ಕೇಂದ್ರದ ಬಿಜೆಪಿ ಸರ್ಕಾರ ಪರಿಚಯಿಸಿರುವ ಮೂರು ವಿವಾದಾತ್ಮಕ ಕಾನೂನಿನ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಇದೀಗ ಕೇಂದ್ರ ಕೃಷಿ ಇಲಾಖೆ ಡಿಸೆಂಬರ್ 30 ರಂದು ಮಾತುಕತೆಗೆ ಬರುವಂತೆ ಪ್ರತಿಭಟನಾ ನಿರತ ರೈತರನ್ನು ದೆಹಲಿಗೆ ಕರೆದಿದೆ.
ಪ್ರತಿಭಟನಾ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಇದುವರೆಗೂ ಆರು ಸುತ್ತಿನ ಮಾತುಕತೆ ನಡೆಸಿತ್ತಾದರೂ ಎಲ್ಲವು ಮುರಿದು ಬಿದ್ದಿದೆ. ಕೇಂದ್ರ ಸರ್ಕಾರ ಪದೇ ಪದೇ ತನ್ನ ಹಳೆಯ ಪ್ರಸ್ತಾಪದೊಂದಿಗೆ ಬರುತ್ತಿದೆ ಎಂದು ರೈತರು ಆರೋಪಿಸಿದ್ದರು. ಕಾರ್ಪೋರೇಟ್ ಪರವಿರುವ ಕಾನೂನನ್ನು ರದ್ದುಗೊಳಿಸಬೇಕು ಎಂಬುದಷ್ಟೇ ನಮ್ಮ ಆಗ್ರಹ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದೀಗ ಕೇಂದ್ರ ಸರ್ಕಾರ ಮತ್ತೆ ಮಾತುಕತೆಗೆ ಬರುವಂತೆ ಆಹ್ವಾನಿಸಿದೆ.
ಇದನ್ನೂ ಓದಿ: ತೀವ್ರಗೊಳ್ಳುತ್ತಿರುವ ರೈತರ ಆಕ್ರೋಶ: ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು
ರೈತರು ಕಾನೂನಿನ ವಿರುದ್ದ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದು, ಹರಿಯಾಣದಲ್ಲಿ ಟೋಲ್‌ಪ್ಲಾಝಾಗಳನ್ನು ಅನಿರ್ದಿಷ್ಟಾವಧಿಗೆ ವಶಕ್ಕೆ ಪಡೆದಿದ್ದಾರೆ. ದೆಹಲಿಯ ಗಡಿಗಳಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ದೇಶದಾದ್ಯಂತ ವಿವಿದ ರಾಜ್ಯಗಳಿಂದ ಇನ್ನಷ್ಟು ರೈತರು ಸೇರತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ತಮ್ಮ ಸರ್ಕಾರದ ಕಾನೂನನ್ನು ಮತ್ತೇ ಸಮರ್ಥಿಸಿಕೊಂಡಿದ್ದು, ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಪ್ರಧಾನಿಯ ಆರೋಪವನ್ನು ಪ್ರತಿಭಟನಾ ನಿರತ ರೈತರು ನಿರಾಕರಿಸಿದ್ದಾರೆ. ನಮಗೆ ನೂತನ ಕಾನೂನಿನ ಬಗ್ಗೆ ಸರಿಯಾಗಿ ತಿಳಿದಿದೆ, ಆದ್ದರಿಂದಲೇ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಟ್ರಾಕ್ಟ್ ಫಾರ್ಮಿಂಗ್: ರೈತರ ಪಾಲಿಗೆ ಕಾರ್ಪೊರೇಟ್ ಉರುಳು?


