ಲಂಡನ್‌ನಲ್ಲಿ ಪ್ಯಾಲೆಸ್ತೀನ್ ದೇಶದ ರಾಯಭಾರಿ ಕಚೇರಿ ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಯುಕೆಯ ಪ್ಯಾಲೆಸ್ತೀನ್ ರಾಯಭಾರಿ ಇದನ್ನು ‘ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದ್ದಾರೆ.
ಸೋಮವಾರ (ಜ.5) ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ರಾಯಭಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಯುಕೆಯ ಪ್ಯಾಲೆಸ್ತೀನ್ ರಾಯಭಾರಿ ಹುಸಾಮ್ ಝೊಮ್ಲೋಟ್, “ರಾಯಭಾರ ಕಚೇರಿಯ ಸ್ಥಾಪನೆಯು ‘ಬ್ರಿಟಿಷ್-ಪ್ಯಾಲೆಸ್ತೀನ್’ ಸಂಬಂಧಗಳಲ್ಲಿ ಒಂದು ದೊಡ್ಡ ಮೈಲಿಗಲ್ಲು” ಎಂದಿದ್ದಾರೆ.
ಗಾಝಾದ ಮೇಲಿನ ಇಸ್ರೇಲ್ ಆಕ್ರಮಣವನ್ನು ತೀವ್ರವಾಗಿ ಖಂಡಿಸಿದ್ದ ಯುಕೆ, ಕಳೆದ ಸೆಪ್ಟೆಂಬರ್‌ನಲ್ಲಿ ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ಸ್ವತಂತ್ರ ರಾಷ್ಟ್ರ ಎಂದು ಗುರುತಿಸಿತ್ತು. ಅದರ ಮುಂದುವರಿದ ಭಾಗವಾಗಿ ಇದೀಗ ರಾಯಭಾರ ಕಚೇರಿ ತೆರೆಯಲಾಗಿದೆ.
“ಯುಕೆಯಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿಯ ಉದ್ಘಾಟನೆಯ ಒಂದು ಐತಿಹಾಸಿಕ ಕ್ಷಣದಲ್ಲಿ ನಾವೆಲ್ಲ ಒಟ್ಟುಗೂಡಿದ್ದೇವೆ. ಇದು ಪೂರ್ಣ ರಾಜತಾಂತ್ರಿಕ ಸ್ಥಾನಮಾನ ಮತ್ತು ಸವಲತ್ತುಗಳೊಂದಿಗೆ, ನಮ್ಮ ಜನರ ಸಾರ್ವಭೌಮ ರಾಜ್ಯತ್ವ ಮತ್ತು ರಾಷ್ಟ್ರಗಳ ನಡುವೆ ಸಮಾನತೆಯ ಅವಿಭಾಜ್ಯ ಹಕ್ಕಿನ ಸಂಕೇತವಾಗಿದೆ” ಎಂದು ಝೊಮ್ಲೋಟ್ ಹೇಳಿದ್ದಾರೆ.
“ಗಾಝಾ, ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪಶ್ಚಿಮ ದಂಡೆ, ನಿರಾಶ್ರಿತರ ಶಿಬಿರಗಳು ಮತ್ತು ವಲಸೆಗಾರರಾದ್ಯಂತ ಪ್ಯಾಲೆಸ್ತೀನಿಯರ ತಲೆಮಾರುಗಳಿಗೆ ಈ ರಾಯಭಾರ ಕಚೇರಿ ನಮ್ಮ ಗುರುತನ್ನು ನಿರಾಕರಿಸಲಾಗುವುದಿಲ್ಲ, ನಮ್ಮ ಉಪಸ್ಥಿತಿಯನ್ನು ಅಳಿಸಲಾಗುವುದಿಲ್ಲ ಮತ್ತು ನಮ್ಮ ಜೀವನವನ್ನು ಅಪಮೌಲ್ಯಗೊಳಿಸಲು ಸಾಧ್ಯವಿಲ್ಲ ಎಂಬುವುದಕ್ಕೆ ಪುರಾವೆಯಾಗಿದೆ” ಎಂದಿದ್ದಾರೆ.
“ಒಂದು ಶತಮಾನಕ್ಕೂ ಹೆಚ್ಚು ಕಾಲ ಸ್ವಯಂ ನಿರ್ಣಯವನ್ನು ನಿರಾಕರಿಸಿದ ಜನರಿಗೆ, ಇದು ಒಂದು ಸ್ಮರಣೀಯ ಕ್ಷಣ” ಎಂದು ಹೇಳಿದ್ದಾರೆ.
ಅಂದರೆ, ಪ್ಯಾಲೆಸ್ತೀನಿಯರು ಒಂದು ಶತಮಾನಕ್ಕೂ ಹೆಚ್ಚು ಕಾಲ (1917ರ ಬಾಲ್ಫೋರ್ ಘೋಷಣೆಯಿಂದ ಆರಂಭವಾಗಿ, ಇಸ್ರೇಲ್ ಸ್ಥಾಪನೆ, ಆಕ್ರಮಿತ ಪ್ರದೇಶಗಳು ಇತ್ಯಾದಿ ಮೂಲಕ) ತಮ್ಮ ಸ್ವಯಂ ನಿರ್ಣಯದ ಹಕ್ಕನ್ನು (ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವ ಹಕ್ಕು) ನಿರಾಕರಿಸಲ್ಪಟ್ಟಿದ್ದಾರೆ. ಹಾಗಾಗಿ, ಅವರಿಗೆಇದು ಒಂದು ಸ್ಮರಣೀಯ ಕ್ಷಣ ಎಂದು ತಿಳಿಸಿದ್ದಾರೆ.
ಯುಕೆ ಎಲ್ಲಾ ಕಾನೂನು ಹಕ್ಕುಗಳು ಮತ್ತು ಬಾಧ್ಯತೆಗಳನ್ನು ನೀಡಿ ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ಸ್ವತಂತ್ರ ರಾಷ್ಟ್ರವೆಂದು ಒಪ್ಪಿಕೊಂಡಿದೆ.
ಹೊಸ ರಾಯಭಾರ ಕಚೇರಿಯ ಫಲಕವನ್ನು ಅನಾವರಣಗೊಳಿಸಿದ ನಂತರ, ರಾಜತಾಂತ್ರಿಕ ದಳದ ಮಾರ್ಷಲ್ ಅಲಿಸ್ಟೈರ್ ಹ್ಯಾರಿಸನ್, ಝಮ್ಲೋಟ್ ಅವರ ಹೇಳಿಕೆಗಳಿಗೆ ದನಿಗೂಡಿಸಿದ್ದು, ರಾಯಭಾರ ಕಚೇರಿಯ ಉದ್ಘಾಟನೆಯು ‘ಪ್ಯಾಲೆಸ್ತೀನ್‌ಗೆ ಐತಿಹಾಸಿಕ ಕ್ಷಣ’ ಎಂದು ಹೇಳಿದ್ದಾರೆ.
“ನಮ್ಮ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಇದು ಬಹಳ ಮುಖ್ಯವಾದ ಕ್ಷಣ. ಇದು ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಒಂದು ಹೆಜ್ಜೆ ಬದಲಾವಣೆಯ ಆರಂಭ” ಎಂದಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಗಾಝಾದ 14 ವರ್ಷದ ಪ್ಯಾಲೆಸ್ತೀನಿಯನ್ ಬಾಲಕ ಉಬೈದಾ ಮಾತನಾಡಿ “ನಾನು ನರಮೇಧದಿಂದ ಬದುಕುಳಿದೆ, ಆದರೆ ನನ್ನ ದೇಹವು ಆಳವಾದ ಗಾಯಗಳನ್ನು ಹೊಂದಿದೆ” ಎಂದು ಹೇಳಿದ್ದಾರೆ.
ತನ್ನ ಕುಟುಂಬದ ಒಂದು ಭಾಗ ಯುಕೆಯಲ್ಲಿದೆ ಎಂದು ಉಬೈದಾ ತಿಳಿಸಿದ್ದು, ಆದರೆ ಅವರ ತಂದೆ ಇನ್ನೂ ಗಾಝಾದಲ್ಲಿದ್ದಾರೆ, ಅಲ್ಲಿ ‘ಜೀವನವು ಇನ್ನೂ ಭಯದಿಂದ ತುಂಬಿದೆ’ ಎಂದು ಹೇಳಿದ್ದಾರೆ.
“ಒಂದು ದಿನ ನಾನು ರಾಯಭಾರಿಯಾಗಬೇಕೆಂದು ಆಶಿಸುತ್ತೇನೆ, ಯುಕೆ ರಾಯಭಾರಿಯದಾರೂ.. ಈ ಮೂಲಕ ನಾನು ನನ್ನ ಜನರಿಗೆ ಸಹಾಯ ಮಾಡಲು ಮತ್ತು ನಮ್ಮ ಧ್ವನಿಯನ್ನು ಪ್ರಪಂಚದಾದ್ಯಂತ ಕೇಳುವಂತೆ ಮಾಡಲು ಕೆಲಸ ಮಾಡಬಹುದು” ಎಂದು ಉಬೈದಾ ತಿಳಿಸಿದ್ದಾರೆ.


