‘ನಾನು ಆರು ಬಾರಿ ಶಾಸಕ, ದೆಹಲಿಯ ಹಿರಿಯ ಶಾಸಕ. ಆದರೆ ಇದರ ಹೊರತಾಗಿಯೂ, ಯಾರೂ ಪ್ರತಿಕ್ರಿಯಿಸುತ್ತಿಲ್ಲ, ಜನರಿಗೆ ನೆರವು ನೀಡಲಾಗುತ್ತಿಲ್ಲ. ನೀವು ಯಾವುದೇ ನೋಡಲ್ ಅಧಿಕಾರಿಯನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಧಿಸುವಂತೆ ನಾನು ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಲು ಬಯಸುತ್ತೇನೆ, ಇಲ್ಲದಿದ್ದರೆ ರಸ್ತೆಯಲ್ಲಿ ಮೃತ ದೇಹಗಳು ಇರುತ್ತವೆ” ಎಂದು ಆಮ್ ಆದ್ಮಿ ಪಕ್ಷದ ಶಾಸಕ ಶೋಯೆಬ್ ಇಕ್ಬಾಲ್ ಅಳಲು ತೋಡಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮಾತಿಯಾ ಮಹಲ್‌ನ ಶಾಸಕ ಶೋಯೆಬ್ ಇಕ್ಬಾಲ್, ಕೋವಿಡ್ ಸಾಂಕ್ರಾಮಿಕದ ತೀವ್ರತೆಗೆ ನಲುಗಿರುವ ಜನತೆಗೆ ನೆರವು ನೀಡಲೂ ಆಗುತ್ತಿಲ್ಲ. ಪರಿಸ್ಥಿತಿ ಕೈ ಮೀರಿದೆ. ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ ಎಂದು ಅಸಹಾಯಕತೆಯಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ.
2020ರ ವಿಧಾನಸಭಾ ಚುನಾವಣೆಗೆ ಒಂದು ತಿಂಗಳ ಹಿಂದಿನ ತನಕ ಕಾಂಗ್ರೆಸ್ ಜೊತೆಗಿದ್ದ ಇಕ್ಬಾಲ್ ಅವರು ನಂತರ ಆಮ್ ಆದ್ಮಿ ಪಕ್ಷ ಸೇರಿ ಶಾಸಕರಾಗಿದ್ದಾರೆ. ಅವರ ವೀಡಿಯೊ ಸಂದೇಶದಲ್ಲಿ, “ದೆಹಲಿಯ ಸ್ಥಿತಿಯಿಂದ ನನಗೆ ನೋವಾಗಿದೆ.. ನಾನು ತುಂಬಾ ಚಿಂತಿತನಾಗಿದ್ದೇನೆ. ನನಗೆ ನಿದ್ರೆ ಬರುತ್ತಿಲ್ಲ. ಜನರಿಗೆ ಆಮ್ಲಜನಕ ಮತ್ತು ಔಷಧಿಗಳು ಸಿಗುತ್ತಿಲ್ಲ. ನನ್ನ ಸ್ನೇಹಿತ ಬಳಲುತ್ತಿದ್ದಾನೆ, ಆಸ್ಪತ್ರೆಯಲ್ಲಿದ್ದಾನೆ. ಆದರೆ ಆಮ್ಲಜನಕ ಅಥವಾ ವೆಂಟಿಲೇಟರ್ ಸಿಗುತ್ತಿಲ್ಲ. ರಿಮೆಡೆಸಿವಿರ್‌ಗಾಗಿ ಅವರ ಪ್ರಿಸ್ಕಿಪ್ಸನ್ ನನ್ನ ಬಳಿ ಇದೆ. ಆದರೆ ನಾನು ಅದನ್ನು ಎಲ್ಲಿಂದ ಪಡೆಯಲಿ? ಎಲ್ಲೂ ಸಿಗುತ್ತಿಲ್ಲ. ಸ್ನೇಹಿತನ ಮಕ್ಕಳು ಗಾಬರಿಯಲ್ಲಿ ಔಷಧಿಗಾಗಿ ಅಲೆಯುತ್ತಿದ್ದಾರೆ. ಇಂದು, ನಾವು ಶಾಸಕರಾಗಿದ್ದಕ್ಕೆ ನಾಚಿಕೆ ಪಡಬೇಕಾಗಿದೆ. ಏಕೆಂದರೆ ನಮಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಕ್ಕೂ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇಕ್ಬಾಲ್ 1993ರಿಂದ ದೆಹಲಿ ವಿಧಾನಸಭೆಯ ಮಾತಿಯಾ ಮಹಲ್ ಕ್ಷೇತ್ರವನ್ನು ಆರನೇ ಸಲ ಪ್ರತಿನಿಧಿಸುತ್ತಿದ್ದಾರೆ.
ಇಕ್ಬಾಲ್ ಈ ಹಿಂದೆ ಕಾಂಗ್ರೆಸ್, ಲೋಕ ಜನಶಕ್ತಿ ಪಕ್ಷ (ಜೆಎಲ್‌ಪಿ) ಮತ್ತು ಜನತಾದಳದ ಮೂರು ಅವತಾರಗಳಾದ ಜನತಾದಳ, ಜನತಾದಳ (ಜಾತ್ಯತೀತ) ಮತ್ತು ಜನತಾದಳ (ಯುನೈಟೆಡ್) ಜೊತೆಗಿದ್ದರು. ಆಪ್ 2015ರಲ್ಲಿ ಅವರ ಗೆಲುವಿಗೆ ಬ್ರೇಕ್ ಹಾಕಿತ್ತು. ಈ ಸಲ ಆಪ್‌ನಿಂದ ಶಾಸಕರಾಗಿದ್ದಾರೆ.
ಇಕ್ಬಾಲ್ ಅವರ ಈ ಹೇಳಿಕೆಯ ಬಗ್ಗೆ ಎಎಪಿ ರಾಜ್ಯ ಸಮಿತಿ ಈವರೆಗೆ ಪ್ರತಿಕ್ರಿಯಿಸಿಲ್ಲ. ಇಕ್ಬಾಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ವಕ್ತಾರ ಹರೀಶ್ ಖುರಾನಾ, “ಇಕ್ಬಾಲ್ ಕೇವಲ ಎಎಪಿ ಶಾಸಕರಲ್ಲ, ದೆಹಲಿ ವಿಧಾನಸಭೆಯಲ್ಲಿ ಹೆಚ್ಚು ಅನುಭವ ಹೊಂದಿರುವವರು. ಪರಿಸ್ಥಿತಿ ಹತೋಟಿಯಲ್ಲಿಲ್ಲ ಮತ್ತು ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳುತ್ತಿದ್ದಾರೆಂದರೆ ಅದು ಸರಿಯಾಗಿದೆ. ಹಾಗಾಗಿ, ರಾಷ್ಟ್ರಪತಿ ಆಡಳಿತವನ್ನು ಹೇರಬೇಕು, ದೆಹಲಿ ಈಗ ಕೇಂದ್ರದ ನಿಯಂತ್ರಣದಲ್ಲಿರಬೇಕು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪರಿಸ್ಥಿತಿಯನ್ನು ನಿರ್ವಹಿಸಲು ಸಾಧ್ಯವಾಗದ ಕಾರಣ ರಾಷ್ಟ್ರಪತಿ ಆಡಳಿತವಿರಬೇಕು ಎಂದು ನಾವು ನಂಬುತ್ತೇವೆ’ ಎಂದಿದ್ದಾರೆ.
ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ದತ್, ನಗರದಲ್ಲಿ ಕೋವಿಡ್ ಹರಡುವಿಕೆ ಮತ್ತು ಸಂಬಂಧಿತ ಸಾವುಗಳನ್ನು ಕೊನೆಗೊಳಿಸಲು ಸೇನೆಯು ದೆಹಲಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು. ರಾಜ್ಯದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಸರ್ಕಾರ ನಿಧಾನಗೊಳಿಸಿದೆ ಮತ್ತು ಕೋವಿಡ್ ಸಾವಿನ ಅಂಕಿಅಂಶಗಳು ಸರಿಯಾಗಿ ವರದಿಯಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಾದ್ಯಂತ ಬೆಂಕಿಯೇ ಕಾಣುವಾಗ ಇಲ್ಲಿನ ಬಿಜೆಪಿ ಎಲ್ಲಿ?: ಆರ್‌ಎಸ್‌ಎಸ್ ಮುಖಂಡರೊಬ್ಬರ ಆಕ್ರೋಶ


