18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತಮ್ಮ ಧರ್ಮ ಆಯ್ಕೆ ಮಾಡಲು ಮುಕ್ತರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ. ಮಾಟ ಮತ್ತು ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಮನವಿಗೆ ನಿರಾಕರಿಸುತ್ತಾ ಸುಪ್ರೀಂಕೋರ್ಟ್ ಈ ರೀತಿ ಹೇಳಿದೆ.
ವಕೀಲ ಅಶ್ವಿನಿ ಉಪಾಧ್ಯಾಯ ಅವರ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರು ಈ ಅರ್ಜಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದರು.
ಇದನ್ನೂ ಓದಿ: ಲವ್ ಜಿಹಾದ್ ಎಂಬ ಕಪೋಲಕಲ್ಪಿತ: ಮತಾಂತರ ವಿರೋಧ ಕಾಯ್ದೆಯ ಅವಾಂತರ..!
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಬಿ ಆರ್ ಗವಾಯಿ ಮತ್ತು ಹೃಷಿಕೇಶ ರಾಯ್ ಅವರ ನ್ಯಾಯಪೀಠವು, “ಆರ್ಟಿಕಲ್ 32 ರ ಅಡಿಯಲ್ಲಿ ಇದು ಯಾವ ರೀತಿಯ ರಿಟ್ ಅರ್ಜಿ? 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯು ತನಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಲು ಅವಕಾಶ ನೀಡದಂತೆ ಮಾಡಲು ಯಾವುದೇ ಕಾರಣವಿಲ್ಲ” ಎಂದು ಹೇಳಿದೆ.
ನಂತರ ಶಂಕರನಾರಾಯಣನ್ ಅವರು ಅರ್ಜಿಯನ್ನು ಹಿಂಪಡೆಯುವುದಾಗಿ ಹಾಗೂ ಸರ್ಕಾರ ಮತ್ತು ಕಾನೂನು ಆಯೋಗಕ್ಕೆ ಮನವಿ ನೀಡಲು ಅನುಮತಿ ಕೇಳಿದರು. ಆದರೆ ನ್ಯಾಯಾಲವು ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಜೊತೆಗೆ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಅರ್ಜಿಯನ್ನು ವಜಾಗೊಳಿಸಿದೆ.
ಮಾಟ, ಮೂಢನಂಬಿಕೆ ಮತ್ತು ಮೋಸದ ಧಾರ್ಮಿಕ ಮತಾಂತರದ ಭೀತಿಯನ್ನು ನಿಯಂತ್ರಿಸುವುದು ಸಂವಿಧಾನದ ಆರ್ಟಿಕಲ್ 51 ಎ ಅಡಿಯಲ್ಲಿ ಕರ್ತವ್ಯವಾಗಿದ್ದರೂ, ಕೇಂದ್ರ ಮತ್ತು ರಾಜ್ಯಗಳು ವಿಫಲವಾಗಿವೆ ಎಂದು ಅರ್ಜಿದಾರರು ಹೇಳಿದ್ದರು.
ಇದನ್ನೂ ಓದಿ: ’ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿಯಾದುದು’: ಮಾಜಿ ಮುಖ್ಯ ನ್ಯಾಯಮೂರ್ತಿ ಎಪಿ ಶಾ


