ಪೆಗಾಸಸ್ ಗೂಢಚಾರ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ಕುರಿತು ಸುಪ್ರೀಂಕೋರ್ಟ್ ಮಂಗಳವಾರದಂದು ಒಕ್ಕೂಟ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಆದರೆ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವಂತಹ ಯಾವುದೇ ವಿಷಯವನ್ನು ಸರ್ಕಾರ ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠವು ಮನವಿಗಳ ಕುರಿತು ಒಕ್ಕೂಟ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿತು. ಜೊತೆಗೆ 10 ದಿನಗಳ ನಂತರ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಹಗರಣ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ ಹಿರಿಯ ಪತ್ರಕರ್ತರು
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠವು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಯಾವುದಾದರು ವಿಷಯವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಬಯಸುವುದಿಲ್ಲ ಎಂದು ಒಕ್ಕೂಟ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಹೇಳಿದೆ.
ಪೆಗಾಸಸ್ ಗೂಢಚಾರ ಪ್ರಕರಣದ ಬಗ್ಗೆ ಅರ್ಜಿದಾರರು ಕೇಳಿದಂತೆ ಅಫಿಡವಿಟ್‌ನಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವುದು ರಾಷ್ಟ್ರೀಯ ಭದ್ರತೆಯ ಅಂಶಗಳನ್ನು ಒಳಗೊಂಡಿರುತ್ತದೆ ಎಂದು ತುಷಾರ್ ಮೆಹ್ತಾ ವಾದಿಸಿದ್ದು, ಇದರ ನಂತರ ಸುಪ್ರೀಂಕೋರ್ಟ್ ಮೇಲಿನಂತೆ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಮಾನ್ಸೂನ್ ಅಧಿವೇಶನ: ಪೆಗಾಸಸ್, ಕೃಷಿ ಕಾಯ್ದೆಗಳ ವಿರೋಧಿಸಿ ಪ್ರತಿಪಕ್ಷಗಳ ಪ್ರತಿಭಟನೆ
ಪೆಗಾಸಸ್ ಗೂಢಚಾರ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ಸೇರಿದಂತೆ ನ್ಯಾಯಾಲಯವು ಒಂದು ಬ್ಯಾಚ್‌ನ ವಿಚಾರಣೆ ನಡೆಸುತ್ತಿದೆ.
ಇಸ್ರೇಲ್ ಮೂಲದ NSO ಸಂಸ್ಥೆಯ ಗೂಢಚಾರ ತಂತ್ರಾಂಶವಾದ ಪೆಗಾಸಸ್ ಅನ್ನು ಬಳಸಿಕೊಂಡು ಭಾರತದ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರ ಮೇಲೆ ಗೂಢಚಾರ ಮಾಡಿದ ಬಗ್ಗೆ ಕಳೆದ ತಿಂಗಳು ವಿವಾದವೆದ್ದಿತ್ತು.
ಪೆಗಾಸಸ್ ಬಳಸಿ ಕಣ್ಗಾವಲು ಮಾಡುವ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ 300 ಕ್ಕೂ ಹೆಚ್ಚು ಭಾರತೀಯ ಮೊಬೈಲ್ ಫೋನ್ ಸಂಖ್ಯೆಗಳಿವೆ ಎಂದು ಅಂತರಾಷ್ಟ್ರೀಯ ಮಾಧ್ಯಮ ಒಕ್ಕೂಟ ತನ್ನ ವರದಿಯಲ್ಲಿ ಹೇಳಿತ್ತು.
ಇದನ್ನೂ ಓದಿ: ಪೆಗಾಸಸ್ ಗೂಢಚರ್ಯೆ ಸಮಸ್ಯೆಯಲ್ಲ: ವಿವಾದಿತ ಹೇಳಿಕೆ ನೀಡಿದ ಕೇಂದ್ರ ಸಚಿವ!


