ರಾಜ್ಯದಲ್ಲಿ ಮುಂಗಾರು ಬಿತ್ತನೆಗೆ ಮುಂದಾಗಿರುವ ರೈತರಿಗೆ ಯೂರಿಯಾ ಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ, ಹಾಗಾಗಿ ರೈತರ ಸಂಕಷ್ಟ ಪರಿಹರಿಸಿ ಎಂದು ಸಿಎಂ ಯಡಿಯೂರಪ್ಪನವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಯೂರಿಯಾ ತರಿಸಿಕೊಂಡು, ಅಗತ್ಯಕ್ಕೆ ಅನುಗುಣವಾಗಿ ರೈತರಿಗೆ ವಿತರಿಸಲು ಆಗ್ರಹಿಸಿದ್ದಾರೆ.
ಮುಂಗಾರು ಅವಧಿಗೆ ಸಾಮಾನ್ಯವಾಗಿ 8.50 ಲಕ್ಷ ಟನ್ ಯೂರಿಯಾ ಅವಶ್ಯಕತೆ ಇತ್ತು. ಆದರೆ, ವೈಬ್‍ಸೈಟ್‍ನಲ್ಲಿರುವ ಮಾಹಿತಿ ಪ್ರಕಾರ ಏ. 1ರಿಂದ ಸೆ.6ರವರೆಗೆ 8,95,221 ಟನ್ ಯೂರಿಯಾ ವಿತರಿಸಲಾಗಿದೆ. ಇನ್ನೂ 1,88,996 ಟನ್ ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಆದರೂ ಜನ ಯೂರಿಯಾಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರೆ ಕಾಳಸಂತೆಕೋರರು ಅಕ್ರಮವಾಗಿ ದಾಸ್ತಾನು ಮಾಡಿರಬೇಕು, ಇಲ್ಲವೇ ನಿಮ್ಮ ವೆಬ್‍ಸೈಟ್‍ನ ಅಂಕಿಅಂಶಗಳು ತಪ್ಪಿರಬೇಕು ಅಥವಾ ಜನರ ಬೇಡಿಕೆ ಹೆಚ್ಚಾಗಿರಬೇಕು’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಉಂಟಾಗಿದ್ದು, ರೈತರು ಮುಂದೇನು ಗತಿ ಎಂದು ಆತಂಕಕ್ಕೀಡಾಗಿದ್ದಾರೆ. ತಕ್ಷಣ ಸರ್ಕಾರ ಆದ್ಯತೆ ಮೇರೆಗೆ ಯೂರಿಯಾ ಆಮದು ಮಾಡಿಕೊಂಡು, ರೈತರಿಗೆ ಅಗತ್ಯ ಪ್ರಮಾಣದಲ್ಲಿ ವಿತರಿಸುವ ಕೆಲಸ ಮಾಡಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ. pic.twitter.com/MAsecUpUFN
— Siddaramaiah (@siddaramaiah) September 8, 2020
ಲಾಕ್‌ಡೌನ್ ಕಾರಣ ಜನರು ಗ್ರಾಮಾಂತರ ಪ್ರದೇಶಕ್ಕೆ ವಲಸೆ ಹೋದರು. ಹೀಗಾಗಿ, ಸಹಜವಾಗಿಯೇ ಕೃಷಿ ಕ್ಷೇತ್ರದ ಮೇಲೆ ಒತ್ತು ಬೀಳಲಾರಂಭಿಸಿತು. ಈ ವಿಚಾರವನ್ನು ಮನಗಂಡು ನಾವು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸರ್ಕಾರಕ್ಕೆ ಮಾಡಿದ ಮನವಿ ಪತ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀಜ ಮತ್ತು ಗೊಬ್ಬರ ದಾಸ್ತಾನು ಮಾಡಿಕೊಂಡು, ಪೂರೈಸುವಂತೆ ಆಗ್ರಹಿಸಿದ್ದೆವು. ಆದರೂ ಸರ್ಕಾರ ನಮ್ಮ ಮಾತನ್ನು ನಿರ್ಲಕ್ಷಿಸಿತು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ದಂಧೆ: ಜಿಲ್ಲಾವಾರು ಮಾಹಿತಿ ಕೋರಿ ಗೃಹಸಚಿವರಿಗೆ ಪತ್ರ ಬರೆದ ಸಿದ್ಧರಾಮಯ್ಯ
ಈ ಬಾರಿ ಹೆಚ್ಚುವರಿ ಭೂ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಹಾಗಾಗಿ ಸರ್ಕಾರ ನಿರ್ಲಕ್ಷ್ಯ ತೋರಿದರೆ ರೈತರು ಪರದಾಡಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಜೊತೆಗೆ ಹಾವೇರಿಯಲ್ಲಿ ಗೋಲಿಬಾರ್ ನಡೆದು ಇಬ್ಬರು ರೈತರು ಬಲಿಯಾಗಿದ್ದನ್ನು ಪತ್ರದಲ್ಲಿ ಉಲ್ಲೇಖಿಸಿ, ಗೊಬ್ಬರದಂಥ ಮಹತ್ವವಾದ ವಿಷಯವನ್ನು ನಿಭಾಯಿಸಲಾಗದೆ ಸರ್ಕಾರ ಮತ್ತೊಮ್ಮೆ ಸಂಪೂರ್ಣ ವಿಫಲವಾಗಿದೆ’ ಎಂದು ಸಿದ್ದರಾಮಯ್ಯ ದೂರಿದ್ದಾರೆ.
ರೈತರ ಕಾಳಜಿಯಿಂದಾಗಿ ಬೆಳೆಗಳು ಚೆನ್ನಾಗಿರುವುದರಿಂದ ಬೆಲೆ ಕುಸಿತದ ಸಮಸ್ಯೆ ಮುಂದಿನ ದಿನಗಳಲ್ಲಿ ಖಂಡಿತವಾಗಿ ಉದ್ಭವಿಸುತ್ತದೆ. ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ’ ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ.
ಸದ್ಯ ರೈತರ ಬೇಡಿಕೆಗೆ ಅನುಸಾರವಾಗಿ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ತರಿಸಿಕೊಂಡು ಯಾವುದೇ ಸಮಸ್ಯೆಯಾಗದಂತೆ ರೈತರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.


