುಪಡಿ ಕುರಿತ ಚರ್ಚೆಯಲ್ಲಿ ಡಿಎಂಕೆ ಸಂಸದ ಎ.ರಾಜಾ ರವರು ಗಾಂಧೀಜಿಯವರನ್ನು ಗೋಡ್ಸೆ ಕೊಂದಿದ್ದು ಹೇಗೆ ಎಂದು ವಿವರಿಸುತ್ತಿದ್ದರು. ಆಗ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ದೇಶಭಕ್ತ ಗೋಡ್ಸೆಯನ್ನು ನೀವು ಉದಾಹರಣೆಯಾಗಿ ಕೊಡಬಾರದು ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: “ಶೌಚಾಲಯಗಳನ್ನು ಸ್ವಚ್ಚಗೊಳಿಸಲು ನಾನು ಸಂಸದೆಯಾಗಿ ಆಯ್ಕೆಯಾಗಿಲ್ಲ” : ಪ್ರಗ್ಯಾ ಠಾಕೂರ್
ಇದರಿಂದ ಕುಪಿತರಾದ ಮಧ್ಯಪ್ರದೇಶದ ಸಿಎಂ ಕಮಲ್‌ನಾಥ್‌ರವರು ಪ್ರಗ್ಯಾ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಗಾಂಧಿ ಕೊಂದ ಗೋಡ್ಸೆ ಬಗ್ಗೆ ಬಿಜೆಪಿ ತನ್ನ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದ್ದರು.
ಗಾಂಧಿ ಕೊಂದ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ ಪ್ರಗ್ಯಾ ಠಾಕೂರ್‌ರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗ ಆಕೆ ಮತ್ತೆ ಮತ್ತೆ ಅದನ್ನೇ ಪುನರುಚ್ಚರಿಸುತ್ತಿದ್ದರೂ ಮೋದಿ ಏಕೆ ಮೌನವಾಗಿದ್ದಾರೆ ಎಂದು ಕಮಲ್ ನಾಥ್ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು.
ಇದನ್ನೂ ಓದಿ: ಅಸ್ತಿತ್ವದಲ್ಲೇ ಇರದ ಶಿಸ್ತು ಸಮಿತಿಗೆ ಪ್ರಗ್ಯಾ-ಗೋಡ್ಸೆ ಕೇಸು! ಪ್ರಗ್ಯಾ ಬೆಂಬಲಕ್ಕೆ ನಿಂತಿತೆ ‘ಶಿಸ್ತಿನ ಪಕ್ಷ’?!


