ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬುತ್ತಿರುವ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಆರೋಗ್ಯ ಸಮೀಕ್ಷೆ ನಡೆಸಲು ಮುಂದಾಗಿರುವ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಿಗೆ ಮುಸ್ಲಿಂ ಸಮುದಾಯವು ಸಂಪೂರ್ಣ ಸಹಕಾರ ನೀಡುವಂತೆ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಮನವಿ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ದಕ್ಷಿಣ ಕನ್ನಡದ ಪಿಎಫ್‌ಐ ಜಿಲ್ಲಾಧ್ಯಕ್ಷ ಇಜಾಝಝ್ ಅಹ್ಮದ್ “ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ರವರು ಆರೋಗ್ಯ ಸಮೀಕ್ಷೆಯನ್ನು ಯಶಸ್ವಿಗೊಳಿಸುವಂತೆ ಕೋರಿಕೊಂಡಿದ್ದಾರೆ. ಎನ್‌ಪಿಆರ್ ಸಮೀಕ್ಷೆಯನ್ನು ಎಪ್ರಿಲ್ 15ರಂದು ಪ್ರಾರಂಭಿಸುವ ಬಗ್ಗೆ ಈ ಹಿಂದೆ ಸರಕಾರವು ಅಧಿಕೃತ ಆದೇಶ ಹೊರಡಿಸಿತ್ತು. ಆದರೆ ಕೊರೋನದ ಸನ್ನಿವೇಶದಲ್ಲಿ ಅದನ್ನು ಮುಂದೂಡಲಾಗಿದ್ದು, ಇದರ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಎನ್‌ಪಿಆರ್ ಪ್ರಕ್ರಿಯೆಗೂ, ಈ ಸಮೀಕ್ಷೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಹಾಗಾಗಿ ಸಮೀಕ್ಷೆ ನಡೆಸವು ನಾವೆಲ್ಲರೂ ಆಶಾಕಾರ್ಯಕರ್ತರಿಗೆ ಸಹಕಾರ ನೀಡೋಣ” ಎಂದಿದ್ದಾರೆ.
ಇದನ್ನೂ ಓದಿ: ಕರೋನಾಕ್ಕೆ ಕೊನೆಯಿದ್ದೀತು, ಆದರೆ ಈ ಮುಸ್ಲಿಮ್ ದ್ವೇಷಕ್ಕೆ ಮದ್ದೇನು?
ಈ ಆರೋಗ್ಯ ಸಮೀಕ್ಷೆ ಯ ವೇಳೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಯಾವುದೇ ಗೊಂದಲ ಹಾಗೂ ತಪ್ಪುಗ್ರಹಿಕೆಗಳಿಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳಬಾರದು. ಈ ಸಮೀಕ್ಷೆಯಲ್ಲಿ ಕೇಳಲಾಗುವ ಮಾಹಿತಿಗಳ ಕುರಿತು ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ. ಮನೆಯ ಯಜಮಾನರ ಹೆಸರು, ಮೊಬೈಲ್ ನಂಬರ್, ಮನೆಯಲ್ಲಿ ಪ್ರಸ್ತುತವಿರುವ ಒಟ್ಟು ಸದಸ್ಯರ ಸಂಖ್ಯೆ ಮತ್ತು ಮನೆಮಂದಿಗೆ ಯಾವುದಾದರೂ ರೋಗ ಲಕ್ಷಣಗಳಿರುವ ಕುರಿತ ಆರೋಗ್ಯ ಸಂಬಂಧಿ ಮಾಹಿತಿಗಳನ್ನಷ್ಟೇ ಕೇಳಲಾಗುತ್ತದೆ. ಈ ಆರೋಗ್ಯ ಸಮೀಕ್ಷೆಗೆ ಎಲ್ಲರೂ ಸಹಕಾರ ನೀಡಿ ಜಿಲ್ಲಾಡಳಿತದೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು” ಎಂದು ಅವರು ತಿಳಿಸಿದ್ದಾರೆ.
“ಅದೇ ರೀತಿ ನಮ್ಮ ದೇಶದ, ಸಮಾಜದ ಒಳಿತಿಗಾಗಿ ಮತ್ತು ನಮ್ಮ ಆರೋಗ್ಯದ ಹಿತದಷ್ಟಿಯಿಂದ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸ್ವಯಂ ಸೇವಕರ ಸೇವೆಯನ್ನು ನಾವು ಈ ಸಂದರ್ಭದಲ್ಲಿ ಶ್ಲಾಘಿಸಬೇಕು ಮತ್ತು ಅವರನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ಮನೆ ಮನೆ ಭೇಟಿ ಕೊಡುವ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಮೀಕ್ಷೆಯ ಸ್ವಯಂ ಸೇವಕರಿಗೆ ಸಮರ್ಪಕ ಮಾಹಿತಿ ನೀಡಿ ಸಹಕರಿಸಬೇಕು” ಎಂದು ಕೂಡ ಕರಪತ್ರವೊಂದನ್ನು ಮುದ್ರಿಸಿ ಹಂಚುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ದಾಖಲಾಗಿರಲಿಲ್ಲ. ಆದರೆ ಇತ್ತೀಚೆಗೆ ಪ್ರಕರಣವೊಂದು ಕಾಣಿಸಿಕೊಂಡಿದ್ದು, ಜಿಲ್ಲಾಡಳಿತ ಆರೋಗ್ಯ ಸಮೀಕ್ಷೆ ಗೆ ಮುಂದಾಗಿದೆ.

ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನ ಸಾರಾಯಿಪಾಳ್ಯದ ಸಾದಿಕ್ ಲೇಔಟ್ ನಲ್ಲಿ ಕೊವಿಡ್-19 ತಪಾಸಣೆ ಮಾಡಲು ತೆರಳಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಪ್ರಯತ್ನಿಸಲಾಗಿದೆ ಎಂಬ ಆರೋಪ ಕೋಮು ಬಣ್ಣ ಪಡೆದಿತ್ತು. ಅಲ್ಲಿನ ನಿವಾಸಿಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, ಅಲ್ಲಿನ ಕೆಲವು ನಿವಾಸಿಗಳು ಕೊರೊನಾ ಆರೋಗ್ಯ ತಪಾಸಣೆಯನ್ನು, ಎನ್‌ಪಿಆರ್ ಪ್ರಕ್ರಿಯೆ ಎಂದು ಗೊಂದಲ ಮಾಡಿಕೊಂಡು ಆಗಿದ್ದ ಮಾತಿನ ಚಕಮಕಿಯಾಗಿತ್ತು. ನಂತರ ಸಮುದಾಯದ ಮುಖಂಡರು ಇದರ ಬಗ್ಗೆ ಸಾಮಾನ್ಯರಿಗೆ ತಿಳಿ ಹೇಳಿ ಅಗತ್ಯ ಮಾಹಿತಿ ನೀಡಲು ಕೇಳಿಕೊಂಡಿದ್ದರು.


