ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿ ಜನರ ಒಗ್ಗಟ್ಟು ಒಡೆಯುವುದೇ ಭೂಸ್ವಾಧೀನ ಪರ ತಂಡದ ದುರುದ್ದೇಶ; ಹೊಲದಲ್ಲಿ ಬೆವರು ಸುರಿಸಿ ದುಡಿಯುವ ಜನರು ನಮ್ಮ ಜೊತೆಗಿದ್ದಾರೆ ಎಂದು ‘ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ’ ಸಂಚಾಲಕರಾದ ಕಾರಳ್ಳಿ ಶ್ರೀನಿವಾಸ್ ಹೇಳಿದರು.
1195 ದಿನಗಳಿಂದ ಬಲವಂತದ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಅಂತಿಮ ಹಂತ ತಲುಪಿದ್ದು, ಜು.15 ರಂದು ತನ್ನ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಮಧ್ಯೆ, ದೇವನಹಳ್ಳಿ ಸ್ಥಳೀಯ ಕಾಂಗ್ರೆಸ್ ಮುಖಂಡರು ನಾವು ಭೂಸ್ವಾಧೀನ ಪರವಾಗಿದ್ದೇವೆ ಎಂದು ಪತ್ರಿಕಾಗೋಷ್ಠಿ ನಡೆಸಿರುವುದು ನೈಜ ಹೋರಾಟಗಾರರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ದೇವನಹಳ್ಳಿಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರಳ್ಳಿ ಶ್ರೀನಿವಾಸ್, “1195 ದಿನಗಳ ಹೋರಾಟವನ್ನು ನೈಜ ರೈತರೇ ನಡೆಸಿದ್ದಾರೆ, ತಮ್ಮ ಹೊಲದಲ್ಲಿ ಬೆವರು ಸುರಿಸಿ ದುಡಿಯುವ ಜನರು ಇಂದು ಇಲ್ಲಿದ್ದಾರೆ. ಆದರೆ, ಭೂಮಿ ಮಾರುವವರು ಮತ್ತು ಮಧ್ಯವರ್ತಿಗಳು ಬೆಂಗಳೂರಿಗೆ ಹೊರಟಿದ್ದಾರೆ” ಎಂದರು.
“ಇತ್ತೀಚೆಗೆ ಭೂಮಿ ಕೊಡುವುದಾಗಿ ಹೇಳಿ ಕೆಲವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಹೋರಾಟ ನಿರ್ಣಾಯಕ ಹಂತ ತಲುಪಿರುವಾಗ ಈ ರೀತಿಯ ಪ್ರಚೋದನೆಗೆ ಸರ್ಕಾರವೇ ನೇರ ಕಾರಣ. ಜೂನ್ 25 ರ ‘ದೇವನಹಳ್ಳಿ ಹೋರಾಟ’ದ ಬಳಿಕ ನಮ್ಮ ಹೋರಾಟ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. 4 ನೇ ತಾರೀಕು ನಡೆದ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ತೆಗೆದುಕೊಳ್ಳಲು 10 ದಿನ ಸಮಯ ಕೇಳಿದ್ದರು, ಡಿನೋಟಿಫೈ ಮಾಡಲು ಕಾನೂನು ತೊಡಕಿದೆ ಎಂದು ಹೇಳಿದ್ದರು. ಹೀಗೆ ಹೇಳಿದ ಬಳಿಕ ಸರ್ಕಾರ ನಡೆದುಕೊಳ್ಳುತ್ತಿರುವುದು ಸರಿಯಲ್ಲ; ಸಚಿವ ಎಂ.ಬಿ. ಪಾಟೀಲ್ ಅವರ ನಡೆಯೂ ಒಪ್ಪುವುದಕ್ಕೆ ಸಾಧ್ಯವಿಲ್ಲ” ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದ ಮುಖ್ಯಮಂತ್ರಿ ಯಾರು?
“ನಮಗೆ ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ಅನುಮಾನ ಕಾಡುತ್ತಿದೆ ಎಂ.ಬಿ. ಪಾಟೀಲ್ ಅಥವಾ ಸಿದ್ದರಾಮಯ್ಯನವರೋ? ಭೂಸ್ವಾಧೀನ ವಿಚಾರದಲ್ಲಿ ಅವರೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ” ಎಂದರು.
“ಎಸ್‌ಸಿ-ಎಸ್‌ಟಿ ಸಮುದಾಯವನ್ನು ಮುಂದೆ ಇಟ್ಟುಕೊಂಡು ಭೂಮಿ ಕೊಡುತ್ತಾರೆ ಎಂದು ಮಾರಾಟ ಮಾಡಿಸುವ ಮಧ್ಯವರ್ತಿಗಳು ಸುಳ್ಳು ಹೇಳುತ್ತಿದ್ದಾರೆ. ಜಮೀನು ಮಾರಾಟ ಮಾಡುವವರು ಮತ್ತು ಅದರ ಮಧ್ಯವರ್ತಿಗಳು ಬೆಂಗಳೂರಿಗೆ ಹೊರಟಿದ್ದಾರೆ. ಎಲ್ಲ ದಲಿತರೂ ಭೂಮಿ ಕೊಡುತ್ತಾರೆ ಎಂಬ ಮಧ್ಯವರ್ತಿಗಳ ಆರೋಪ ನಿಜವಲ್ಲ. ಹೊಲೆಯ ಮತ್ತು ಮಾದಿಗ ಸಮುದಾಯದ ಜಮೀನು ಮಾಲೀಕರು ಇಲ್ಲೇ ಇದ್ದಾರೆ. ಅವರು ಯಾವುದೇ ಕಾರಣಕ್ಕೂ ಭೂಮಿ ಕೊಡುವುದಕ್ಕೆ ಒಪ್ಪುವುದಿಲ್ಲ” ಎಂದು ಹೇಳಿದರು.
“ಹೊಲದಲ್ಲಿ ದುಡಿಯುವ ಎಲ್ಲ ಹಿಂದುಳಿದ ಜಾತಿ ಜನರೂ ಇಲ್ಲಿದ್ದಾರೆ, ಅವರೆಲ್ಲರೂ ಭೂಮಿ ಕೊಡುವುದಿಲ್ಲ ಎಂದು ಹೋರಾಟ ನಡೆಸುತ್ತಿದ್ದಾರೆ. ನಮ್ಮ ಒಗ್ಗಟ್ಟು ಮುರಿಯಲು ಜಗಳ ತಂದಿಡಲು ಯತ್ನಿಸುತ್ತಿದ್ದಾರೆ. ‘ಹಸಿರು ವಲಯ’ ಎಂದು ಹೇಳಿ ಭಯ ಹುಟ್ಟಿಸುತ್ತಿದ್ದಾರೆ. ಪತ್ರಿಕೆಯೊಂದರ ಊಹಾತ್ಮಕ ಸುದ್ದಿಯನ್ನೇ ಸರ್ಕಾರದ ಆದೇಶ ಎಂದು ಹೇಳುತ್ತಿದ್ದಾರೆ. ಜಮೀನು ಮಾರಾಟ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ರೈತರು ಇಷ್ಟು ದಿನದಿಂದ ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ, ಹೊಲವನ್ನು ಉತ್ತಿಬಿತ್ತಿ, ಅನ್ನ ಬೆಳೆಯುವ ರೈತರಿಗೆ ‘ಹಸಿರು ವಲಯ’ವೇ ಬೇಕು. ಮಧ್ಯವರ್ತಿಗಳು ಮಾತ್ರ ‘ಹಳದಿ ವಲಯ’ ಕೇಳುತ್ತಿದ್ದಾರೆ” ಎಂದರು.
“ಕೆಐಎಡಿಬಿ ನೋಟಿಸ್ ಕೊಡುವುದಕ್ಕೂ ಮೊದಲೇ ಭೂಮಿ ಮಾರಾಟಕ್ಕೆ ಅಗ್ರಿಮೆಂಟ್ (ಮಾರಾಟ ಒಪ್ಪಂದ) ಮಾಡಿಸಿಕೊಂಡಿದ್ದವರು ಆತಂಕದಿಂದ ಜನರನ್ನು ಕರೆದುಕೊಂಡು ಹೋಗಿದ್ದಾರೆ. ದಲಿತರಿಗೆ ಬೆದರಿಕೆ ಹಾಕುತ್ತಿರುವ ಇಂಥ ಪುಡಾರಿಗಳನ್ನು ಸರ್ಕಾರ ಒದ್ದು ಜೈಲಿಗೆ ಹಾಕಬೇಕು” ಎಂದು ಆಗ್ರಹಿಸಿದರು.
ಸರ್ಕಾರ ಪತನವಾದರೂ ಆಗಬಹುದು
“ಈಗ ಭೂಸ್ವಾಧೀನ ಪರವಾಗಿ ಮಾತನಾಡುತ್ತಿರುವವರಿಗೆ ನಮ್ಮನ್ನು ನೇರವಾಗಿ ಎದುರಿಸಲು ತಾಕತ್ತಿಲ್ಲ; ಮೂರೂವರೆ ವರ್ಷದ ಹೋರಾಟ ನೋಡಿದ ಅವರಿಗೆ ನಮ್ಮ ಶಕ್ತಿ ಏನೆಂಬುದು ಗೊತ್ತಿದೆ. ನಮ್ಮ ತಂಟೆಗೆ ಒಂದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ಅರಿವು ಅವರಿಗಿದೆ. ಜು.25ರಂದು ರೈತರ ಪರವಾಗಿ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇದೇ ಕಾರಣಕ್ಕೆ ಅವರ ಸರ್ಕಾರ ಪತನವಾದರೂ ಆಗಬಹುದು. ಒಂದು ವೇಳೆ ಈ ಸರ್ಕಾರ ನಮ್ಮ ವಿರುದ್ಧವೇನಾದರೂ ನಿರ್ಧಾರ ಮಾಡಿದರೆ, ನಮ್ಮ ಚಳವಳಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುತ್ತೇವೆ. ಇದು ರೈತರ ನೈಜ ಹೋರಾಟ, ನಮ್ಮ ಹೋರಾಟ ಬೆಂಬಲಿಸುವಂತೆ ಅನ್ನ ತಿನ್ನುವ ಎಲ್ಲ ಕೈಗಳಿಗೆ ಮನವಿ ಮಾಡುತ್ತೇವೆ” ಎಂದರು.
ಮಟ್ಟಬಾರ್ಲು ಗ್ರಾಮದ ರೈತ ಮಹಿಳೆ ಮುನಿವೆಂಕಟಮ್ಮ ಮಾತನಾಡಿ, “ಭೂಮಿ ಕೊಡಲು ಎಷ್ಟು ಜನ ಸಿದ್ಧರಿದ್ದಾರೆ ಎಂಬ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಜು.25ರಂದು ನಮ್ಮ ಪರವಾಗಿ ನಿರ್ಧಾರ ಮಾಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮತ್ತಷ್ಟು ತೀವ್ರವಾಗುತ್ತದೆ. ಏಕೆಂದರೆ, ರಾಜ್ಯದ ಎಲ್ಲ ಜನಪರ ಹೋರಾಟಗಾರರ ಬೆಂಬಲ ನಮಗಿದೆ” ಎಂದರು.
“ಸಚಿವ ಎಂ.ಬಿ. ಪಾಟೀಲ್‌ಗೆ ದುಡ್ಡು ಬೇಕಿದೆ; ಅದಕ್ಕಾಗಿ ನಕಲಿ ಜನರನ್ನು ಸೃಷ್ಟಿ ಮಾಡಿದ್ದಾರೆ. ಆ ಮೂಲಕ ನಮ್ಮ ಒಗ್ಗಟ್ಟು ಒಡೆಯುವ ಕುತಂತ್ರ ಮಾಡುತ್ತಿದ್ದಾರೆ. ಇದೆಲ್ಲಾ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಮುನಿಯಪ್ಪ ಅವರಿಗೆ ಕಾಣುತ್ತಿಲ್ಲವೇ? ಸುಳ್ಳು ಸಾಕ್ಷಿ ಹೇಳುವವರ ಮಾತು ಕೇಳುವ ಮೂಲಕ ನಮ್ಮ ಹೋರಾಟದ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆಕ್ರೋಶ ಹೊರಹಾಕಿದರು.
ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚೀಮಾಚನಹಳ್ಳಿ ಲಕ್ಷ್ಮಿ ಮಾತನಾಡಿ, “ಕೆಲವರಿಗೆ ದುಡ್ಡಿನ ಆಸೆ ತೋರಿಸಿ ಹಾಗೂ ಹಸಿರು ವಲಯ ಆಗತ್ತದೆ ಎಂದು ಭಯ ಹುಟ್ಟಿಸಿ ಜನರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ನಮ್ಮಲ್ಲಿ ಶೇ.90 ರಷ್ಟು ಜನ ಭೂಮಿ ಕೊಡುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಇಂದು ಬೆಂಗಳೂರಿಗೆ ಹೋಗಿರುವ ಬಹುತೇಕರನ್ನು ಬೆದರಿಸಲಾಗಿದೆ. ಕೆಲವೇಕೆಲವು ಜನಕ್ಕೆ ಮಾತ್ರ ದುಡ್ಡು ಬೇಕು. ಆದರೆ, ಬಹುತೇಕರ ಆಯ್ಕೆ ಕೃಷಿ ಆಗಿದೆ” ಎಂದರು.
ನಲ್ಲಪ್ಪನಹಳ್ಳಿಯ ಇಂಜಿನಿಯರಿಂಗ್ ಪದವೀಧರೆ ಬಿಂದು ಮಾತನಾಡಿ, “ಭೂಮಿ ಕೊಡುತ್ತೇವೆ ಎಂದು ಬೆಂಗಳೂರಿಗೆ ಹೋಗಿರುವವರು ದುಡ್ಡಿಗಾಗಿ ತೆರಳಿದ್ದಾರೆ. ಆದರೆ, ನಾವು ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಸುತ್ತಮುತ್ತಲಿನ ಕಾರ್ಖಾನೆಗಳಿಂದ ನಮ್ಮಲ್ಲಿ ಹೆಚ್ಚಿನ ಮಾಲಿನ್ಯ ಆಗುತ್ತಿದೆ. ಇದು ನಮ್ಮ ಅಸ್ತಿತ್ವದ ಪ್ರಶ್ನೆ; ಒಂದೇ ಕಡೆ ಕಾರ್ಖಾನೆಗಳನ್ನು ಕಟ್ಟುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಕಷ್ಟವಾಗುತ್ತದೆ” ಎಂದರು.
“ಇಂಜಿನಿಯರಿಂಗ್ ಪದವಿ ಮಾಡಿದ್ದರೂ ಕೃಷಿಯಲ್ಲಿ ನಾವು ನೆಮ್ಮದಿಯಾಗಿದ್ದೇವೆ. ಹಲವು ಕಾರ್ಯಕ್ರಮಗಳಲ್ಲಿ ‘ಹಸಿರು ಉಳಿಸಿ’ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಅವರು ಈಗ ನಮ್ಮ ಭೂಮಿಯನ್ನೇ ಕಿತ್ತುಕೊಳ್ಳುತ್ತಿದ್ದಾರೆ. ರೈತರನ್ನು ಬೆಂಬಲಿಸದ ಸರ್ಕಾರ ನಮಗೆ ಯಾಕೆ ಬೇಕು? ಸ್ವಾತಂತ್ರ್ಯ ಪೂರ್ವದಿಂದಲೂ ನಾವು ಹೋರಾಟ ಮಾಡಿಕೊಂಡೆ ಎಲ್ಲವನ್ನೂ ಪಡೆದುಕೊಳ್ಳಬೇಕು; ಈಗ ನಮ್ಮ ಭೂಮಿ ಉಳಿಸಿಕೊಳ್ಳಲೂ ಹೋರಾಡಬೇಕಿದೆ. ಮುಖ್ಯಮಂತ್ರಿಗಳು ರೈತರ ಪರವಾಗಿ ನಿಲ್ಲಲೇಬೇಕು” ಎಂದು ಬಿಂದು ಆಗ್ರಹಿಸಿದರು.
ನಲ್ಲಪ್ಪನಹಳ್ಳಿ ಗ್ರಾಮದ ಕೃಷಿ ಪದವೀಧರ, ಆಧುನಿಕ ಕೃಷಿಕ ವಿನಯ್ ಮಾತನಾಡಿ, “13 ಹಳ್ಳಿಗಳ ರೈತರಲ್ಲಿ ಒಗ್ಗಟ್ಟು ಇರಲಿಲ್ಲ ಎಂದಿದ್ದರೆ ನಮ್ಮ ಹೋರಾಟ 1200 ದಿನ ಪೂರೈಸುತ್ತಿರಲಿಲ್ಲ. ನಾವೆಲ್ಲರೂ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಭೂಮಿ ಮಾರಿಸುವ ಕೆಲ ಏಜೆಂಟ್‌ಗಳು ನಮ್ಮ ಒಗ್ಗಟ್ಟು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಮಗೆ ಕೃಷಿ ವಲಯ (ಹಸಿರು ವಲಯ) ಬೇಕು; ದಲ್ಲಾಳಿಗಳಿಗೆ ಹಳದಿ ವಲಯ ಬೇಕು. ಅದನ್ನೇ ಮುಂದಿಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಆದರೆ, ಭೂಮಿ ನಂಬಿ ಬದುಕುತ್ತಿರುವ ನಮಗೆ ಹಸಿರು ವಲವೇ ಬೇಕು” ಎಂದು ಹೇಳಿದರು.


