ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ನೀಡಲಾದ Z+ ಭದ್ರತೆಯನ್ನು ಪದೇ ಪದೇ ಪ್ರಶ್ನಿಸಿದ್ದ ಅರ್ಜಿದಾರರನ್ನು ಸುಪ್ರೀಂಕೋರ್ಟ್ ಶುಕ್ರವಾರ ಟೀಕಿಸಿದೆ. ಬಿಕಾಶ್ ಸಹಾ ಎಂಬವರು ಸಲ್ಲಿಸಿದ ಅರ್ಜಿಯಲ್ಲಿ, ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ನೀಡಲಾದ Z+ ಭದ್ರತಾ ರಕ್ಷಣೆಯನ್ನು ರದ್ದುಗೊಳಿಸಲು ನಿರ್ದೇಶನ ನೀಡುವಂತೆ ಕೋರಲಾಗಿತ್ತು. ಅಂಬಾನಿಯ Z+ ಭದ್ರತೆ
ಬಿಕಾಶ್ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದಲ್ಲದೆ, ಈ ವಿಷಯವನ್ನು ಮುಂದುವರಿಸಿದರೆ ಅಥವಾ ಭವಿಷ್ಯದಲ್ಲಿ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಿದರೆ ಭಾರಿ ದಂಡಗಳನ್ನು ವಿಧಿಸುವುದಾಗಿ ಎಚ್ಚರಿಸಿದೆ.
“ಬೆದರಿಕೆ ಮಾಹಿತಿಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡಿದ ನಂತರ ಸರ್ಕಾರವು ಒದಗಿಸಿದ ಭದ್ರತೆಯನ್ನು ಪ್ರಶ್ನಿಸಲು ಅರ್ಜಿದಾರರಿಗೆ (ಬಿಕಾಶ್ ಶಾ) ಯಾವುದೇ ಅರ್ಹತೆ ಇಲ್ಲ. ಈ ಬಗ್ಗೆ ಯಾವುದೇ ಮುಂದಿನ ಪ್ರಕ್ರಿಯೆಗಳು ನಡೆದರೆ ನ್ಯಾಯಾಲಯವು ಅವರ ಮೇಲೆ ಭಾರಿ ದಂಡವನ್ನು ವಿಧಿಸುತ್ತೇವೆ ಎಂದು ನಾವು ಎಚ್ಚರಿಸಿದ್ದೇವೆ” ಎಂದು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ದ್ವಿ ಸದಸ್ಯ ನ್ಯಾಯಾಧೀಶರ ರಜಾ ಪೀಠ ಹೇಳಿದೆ.
ಶುಕ್ರವಾರ ಆದೇಶವನ್ನು ಅಂಗೀಕರಿಸುವಾಗ, ಮುಖೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ ಮತ್ತು ಮಕ್ಕಳಾದ ಅನಂತ್, ಆಕಾಶ್ ಮತ್ತು ಇಶಾ ಅವರಿಗೆ ಒದಗಿಸಲಾದ Z+ ಭದ್ರತಾ ರಕ್ಷಣೆಯನ್ನು ಮುಂದುವರಿಸಬೇಕು ಎಂದು ಸುಪ್ರೀಂಕೋರ್ಟ್ ಪೀಠ ಪುನರುಚ್ಚರಿಸಿದೆ.
ಬಿಕಾಶ್ ಅವರ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, “ಯಾರಿಗೆ ಯಾವ ಭದ್ರತೆ ನೀಡಬೇಕೆಂದು ನಿರ್ಧರಿಸುವುದು ಸುಪ್ರೀಂಕೋರ್ಟ್ ಆಗಿದೆಯೇ? ಇದು ಹೊಸದಾಗಿ ಕಾಣಿಸಿಕೊಂಡಿರುವ ವಿಷಯ. ನ್ಯಾಯಶಾಸ್ತ್ರದ ಹೊಸ ಪ್ರಕಾರವಾಗಿದೆ. ಇದು ನಮ್ಮ ಕ್ಷೇತ್ರವೇ?” ಎಂದು ಹೇಳಿದೆ.
ಬಿಕಾಶ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, “ಬೆದರಿಕೆಯ ಗ್ರಹಿಕೆಯನ್ನು ನಿರ್ಧರಿಸಲು ನೀವು ಯಾರು? ಭಾರತ ಸರ್ಕಾರ ಅದನ್ನು ನಿರ್ಧರಿಸುತ್ತದೆ, ಅಲ್ಲವೇ? ನಾಳೆ, ಏನಾದರೂ ಅಪಘಾತ ಸಂಭವಿಸಿದಲ್ಲಿ, ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಾ? ಅಥವಾ ನ್ಯಾಯಾಲಯವು ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆಯೇ?” ಎಂದು ಪ್ರಶ್ನಿಸಿದೆ.
“ಈ ರೀತಿ ಮಾಡಬೇಡಿ, ಇದು ತುಂಬಾ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ನಾವು ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇಲ್ಲಿ ಕಸಿದುಕೊಳ್ಳಲು ಚಿನ್ನದ ಗಣಿ ಇದೆ ಎಂದು ಭಾವಿಸಬೇಡಿ ಮತ್ತು ನಿಮ್ಮ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಾವು ಇಲ್ಲಿ ಕೂತಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚಾರಣೆಯ ಸಮಯದಲ್ಲಿ, ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದ ಹಿರಿಯ ವಕೀಲ ಮತ್ತು ಭಾರತದ ಮಾಜಿ ಅಟಾರ್ನಿ ಜನರಲ್ (ಎಜಿ) ಮುಕುಲ್ ರೋಹಟ್ಗಿ ಅವರು ಅರ್ಜಿಯನ್ನು ಆಕ್ಷೇಪಿಸಿದರು. “ಬೆದರಿಕೆಯ ಗ್ರಹಿಕೆಯನ್ನು ಪರಿಗಣಿಸಿ ಸರ್ಕಾರವು ಅವರಿಗೆ ಭದ್ರತೆ ನೀಡಿದೆ. ಈ ಸಂಭಾವಿತ ವ್ಯಕ್ತಿ (ಬಿಕಾಶ್)ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಹೇಳಿದ್ದಾರೆ. ಅಂಬಾನಿಯ Z+ ಭದ್ರತೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕುಸಿದ ಮಾವು ದರ; ರೈತರ ನೆರವಿಗೆ ನಿಲ್ಲುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದ ಸಿಎಂ
ಕುಸಿದ ಮಾವು ದರ; ರೈತರ ನೆರವಿಗೆ ನಿಲ್ಲುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದ ಸಿಎಂ

