ದಿ ಹಿಂದು ಪತ್ರಿಕೆಯ ಸಂಪಾದಕರಾದ ಎನ್ ರಾಮ್ ಮತ್ತು ಏಷ್ಯಾನೆಟ್‌ನ ಸಂಸ್ಥಾಪಕರಾದ ಶಶಿಕುಮಾರ್‌ರವರು ಪೆಗಾಸಸ್ ಸ್ಪೈವೇರ್ ಹಗರಣದ ಕುರಿತು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ಮಾಜಿ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ವಕೀಲರಾದ ಎಂ ಎಲ್ ಶರ್ಮಾ, ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರೂ ಸಹ ಅರ್ಜಿ ಸಲ್ಲಿಸಿದ್ದಾರೆ.
ಪೆಗಾಸಸ್ ಬಳಸಿ 142 ಕ್ಕೂ ಹೆಚ್ಚು ಪತ್ರಕರ್ತರು ಮತ್ತು ಪ್ರಕಾಶಕರ ಮೇಲೆ ಕಣ್ಗಾವಲು ನಡೆಸಲು ಗುರಿ ಮಾಡಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಸರ್ಕಾರ ಈ ಪೆಗಾಸಸ್ ಸ್ಪೈವೇರ್ ಬಳಸಿ ಜನರ ಮೇಲೆ ಯಾವುದೇ ರೀತಿಯಲ್ಲಿ ಕಣ್ಗಾವಲು ನಡೆಸಲು ನೇರವಾಗಿ ಅಥವಾ ಪರೋಕ್ಷವಾಗಿ ಲೈಸೆನ್ಸ್ ಪಡೆದಿದೆಯೇ ಎಂಬುದನ್ನು ಬಹಿರಂಗಪಡಿಸುವಂತೆ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ ನೀಡಬೇಕು ಎಂದು ಹಿರಿಯ ಪತ್ರಕರ್ತರು ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಸೆಕ್ಯುರಿಟಿ ಲ್ಯಾಬ್ ಫೋರೆನ್ಸಿಕ್ ವಿಶ್ಲೇಷಣೆಯು ಹಲವಾರು ಜನರ ಮೊಬೈಲ್ ಅನ್ನು ಟ್ಯಾಪ್ ಮಾಡಲು ಗುರಿಯಾಗಿಸಿ ಭದ್ರತಾ ಉಲ್ಲಂಘನೆಯನ್ನು ದೃಢಪಡಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು ಸೇರಿ ದೇಶದ 300 ಕ್ಕೂ ಹೆಚ್ಚು ಜನರನ್ನು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಬಳಸಿ ಸರ್ಕಾರಿ ಸಂಸ್ಥೆಗಳು ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಮೊನ್ನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ದಿನ ದಿನಕ್ಕೂ ಪೆಗಾಸಸ್ ಕಣ್ಗಾವಲು ಪಟ್ಟಿಯಲ್ಲಿರುವವ ಹೆಸರು ಬಯಲಾಗುತ್ತಲೇ ಇದೆ. ಈಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಉನ್ನತ ಮಟ್ಟದ ತನಿಖೆಯ ನೇತೃತ್ವ ವಹಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರ ಹೆಸರು ಕಂಡುಬಂದಿದೆ.
ಇನ್ನು ಪೆಗಾಸಸ್ ವಿವಾದ ಭುಗಿಲೆದ್ದ ನಂತರ ಈ ಕುರಿತು ತನಿಖೆ ನಡೆಸಲು ತಮ್ಮ ಸರ್ಕಾರದ ಇಬ್ಬರು ಪ್ರತಿನಿಧಿಗಳ ವಿಶೇಷ ತನಿಖಾ ತಂಡ ತಂಡ ರಚಿಸಲಾಗಿದೆ. ಅದರಲ್ಲಿ ನಿವೃತ್ತ ನ್ಯಾಯಾಧೀಶರು ಇರಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆ ತಿಳಿಸಿದ್ದಾರೆ.
ಇದನ್ನೂ ಓದಿ; ಪೆಗಾಸಸ್ ಹಗರಣ: ಎಸ್‌ಐಟಿ ತನಿಖೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ



Aslam.mhipparagi@