ಗುಜರಾತ್‌ನ ಬನಸ್ಕಂತ ಜಿಲ್ಲೆಯಲ್ಲಿ ದಲಿತ ಸೈನಿಕನ ವಿವಾಹ ಮೆರವಣಿಗೆಗೆ ಅಡ್ಡಿಪಡಿಸಲಾಗಿದೆ. ವರನು ಕುದುರೆಯ ಮೇಲೆ ಮೆರವಣಿಗೆ ಹೊರಟಿದ್ದಕ್ಕಾಗಿ ಠಾಕೂರ್ ಕೋಲಿ ಸಮುದಾಯದ ಗುಂಪು ಪೊಲೀಸ್ ರಕ್ಷಣೆಯ ಹೊರತಾಗಿಯೂ ಕಲ್ಲು ತೂರಾಟ ನಡೆಸಿದೆ ಎಂದು “ದಿ ವೈರ್” ವರದಿ ಮಾಡಿದೆ.
ಹಿಂಸಾಚಾರ ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಶರೀಫ್ಡಾ ಗ್ರಾಮದಲ್ಲಿ ನಡೆದಿದೆ. ಮದುವೆಯ ರಜೆಯಲ್ಲಿರುವ ಆಕಾಶ್ ಕುಮಾರ್ ಕೊಯಿಟಿಯಾ ಎಂಬ 22 ವರ್ಷದ ಸೈನಿಕ ತನ್ನ ಮದುವೆಯ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ್ದಕ್ಕಾಗಿ ಈ ದುರ್ಘಟನೆ ನಡೆದಿದೆ.
“ಹಳ್ಳಿಯ ರಸ್ತೆಯ ಮೂಲಕ ವರನ ಕುದುರೆ ಸವಾರಿಯ ಮೆರವಣಿಗೆ ಹಾದು ಹೋಗಲು ಬಿಡುವುದಿಲ್ಲ ಎಂದು ನಮಗೆ ಮೊದಲೇ ಠಾಕೂರ್ ಕೋಲಿ ಸಮುದಾಯದ ಕೆಲವು ಜನರಿಂದ ಬೆದರಿಕೆ ಬಂದಿತ್ತು. ಅದಕ್ಕಾಗಿ ನಾವು ಪೊಲೀಸರಲ್ಲಿ ರಕ್ಷಣೆಗಾಗಿ ವಿನಂತಿಸಿದ್ದೆವು. ಅದರಂತೆ 6-7 ಪೊಲೀಸ್ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿತ್ತು. ಆದರೂ ಕಲ್ಲು ತೂರಾಟ ನಡೆದಿದೆ. ಇದರಿಂದಾಗಿ ಮಹಿಳೆಯರು ಸೇರಿದಂತೆ ಸಂಬಂಧಿಕರಿಗೆ ಗಾಯಗಳಾಗಿದೆ” ಎಂದು ವರನ ಸಹೋದರ ಹೇಳಿದ್ದಾರೆ.
“11 ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 323, 337 ,294 , 506, 147, 148 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ ಕಾಯ್ದೆ) ಅಡಿಯಲ್ಲಿ ದೂರು ದಾಖಲಿಸಿದ್ದೇವೆ”ಎಂದು ಗಡ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಪಿ.ಜಿ ರಜಪೂತ್ ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. ಕಲ್ಲು ತೂರಾಟದ ನಂತರ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಎಫ್‌ಐಆರ್‌ನಲ್ಲಿ 11 ಜನರನ್ನು ಹೆಸರಿಸಲಾಗಿದೆಯಾದರೂ ಈವರೆಗೆ ಯಾರನ್ನೂ ಬಂಧಿಸಿಲ್ಲ.


