ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ನವೆಂಬರ್ 29ರಂದು ನಡೆಯಬೇಕಿದ್ದ ಸಂಸತ್ ಚಲೋ ಅಥವಾ ಸಂಸತ್ತಿಗೆ ಮೆರವಣಿಗೆಯನ್ನು ಪ್ರತಿಭಟನಾ ನಿರತ ರೈತರು ಮುಂದೂಡಿದ್ದಾರೆ.
ಒಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆಯ ಮುಂದಿನ ನಡೆಗಳನ್ನು ನಿರ್ಧರಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಅಡಿಯಲ್ಲಿ ರೈತ ಮುಖಂಡರು ನಡೆಸಿದ ಸಭೆಯ ನಂತರ ಸಂಸತ್ ಚಲೋ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೈತ ನಾಯಕ ದರ್ಶನ್ ಪಾಲ್ ಸಿಂಗ್, “ನವೆಂಬರ್ 29ರಂದು ಆಯೋಜಿಸಲಾಗಿದ್ದ ಟ್ರ್ಯಾಕ್ಟರ್ ರ್‍ಯಾಲಿಯನ್ನು ಮುಂದೂಡಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ” ಎಂದು ತಿಳಿಸಿದ್ದಾರೆ.
ಶಾಸನಬದ್ಧವಾಗಿ ಎಂಎಸ್‌ಪಿ ಜಾರಿ ಸೇರಿದಂತೆ ವಿವಿಧ ವಿಷಯಗಳ ಬೇಡಿಕೆಗಾಗಿ ಸಂಸತ್ ಚಲೋವನ್ನು ಆಯೋಜಿಸಲಾಗಿತ್ತು. ಇದಕ್ಕೂ ಮುನ್ನ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, “ರೈತರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಮನೆಗೆ ಹೋಗಬೇಕು” ಎಂದು ಒತ್ತಾಯಿಸಿದ್ದರು.
26 ನವೆಂಬರ್, 2020ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರವು ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಲಿದೆ.
ಕನಿಷ್ಠ ಬೆಂಬಲ ಬೆಲೆ (MSP) ಫ್ರೇಮ್‌ವರ್ಕ್‌ಗಾಗಿ ಸರ್ಕಾರ ಸಮಿತಿಯನ್ನು ರಚಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಸರ್ಕಾರ ಮುಂದಾಗಿದೆ. 26 ಹೊಸ ಮಸೂದೆಗಳು ಚಳಿಗಾಲದ ಅಧಿವೇಶದಲ್ಲಿ ಮಂಡನೆಯಾಗಲಿದ್ದು, ಅದರಲ್ಲಿ ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮಸೂದೆಯೂ ಒಂದಿದೆ.
ಎಂಎಸ್‌ಪಿ ಕಾಯ್ದೆಯ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡ ನಂತರ ರೈತರು ಮನೆಗೆ ಹೋಗುತ್ತಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಇದನ್ನೂ ಓದಿರಿ: ನೀಟ್ ವಿರುದ್ಧ ಎಚ್‌ಡಿಕೆ ಸರಣಿ ಟ್ವೀಟ್; ನಂತರ ಡಿಲೀಟ್- ಕಾರಣ ಸ್ವಾರಸ್ಯಕರ!


