ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಸ್ವಂತ ತಂದೆ ಹಾಗೂ ಆತನ ಕುಟುಂಬ ಸದಸ್ಯರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ಭಾನುವಾರ (ಡಿ.21) ನಡೆದಿದೆ.
ಮಾನ್ಯ ಕೊಲೆಯಾದ ಯುವತಿ. ಇನಾಂ ವೀರಾಪೂರ ಗ್ರಾಮದ ಮಾನ್ಯಾ, ಅದೇ ಗ್ರಾಮದ ವಿವೇಕಾನಂದ ದೊಡ್ಡಮನಿ ಎಂಬ ದಲಿತ ಯುವಕನನ್ನು ಕುಟುಂಬದ ವಿರೋಧದ ನಡುವೆಯೂ ಈ ವರ್ಷದ ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಮಾನ್ಯಾಳ ಕುಟುಂಬಸ್ಥರಿಂದ ಪ್ರಾಣ ಬೆದರಿಕೆ ಇದ್ದ ಕಾರಣ, ದಂಪತಿ ಹಾವೇರಿಯಲ್ಲಿ ನೆಲೆಸಿದ್ದರು. ಇತ್ತೀಚೆಗೆ ತಮ್ಮ ಸ್ವಗ್ರಾಮಕ್ಕೆ ಮರಳಿದ್ದರು.
ಭಾನುವಾರ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವಿವೇಕಾನಂದ ಹಾಗೂ ಆತನ ತಂದೆಯ ಮೇಲೆ ಮಾನ್ಯಾಳ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಯುವಕನ ಮನೆಗೆ ತೆರಳಿ ಮಾನ್ಯಾ, ವಿವೇಕಾನಂದನ ತಾಯಿ ರೇಣವ್ವ ಸೇರಿದಂತೆ ಕುಟುಂಬ ಸದಸ್ಯರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಆರು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು, ಪರಿಣಾಮ ಆಕೆಯ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆಗಾಗಿ ಆಕೆಯನ್ನು ಹುಬ್ಬಳ್ಳಿ ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾನ್ಯಾ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿದೆ ಎಂದು ವರದಿಗಳು ತಿಳಿಸಿವೆ.
ಹಲ್ಲೆಯಿಂದ ಗಾಯಗೊಂಡಿರುವ ವಿವೇಕಾನಂದನ ತಾಯಿ ರೇಣವ್ವ ಹಾಗೂ ದೊಡ್ಡಪ್ಪನ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.


