ಪೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ತಮ್ಮ ಮುಂದೆ ಹಾಜರಾಗುವಂತೆ ಮುಂಬೈ ಸೈಬರ್ ಪೋಲಿಸರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫಡ್ನಾವಿಸ್ ಅವರಿಗೆ ಮುಚ್ಚಿದ ಲಕೋಟೆಯಲ್ಲಿ ಹಲವಾರು ಪ್ರಶ್ನೆಗಳನ್ನು ಕಳುಹಿಸಲಾಗಿದೆ. ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆಯನ್ನು ಫಡ್ನಾವೀಸ್ ನೀಡಿಲ್ಲ. ಅವರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಆದರೆ ಆ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೋನ್ ಕದ್ದಾಲಿಕೆ ಮತ್ತು ಗೌಪ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಮುಂಬೈ ಬಿಕೆಸಿ ಸೈಬರ್ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣವನ್ನು ರಾಜ್ಯ ಗುಪ್ತಚರ ಇಲಾಖೆ ದಾಖಲು ಮಾಡಿದೆ. ಅಂದಿನ ಐಪಿಎಸ್ ಅಧಿಕಾರಿ ರಶ್ಮೀ ಶುಕ್ಲಾ ಅವರು ಗೌಪ್ಯ ವರದಿಯನ್ನು ಸೋರಿಕೆ ಮಾಡಿದ್ದಾರೆ ಎಂದು ತನಿಖಾ ವರದಿ ಹೇಳಿತ್ತು.
ರಶ್ಮೀ ಶುಕ್ಲಾರವರು ಎಸ್ಐಡಿ ಮುಖ್ಯಸ್ಥರಾಗಿದ್ದಾಗ ರಾಜಕೀಯ ಮುಖಂಡರು ಮತ್ತು ಹಿರಿಯ ಅಧಿಕಾರಿಗಳ ಪೋನ್ ಕರೆಗಳನ್ನು ಕದ್ದಾಲಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ವರ್ಷ ಏಪ್ರಿಲ್ ನಲ್ಲಿ ಮುಂಬೈ ಪೋಲಿಸರು ಶುಕ್ಲಾ ಅವರನ್ನು ಬಿಕೆಸಿ ಸೈಬರ್ ಪೋಲಿಸ್ ಮುಂದೆ ವಿಚಾರಣೆಗೆ ಕರೆದಿದ್ದರು. ಆದರೆ ಅವರು ಕೊರೊನಾ ನೆಪ ಹೇಳಿ ಹಾಜರಾಗಲಿಲ್ಲ. ಮುಂದೆ ಪೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ ತಿಂಗಳಿನಲ್ಲಿ ಮುಂಬೈ ಸೈಬರ್ ಪೊಲೀಸರ ತಂಡ ಹೈದರಬಾದ್ ನಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.
ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನಾವೀಸ್, “ಬಿಕೆಸಿ ಸೈಬರ್ ಪೊಲೀಸರು ನನಗೆ ವಿಚಾರಣೆಗೆ ನೋಟಿಸ್ ನೀಡಿದ್ದಾರೆ. ನಾನು ಭಾನುವಾರ ಬೆಳಿಗ್ಗೆ 11 ಗಂಟೆಗೆ ಪೊಲೀಸ್ ಠಾಣೆಗೆ ಹಾಜರಾಗುತ್ತೇನೆ” ಎಂದಿದ್ದಾರೆ.
“ನಾನು ಎಂವಿಎ ಸರ್ಕಾರವನ್ನು ಬಹಿರಂಗಪಡಿಸಿದ್ದರಿಂದ ನನಗೆ ನೋಟಿಸ್ ನೀಡಲಾಗಿದೆ. ಈ ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾದಳಕ್ಕೆ (ಸಿಬಿಐ) ಹಸ್ತಾಂತರಿಸಬೇಕು ಎಂದು ಒತ್ತಾಯಿಸುತ್ತೇನೆ. ಇಂತಹ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವು ಸರಿಯಾದ ತನಿಖೆ ನೆಡೆಸಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ರಾಜ್ಯ ಪೊಲೀಸ್ ಇಲಾಖೆಯಲ್ಲಿನ ವರ್ಗಾವಣೆ ಹಗರಣವನ್ನು ನಾನು ಬಹಿರಂಗಪಡಿಸಿದ್ದರಿಂದ ಸರ್ಕಾರ ನನ್ನ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ನನ್ನ ಬಳಿ ಹೆಚ್ಚಿನ ಸಾಕ್ಷ್ಯಾಧಾರಗಳಿವೆ. ಅದನ್ನು ನಾನು ಸಿಬಿಐಗೆ ಒಪ್ಪಿಸುತ್ತೇನೆ. ನಾಳೆ ಮುಂಬೈ ಪೊಲೀಸರೊಂದಿಗೆ ವಿಚಾರಣೆಗೆ ಸಹಕರಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿರಿ: ಸೋನಿಯಾ, ರಾಹುಲ್, ಪ್ರಿಯಾಂಕಾ ರಾಜೀನಾಮೆ ಸಾಧ್ಯತೆ: ಎನ್‌ಡಿಟಿವಿ ವರದಿ


