Homeಮುಖಪುಟಪಿಸ್ತೂಲ್-ಪೆಟ್ರೋಲ್-ಫಾರ್ಮಾ-ಡ್ರಗ್-ಡಾಲರ್ ಪ್ರಪಂಚವನ್ನು ನಿಯಂತ್ರಿಸುತ್ತಿರುವ ಪಂಚ ಅಸ್ತ್ರಗಳು!

ಪಿಸ್ತೂಲ್-ಪೆಟ್ರೋಲ್-ಫಾರ್ಮಾ-ಡ್ರಗ್-ಡಾಲರ್ ಪ್ರಪಂಚವನ್ನು ನಿಯಂತ್ರಿಸುತ್ತಿರುವ ಪಂಚ ಅಸ್ತ್ರಗಳು!

ಪರಸ್ಪರ ತಳಕುಹಾಕಿಕೊಂಡಿರುವ ಈ ಕ್ಷೇತ್ರಗಳು ಮತ್ತು ಬಂಡವಾಳಶಾಹಿಯು ಹೇಗೆ ಐಟಿ, ಬಿಟಿ, ಬ್ಯಾಕಿಂಗ್ ಮತ್ತು ಮಾಧ್ಯಮ ಮುಂತಾದವುಗಳ ಮೂಲಕ ನಮ್ಮನ್ನು ನಿಯಂತ್ರಿಸುತ್ತಿದೆ ಎಂಬ ವಿವರ ಇಲ್ಲಿದೆ.

- Advertisement -
- Advertisement -

ಆಧುನಿಕ ಕಾಲದಲ್ಲಿ ವಿಶ್ವದ ಆರ್ಥಿಕತೆಯನ್ನು ನಿಯಂತ್ರಿಸುತ್ತಿರುವ ವಿಶಯಗಳೆಂದರೆ, ಪಿಪಿಪಿ ಡಾಲರ್-ಅಂದರೆ ಶಸ್ತ್ರಾಸ್ತ, ಪೆಟ್ರೋಲಿಯಂ, ಮಾದಕವಸ್ತು ಉದ್ಯಮಗಳು ಮತ್ತು ಅದರಿಂದ ಸಂಪಾದನೆಯಾಗುವ ವಿಶ್ವದ ವಿನಿಮಯ ಕರೆನ್ಸಿ ಎನಿಸಿದ ಅಮೇರಿಕನ್ ಡಾಲರ್. ಇವುಗಳ ಪಾತ್ರ ಮತ್ತು ಪರಸ್ಪರ ಸಂಬಂಧಗಳನ್ನು ಸರಳವಾಗಿ ಇಲ್ಲಿ ವಿವರಿಸಲಾಗಿದೆ.

ತೈಲ ಡಾಲರ್

1973ರಲ್ಲಿ ತಥಾಕಥಿತ ತೈಲ ಕೊರತೆಯಿಂದಾಗಿ ವಿಶ್ವ ಆರ್ಥಿಕತೆಯು ಸಂಪೂರ್ಣವಾಗಿ ಸ್ಥಗಿತ ಸ್ಥಿತಿಗೆ ಬಂದಿತ್ತು. ಇದಕ್ಕೆ ನೀಡಲಾದ ಮೂಲ ಕಾರಣವೆಂದರೆ, “ಯೋಂ ಕಿಪ್ಪರ್ ವಾರ್” ಎಂದು ಕರೆಯಲ್ಪಡುವ ಒಂದು ಯುದ್ಧ. ಪ್ಯಾಲೆಸ್ತೀನಿನ ಪ್ರದೇಶಗಳನ್ನು ಆಕ್ರಮಿಸಿ ಪಾಶ್ಚಾತ್ಯರ ಬೆಂಬಲದೊಂದಿಗೆ ಸ್ಥಾಪನೆಗೊಂಡ ಇಸ್ರೇಲ್, ಅವುಗಳದ್ದೇ ಬೆಂಬಲದಿಂದ 1967ರಲ್ಲಿ ನೆರೆಯ ಈಜಿಪ್ಟ್ ಮತ್ತು ಸಿರಿಯಾಗಳನ್ನು ಆರು ದಿನಗಳ ಯುದ್ಧ (Six Day War)ದಲ್ಲಿ ನಿರ್ಣಾಯಕವಾಗಿ ಸೋಲಿಸಿದ್ದು. ಇದಕ್ಕೆ ಪಾಶ್ಚಾತ್ಯರ ಪ್ರತಿಕ್ರಿಯೆ ಏನಾಗಿತ್ತೆಂದರೆ, ಯುಎಸ್‌ಎಯ ಹೆಚ್ಚುಕಡಿಮೆ ಅಧೀನದಲ್ಲಿದ್ದು, ಪಾಶ್ಚಾತ್ಯರ ಜೊತೆ ಅವರ ತಂತ್ರಜ್ಞಾನದಿಂದ ವ್ಯವಹಾರ ಮಾಡುತ್ತಿದ್ದ ಸೌದಿ ಅರೇಬಿಯಾ ನೇತೃತ್ವದ ತೈಲ ಉತ್ಪಾದಕ ದೇಶಗಳ ಸಂಘಟನೆಯಾದ “ಒಪೆಕ್” ಇಸ್ರೇಲ್ ವಿರೋಧಿ ದೇಶಗಳ ವಿರುದ್ಧ ಹೇರಿದ ತೈಲ ನಿರ್ಬಂಧ.

ಈ ತೈಲ ನಿರ್ಬಂಧವು ತೈಲ ಉತ್ಪಾದಿಸದ ದೇಶಗಳ- ಅದರಲ್ಲೂ ಯುರೋಪ್ ಮತ್ತು ಭಾರತವೂ ಸೇರಿದಂತೆ ಅದರ ಹಿಂದಿನ ವಸಾಹತು ದೇಶಗಳ ಆರ್ಥಿಕತೆಗಳ ಮೇಲೆ ಘೋರ ಪರಿಣಾಮವನ್ನು ಉಂಟುಮಾಡಿತು. ವಾಸ್ತವವಾಗಿ ಆಗಿನ ಶ್ರೀಮಂತ ಮತ್ತು ಇಂದಿನ ಅತಿ ಶ್ರೀಮಂತ ದೇಶಗಳ ಮೇಲೆ ಅಂತಹ ಪರಿಣಾಮ ಉಂಟಾಗಲೇ ಇಲ್ಲ. ಏಕೆಂದರೆ, ಈ ಏಳೂ ತೈಲ ಉತ್ಪಾದಕ ದೇಶಗಳ ತೈಲವು ಮುಖ್ಯವಾಗಿ ಭಾರೀ ಅಮೆರಿಕನ್ ಖಾಸಗಿ ಕಂಪೆನಿಗಳ ಮೂಲಕವೇ ಪೂರೈಕೆಯಾಗುತ್ತಿತ್ತು.

Photo Courtesy: Turan.az

ಕೃತಕವಾಗಿ ಸೃಷ್ಟಿಸಲಾದ ಈ ತೈಲಕೊರತೆಯಿಂದಾಗಿ ಈ ಕಂಪೆನಿಗಳು ಭಾರೀ ಪ್ರಮಾಣದಲ್ಲಿ ಡಾಲರ್‌ಗಳನ್ನು ಅಚ್ಚುಹಾಕಿದವು. ತೈಲ ಸಂಶೋಧನೆಗೆ ಮುಂಚೆ ಅಲೆಮಾರಿ ಬುಡಕಟ್ಟುಗಳು ತಿರುಗಾಡುತ್ತಿದ್ದ ಬಡ ಅರಬ್ ದೇಶಗಳು ತೈಲದ ಕಾರಣದಿಂದ ಇಂದು ಅತೀ ಶ್ರೀಮಂತ ದೇಶಗಳಾಗಿವೆ. ಇಂದಿನ ಆರ್ಥಿಕತೆಗೆ ತೈಲವು ಅತೀ ನಿರ್ಣಾಯಕವಾಗಿರುವುದರಿಂದ ಯುಎಸ್‌ಎಯು ಈ ತೈಲ ಮತ್ತದರಿಂದ ಬರುವ ನಿಯಂತ್ರಣಕ್ಕಾಗಿಯೇ ಬಹುತೇಕ ವಿಶ್ವ ರಾಜಕಾರಣವನ್ನು ನಡೆಸುತ್ತಿದೆ.

ಇಂದು ಸಿರಿಯಾ, ಇರಾಕ್, ಯೆಮೆನ್, ಈಜಿಪ್ಟ್, ಲಿಬಿಯಾ, ವೆನೆಜ್ಯುವೆಲಾ, ಬ್ರೆಜಿಲ್ ಮುಂತಾದ ದೇಶಗಳಲ್ಲಿ ನಡೆಯುತ್ತಿರುವ ಯುಎಸ್‌ಎ ಪ್ರೇರಿತ ಅಥವಾ ನೇರ ಭಾಗೀದಾರಿಯ ಯುದ್ಧ ಅಥವಾ ಅಂತರ್ಯುದ್ಧಗಳು ತೈಲದ ಕಾರಣದಿಂದಲೇ ನಡೆಯುತ್ತಿವೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಇಂದು ತೈಲ ಉತ್ಪಾದಕ ದೇಶಗಳು ಆರ್ಥಿಕವಾಗಿ ಪ್ರಬಲವಾಗಿದ್ದರೂ, ಯುಎಸ್‌ಎಯ ಅಡಿಯಾಳುಗಳು ಅಥವಾ ಅವಲಂಬಿತರು ಆಗಿರುವುದಕ್ಕೆ ಇದೇ ಕಾರಣ. ಯುಎಸ್‌ಎಯ ದೈತ್ಯ ಖಾಸಗಿ ತೈಲ ಕಂಪೆನಿಗಳು ಯುಎಸ್‌ಎಯ ಧೋರಣೆಗಳನ್ನು ನಿಯಂತ್ರಿಸುವುದು ಮಾತ್ರವಲ್ಲ; ಜಗತ್ತಿನ ಚಿಕ್ಕ ಪುಟ್ಟ ದೇಶಗಳ ಸರಕಾರಗಳನ್ನೇ ಉರುಳಿಸಿ ಲೂಟಿ ಮಾಡುವಷ್ಟು ಪ್ರಬಲವಾಗಿವೆ.

ಶಸ್ತ್ರಾಸ್ತ್ರ ಡಾಲರ್

ಇದೇ ರೀತಿಯಲ್ಲಿ ಹಿಂದೆ ಉಗಿಯಂತ್ರಗಳ ಸಂಶೋಧನೆಯಿಂದ ಇಂಗ್ಲೆಂಡಿನಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯು ಹೇಗೆ ಪಿಸ್ತೂಲ್, ರೈಫಲ್ ಮುಂತಾದ ಆಧುನಿಕ ಶಸ್ತ್ರಾಸ್ತ್ರಗಳ ಸಂಶೋಧನೆಯೊಂದಿಗೆ ಹೇಗೆ ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಐರೋಪ್ಯ ದೇಶಗಳ ವಸಾಹತುಗಳಾಗಿ ಭಾರೀ ಪ್ರಮಾಣದ ಶೋಷಣೆಗೆ ಒಳಗಾಗಬೇಕಾಯಿತು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಜೊತೆಗೆ ಇದು ಆಧುನಿಕ ಬಂಡವಾಳಶಾಹಿಯ ಹುಟ್ಟಿಗೂ ಕಾರಣವಾಯಿತು. ಇದರ ಪರಿಣಾಮವಾಗಿ ಎರಡು ಮಹಾಯುದ್ಧಗಳೂ ನಡೆದು ಮೆಷಿನ್ ಗನ್, ಗ್ರೆನೇಡ್, ಟ್ಯಾಂಕ್, ಆರ್ಟಿಲರಿ, ಯುದ್ಧ ವಿಮಾನ, ಹಡಗು, ಸಬ್‌ ಮೆರೀನ್, ಕ್ಷಿಪಣಿ, ಬಾಂಬ್, ಅಣು- ಪರಮಾಣು ಬಾಂಬ್‌ಗಳ ಸಂಶೋಧನೆಗಳಿಗೂ ಕಾರಣವಾಗಿ ಇಂದು ಅತ್ಯಂತ ಪ್ರಬಲವಾಗಿರುವ ಶಸ್ತ್ರಾಸ್ತ್ರ ಕೈಗಾರಿಕೆಯ ಹುಟ್ಟಿಗೂ ಕಾರಣವಾಯಿತು. ಅದರ ಪ್ರಾಬಲ್ಯ ಇಂದೂ ಮುಂದುವರಿದಿದೆ.

ಬಂಡವಾಳಶಾಹಿಯ ಬೆಳವಣಿಗೆಯು ರಾಜಸತ್ತೆಯನ್ನು ಬಹುತೇಕ ಅಳಿಸಿ ಪ್ರಜಾಪ್ರಭುತ್ವದ ಹುಟ್ಟಿಗೆ ಕಾರಣವಾಯಿತು ಎಂಬುದೇನೋ ನಿಜ. ಆದರೆ ಹೆಚ್ಚಿನ ದೇಶಗಳಲ್ಲಿ ನಾವು ಕಾಣುತ್ತಿರುವುದು ಬಂಡವಾಳಿಗರಿಂದ ನಿಯಂತ್ರಿತವಾದ ನಕಲಿ ಪ್ರಜಾಸತ್ತೆ (Pseudo Democracy) ಯನ್ನು ಅಥವಾ ಸರ್ವಾಧಿಕಾರ ಅಥವಾ ರಾಜಸತ್ತೆಯನ್ನು. ಜಗತ್ತಿನ ಬಹುತೇಕ ದೇಶಗಳ ಆಂತರಿಕ ವಿಷಯಗಳಲ್ಲಿ ಯುಎಸ್‌ಎಯು ನೇರವಾಗಿ ಕೈಯಾಡಿಸುತ್ತಿದೆ. ಉದಾಹರಣೆಗೆ ಬೊಲಿವಿಯಾ, ವೆನೆಜ್ಯುವೆಲಾ, ಬ್ರೆಜಿಲ್ ಮುಂತಾದ ಲ್ಯಾಟಿನ್ ಅಮೇರಿಕನ್ ದೇಶಗಳನ್ನು ನೋಡಬಹುದು.

Photo courtesy: business insider

ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಮುಂದುವರಿಸಿ ಬೆಳೆಸಬೇಕಾದರೆ, ಯುದ್ಧಗಳನ್ನೂ ಉತ್ಪಾದಿಸಿ ಬೆಳೆಸಬೇಕಾಗುತ್ತದೆ. ಆಫ್ರಿಕಾದ ಕಾಂಗೋ, ಸುಡಾನ್, ಸಿಯರಾ ಲಿಯೋನ್, ಸುಡಾನ್ ಸೇರಿದಂತೆ ಬಹುತೇಕ ದೇಶಗಳಲ್ಲಿ ಲಕ್ಷಾಂತರ ಬಡಜನರ ಸಾವಿಗೆ ಕಾರಣವಾದ ಅಂತರ್ಯುದ್ಧಗಳನ್ನು ಪ್ರಚೋದಿಸಿ ಮುನ್ನಡೆಸುತ್ತಿರುವವರು ಯಾರು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಿನ್ನಲು ಗತಿಯಿಲ್ಲದೆ ಎಲುಬಿನ ಹಂದರಗಳಾಗಿರುವ ಜನರ ನಡುವೆ ಸರಕಾರಿ ಪಡೆಗಳಿಗೂ, ಬಂಡುಕೋರರಿಗೂ ಅಥವಾ ಭಯೋತ್ಪಾದಕರಿಗೂ ಶಸ್ತ್ರಾಸ್ತ್ರಗಳು ಎಲ್ಲಿಂದ ಬರುತ್ತವೆ ಎಂಬುದನ್ನು ಯೋಚಿಸಿ ನೋಡೋಣ. ಆಧುನಿಕ ಜಗತ್ತಿನಲ್ಲಿ ಈ ತನಕ ನಡೆದ ಬಹುತೇಕ ಎಲ್ಲಾ ಯುದ್ಧ ಮತ್ತು ಅಂತರ್ಯುದ್ಧಗಳಲ್ಲಿ ಯುಎಸ್‌ಎ ಮತ್ತು ದೈತ್ಯ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಗಳ ಕೈವಾಡವಿದೆ ಎಂಬುದು ಜಾಗತಿಕ ಇತಿಹಾಸ ಓದಿದವರಿಗೆ ಅರ್ಥವಾಗುತ್ತದೆ. ಇಲ್ಲಿ ನಡೆಯುವುದು ಕೂಡಾ ಡಾಲರ್ ಅಚ್ಚುಹಾಕುವ ಕೆಲಸವೇ!

ಇಂತಹಾ ಅಂತರ್ಯುದ್ಧಗಳನ್ನು ಪ್ರಚೋದಿಸಲು ರಾಜಕೀಯ ನಾಯಕರುಗಳ ಹತ್ಯೆಗೂ ಯುಎಸ್‌ಎ ಹಿಂಜರಿದಿಲ್ಲ. ಚಿಲಿಯ ಸಾಲ್ವದೋರ್ ಅಲ್ಲಂಡೆ, ಈಜಿಪ್ಟಿನ ಅನ್ವರ್ ಅಲ್ ಸಾದಾತ್, ಮೊಜಾಂಬಿಕ್‌ನ ಸಮೋರಾ ಮಾಷೆಲ್, ಗ್ರೆನೆಡಾದ ಮೋರಿಸ್ ಬಿಷಪ್, ಸ್ವೀಡನ್‌ನ ಒಲಾಫ್ ಪಾಮೆಯಿಂದ ಹಿಡಿದು ಇತ್ತೀಚಿನ ತನಕ ನಡೆದ ಬಹುತೇಕ ಎಲ್ಲಾ ರಾಜಕೀಯ ನಾಯಕರ ಹತ್ಯೆಗಳ ಹಿಂದೆ ಯುಎಸ್‌ಎಯ ಸಿಐಎ ಅಥವಾ ಪಿಸ್ತೂಲ್-ಪೆಟ್ರೋ ದೈತ್ಯ ಕೈಗಾರಿಕೆಗಳ ಕೈವಾಡವಿದೆ.

ಇಂದು ಭಾರತವೂ ಸೇರಿದಂತೆ ಬಹುತೇಕ ಎಲ್ಲಾ ದೇಶಗಳು ಹಡಗು, ಟ್ಯಾಂಕ್ ಕ್ಷಿಪಣಿ, ವಿಮಾನದಿಂದ ಹಿಡಿದು ಪಿಸ್ತೂಲ್, ರೈಫಲ್, ಗ್ರೆನೇಡ್ ಇತ್ಯಾದಿ ಚಿಕ್ಕಪುಟ್ಟ ಅಸ್ತ್ರಗಳಿಗೂ ಯುಎಸ್‌ಎ, ಫ್ರಾನ್ಸ್, ಸ್ವೀಡನ್, ಇಸ್ರೇಲ್ ಮುಂತಾದ ದೇಶಗಳನ್ನು ಅವಲಂಬಿಸಬೇಕಾಗಿದೆ. ಮೋದಿ ಸರಕಾರವು ಫ್ರಾನ್ಸಿನ ರಫೇಲ್ ವಿಮಾನದ ಉತ್ಪಾದನೆಯನ್ನು ಅನುಭವವೇ ಇಲ್ಲದ ಅನಿಲ್ ಅಂಬಾನಿಯ ಕಂಪೆನಿಗೆ ನೀಡಿ, ಸರಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಸಂಸ್ಥೆಯನ್ನು ಕೊಲ್ಲಲು ಮಾಡಿದ ನಿರ್ಧಾರವನ್ನೂ ಈ ಹಿನ್ನೆಲೆಯಲ್ಲಿಯೇ ನೋಡಬೇಕು.

ಡ್ರಗ್ ಡಾಲರ್

ಎಲ್ಲಾ ರೀತಿಯ ಅಕ್ರಮ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಬಳಕೆಯಾಗುವ ಹಣದ ಬಹುಪಾಲು ಬರುವುದು ಮಾದಕವಸ್ತುಗಳ ಮಾರಾಟದಿಂದ. ಭಾರತದಲ್ಲಿ ಇಂದು ನಾವು ಗಾಂಜಾ, ಅಫೀಮುಗಳ ಕುರಿತು ಮಾತನಾಡುತ್ತಿದ್ದೇವೆ. ಭಾರತದಲ್ಲಿ ಅದನ್ನು ಒತ್ತಾಯದಲ್ಲಿ ಬೆಳೆಸುವಂತೆ ಮಾಡಿದ್ದೇ ಬ್ರಿಟಿಷರು. ಚೀನಾಕ್ಕೆ ಅಫೀಮು ಮಾರಿ ಅಲ್ಲಿನ ಚಹಾವನ್ನು ಯುರೋಪಿನಲ್ಲಿ ಮಾರಾಟ ಮಾಡುವ ಸಲುವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದ, ಅದರಲ್ಲೂ ಉತ್ತರ ಭಾರತದ ರೈತರನ್ನು ಒತ್ತಾಯಿಸಿತ್ತು. ಈ ರೈತರು ಇದರ ಚಟಕ್ಕೆ ತಾವೇ ಬಿದ್ದು ಅಫೀಮು ಎಂಬುದು ಅಲ್ಲಿನ ಸಂಸ್ಕೃತಿಯ ಭಾಗವೇ ಆಗಿಹೋಯಿತು. ಇದರಿಂದ ಈಸ್ಟ್ ಇಂಡಿಯಾ ಕಂಪೆನಿಯ ಶೇರುದಾರರು ಗಳಿಸಿದ ಭಾರೀ ಪ್ರಮಾಣದ ಹಣವೇ ಇಂದಿನ ಆಧುನಿಕ ಬಂಡವಾಳಶಾಹಿಯ ಮೂಲಬಂಡವಾಳ ಎಂಬುದನ್ನು ಮರೆಯಲಾಗದು. 19ನೇ ಶತಮಾನದಲ್ಲಿ ಏಷ್ಯಾದ ಹಲವಾರು ಕಡೆಗಳಲ್ಲಿ ಬ್ರಿಟಿಷರು ನಡೆಸಿದ ಕುಖ್ಯಾತ “ಓಪಿಯಂ ವಾರ್”ಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಆಂಗ್ಲೋ ಅಮೇರಿಕನ್ ಯುದ್ಧಕ್ಕೆ ಕಾರಣವಾದದ್ದು “ಬೋಸ್ಟನ್ ಟೀ ಪಾರ್ಟಿ”! ಈ ಘಟನೆಯಲ್ಲಿ ಚಹಾಪುಡಿ ತುಂಬಿದ್ದ ಬ್ರಿಟಿಷ್ ಹಡಗಿಗೆ ಅಮೇರಿಕಾದ ಬೋಸ್ಟನ್ ಬಂದರಿನಲ್ಲಿ ಬೆಂಕಿ ಹಚ್ಚಲಾಗಿತ್ತು.

ಇಂದು ತಂಬಾಕು ಉದ್ಯಮವೂ ಅತ್ಯಂತ ಪ್ರಭಾವಿಯಾಗಿ ಬೆಳೆದಿರುವುದನ್ನೂ ಕಾಣಬಹುದು. ಇಂಡಿಯನ್ ಟೊಬಾಕೊ ಕಂಪೆನಿ ಸಿಗರೇಟು ಮಾರಿ ಬಂದ ಮೂಲಬಂಡವಾಳದಿಂದಲೇ ಐಟಿಸಿ ಹೆಸರಿನಲ್ಲಿ ಬಿಸ್ಕಿಟ್ ಸೇರಿದಂತೆ ಹಲವಾರು ಉತ್ಪನ್ನಗಳನ್ನು ತಯಾರಿಸುವ ಬೃಹತ್ ಸಂಸ್ಥೆಯಾಗಿರುವುದು ಮತ್ತು ಇದರ ಮಾತೃಸಂಸ್ಥೆಯಾದ “ವಿಲ್ಸ್” ಯಾರದ್ದು ಎಂಬುದನ್ನು ಗಮನಿಸಬೇಕು. ಬಹುತೇಕ ದೇಶಗಳಲ್ಲಿ ತೆರಿಗೆಯ ದೊಡ್ಡಪಾಲು ತಂಬಾಕು ಉತ್ಪನ್ನಗಳಿಂದ ಬರುತ್ತದೆ. ಯುಎಸ್‌ಎ ಸೇರಿದಂತೆ ಹಲವಾರು ದೇಶಗಳಲ್ಲಿ ಮಾಫಿಯಾದ ಹುಟ್ಟು, ಬೆಳವಣಿಗೆಗೆ ಕಾರಣವಾದ ಮದ್ಯವನ್ನೂ ಇದೇ ಸಾಲಿಗೆ ಸೇರಿಸಬಹುದು.

Photo Courtesy: Rand org

ಇಂದು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಮಾದಕವಸ್ತು ವ್ಯಸನಿಗಳನ್ನು ಹೊಂದಿರುವ ಯುಎಸ್‌ಎಯು ಈಗ ತನ್ನ ದೇಶಕ್ಕೆ ಮಾದಕವಸ್ತುಗಳ ಪ್ರವೇಶವನ್ನು ತಡೆಯಲು ಹೆಣಗುತ್ತಿದೆ. ಆದರೆ, ಹೆರಾಯಿನ್‌ನಂತಹ ಮಾದಕ ವಸ್ತುಗಳನ್ನು ಉತ್ಪಾದಿಸುತ್ತಿದ್ದ ಮತ್ತು ಉತ್ಪಾದಿಸುತ್ತಿರುವ ಕಾಂಬೋಡಿಯಾ, ಲಾವೋಸ್, ಮ್ಯಾನ್‌ಮಾರ್ ಮುಂತಾದ ದೇಶಗಳನ್ನು ಒಳಗೊಂಡ “ಗೋಲ್ಡನ್ ಟ್ರಯಾಂಗಲ್”; ಅಫಘಾನಿಸ್ಥಾನ, ಬಲೂಚಿಸ್ತಾನವನ್ನು ಒಳಗೊಂಡ “ಗೋಲ್ಡನ್ ಕ್ರೆಸೆಂಟ್”; ಬೊಲಿವಿಯಾ, ಚಿಲಿ, ಬ್ರೆಜಿಲ್ ಮತ್ತು ಕುಖ್ಯಾತ ಕೊಲಂಬಿಯಾದಲ್ಲಿ ಲ್ಯಾಟಿನ್ ಡ್ರಗ್ ಕಾರ್ಟೆಲ್‌ಗಳ ಪ್ರಭಾವದಲ್ಲಿದ್ದ ಸರಕಾರಗಳನ್ನು ತನ್ನ ಬಂಡವಾಳಶಾಹಿ ಉದ್ದೇಶಗಳಿಗಾಗಿ ಬೆಂಬಲಿಸಿದ ದೇಶವೇ ಈ ಯುಎಸ್‌ಎ. ಉದಾಹರಣೆಗೆ ಅದು ಪನಾಮದಲ್ಲಿ ಮಾದಕವಸ್ತು ದೊರೆ ಎನಿಸಿದ್ದ ಸೇನಾಧಿಕಾರಿ ಇಮ್ಯನ್ಯುವೆಲ್ ನೊರಿಗಾ ಎಂಬ ಕ್ರೂರಿಯನ್ನೇ ಬೆಂಬಲಿಸಿತ್ತು. ಉದ್ದೇಶವೆಂದರೆ ತನ್ನ ವಾಣಿಜ್ಯಕ್ಕೆ ಅತ್ಯಂತ ಮಹತ್ವದ್ದಾದ ಪನಾಮ ಕಾಲುವೆಯ ನಿಯಂತ್ರಣ.

ಫಾರ್ಮಾ ಡಾಲರ್

ಇನ್ನು ನಾವು ಥಂಡಿಗಟ್ಟಲೆಯಲ್ಲಿ ಡಾಲರ್ ಅಚ್ಚುಹಾಕುವ ಔಷಧಿ ಉದ್ಯಮವನ್ನು ಗಮನಿಸೋಣ. ಆಧುನಿಕ ಔಷಧೀಯ ಸಂಶೋಧನೆಗಳಿಗೆ ಮುನ್ನ ಇದೇ ತಂಬಾಕು, ಅಫೀಮುಗಳೇ ಪಾಶ್ಚಾತ್ಯ ಔಷಧಿಯ ಮೂಲದ್ರವ್ಯಗಳಾಗಿದ್ದವು ಎಂಬುದನ್ನು ನಾವು ಗಮನಿಸಬೇಕು. (ಉದಾಹರಣೆಗೆ ಮಾರ್ಫಿನ್). ಇಂದು ದೈತ್ಯ ಕಂಪೆನಿಗಳನ್ನು ಹೊಂದಿರುವ ಔಷಧಿ ತಯಾರಿಕಾ ಕ್ಷೇತ್ರವು ಹಿಂದಿನಿಂದಲೂ ಮನುಷ್ಯ ಕುಲದ ಹಿತಕ್ಕಿಂತ ಡಾಲರ್ ಅಚ್ಚುಹಾಕುವುದರಲ್ಲಿ ಆಸಕ್ತಿ ಹೊಂದಿದೆ.

ಒಂದೇ ಒಂದು ಉದಾಹರಣೆ ನೀಡುವುದಾದಲ್ಲಿ ಸಿಹಿ ಅಂಶವನ್ನು ಹೊಂದಿರುವ ಹಿಂದಿನ ತಲೆಮಾರಿನವರೆಲ್ಲರೂ ಕೇಳಿರಬಹುದಾದ ಸ್ಯಾಕರಿನ್. ಮಕ್ಕಳು ತಿನ್ನುವ ಐಸ್‌ಕ್ಯಾಂಡಿಗಳಲ್ಲೂ ಇದನ್ನು ಸಕ್ಕರೆಯ ಬದಲು ಬಳಸಲಾಗುತ್ತಿತ್ತು. ಟಾರಿನಿಂದ ತಯಾರಾಗುವ ಇದು ಕ್ಯಾನ್ಸರ್‌ಕಾರಕ ಎಂದು 1920ರ ದಶಕದಲ್ಲಿಯೇ ಗೊತ್ತಾದರೂ, ಔಷಧಿ ಸಂಸ್ಥೆಗಳ ಪ್ರಭಾವದಿಂದ ಕೆಲವು ದಶಕಗಳ ಕಾಲ ಅದನ್ನು ನಿಷೇಧಿಸಲಿಲ್ಲ. ಕೆಲವು ಪೈಸೆಗಳ ಖರ್ಚಿನ ಮೂಲದ್ರವ್ಯದ ಅಗತ್ಯವಿರುವ ಜೀವರಕ್ಷಕ ಔಷಧಿಗಳು- ಸಂಶೋಧನೆ, ಪೇಟೆಂಟ್ ನೆಪದಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುತ್ತಾ, ಬಡರೋಗಿಗಳ ಕೈಗೆ ಎಟಕದೆ ಅವರ ಸಾವಿಗೆ ಕಾರಣವಾಗುತ್ತಿವೆ ಮತ್ತು ದೈತ್ಯ ಫಾರ್ಮಾಸ್ಯುಟಿಕಲ್ ಕಂಪೆನಿಗಳನ್ನು ಕೊಬ್ಬಿಸುತ್ತಿವೆ ಎಂಬುದನ್ನು ನಾವು ನೋಡಬೇಕು. ಇಲ್ಲಿ ಯಾವುದೇ ಸಂಸ್ಥೆಯ ಹೆಸರು ಉಲ್ಲೇಖಿಸಲು ಹೋಗುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಹಂದಿ ಜ್ವರ, ಕೋಳಿ ಜ್ವರ, ಸಾರ್ಸ್ ಅದು ಇದು ಎಂದು ಹಲವಾರು ಪಿಡುಗುಗಳನ್ನು ನಾವು ನೋಡಿದ್ದೇವೆ. ಇದೀಗ ಕೋವಿಡ್-19 ವೈರಸ್ ಹುಟ್ಟುಹಾಕುವ ಕೊರೋನ ಎಂಬುದು ವಿಶ್ವದಾದ್ಯಂತ ಮನೆಮಾತಾಗಿದ್ದು, ಹಲವಾರು ದೇಶಗಳ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಇದು ಸಂಪೂರ್ಣವಾಗಿ ನಿಜವೇ? ಇಂದು ಕೊರೋನ ಕುರಿತು ಇನ್ನಿಲ್ಲದ ಭಯ ಹುಟ್ಟಿಸಲಾಗುತ್ತಿರುವುದರ ಹಿಂದಿನ ಹುನ್ನಾರವೇನೆಂದು ಯೋಚಿಸಬೇಕು.

ಕೊರೋನ ಹೆಸರಿನಲ್ಲಿ ಬಡ, ಮಧ್ಯಮ ವರ್ಗದ ಜನರು ಇನ್ನಷ್ಟು ಬಡವರಾದರೂ ವೈದ್ಯಕೀಯ, ಔಷಧಿ ಕ್ಷೇತ್ರವೂ ಸೇರಿದಂತೆ ಹಲವು ಕ್ಷೇತ್ರಗಳ ಜನರು ಇನ್ನಷ್ಟು ಶ್ರೀಮಂತರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಕೊರೋನ ಹೆಸರಿನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ರಾಜಕೀಯ ಮತ್ತು ಹುನ್ನಾರಗಳು, ಕೊರೋನ ಲಸಿಕೆ ಸಂಶೋಧನೆಯ ಪೈಪೋಟಿಗಳ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದರಿಂದ ಮತ್ತು ಸ್ಥಳಾವಕಾಶದ ಕೊರತೆಯಿಂದ ಇಲ್ಲಿ ವಿವರವಾಗಿ ಚರ್ಚಿಸಿಲ್ಲ.

ಮೇಲೆ ಹೇಳಿದ ಎಲ್ಲಾ ವ್ಯವಹಾರಗಳು ಬ್ಯಾಂಕಿಂಗ್, ಐಟಿ, ಬಿಟಿ, ಮಾಧ್ಯಮ ಕ್ಷೇತ್ರಗಳಲ್ಲಿ ದೈತ್ಯ ಸಂಸ್ಥೆಗಳನ್ನು ಹುಟ್ಟುಹಾಕಿವೆ ಮಾತ್ರವಲ್ಲ ಪೂರಕ ಪಾತ್ರಗಳನ್ನು ವಹಿಸುತ್ತಿವೆ. ಹಣಕಾಸಿನ ಧ್ರುವೀಕರಣವಾಗುತ್ತಿದ್ದು, ಜಗತ್ತಿನ ಸಂಪತ್ತು ಕೆಲವೇ ವ್ಯಕ್ತಿಗಳ, ಸಣ್ಣ ವರ್ಗವೊಂದರ ಕೈಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಈ ವಿಷಯದಲ್ಲೂ ಒಂದು “ಒಪೆಕ್” ಸೃಷ್ಟಿಯಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಅದರ ಭಾಗವಾಗಿರುವಂತೆ ಕಾಣಿಸುತ್ತಿದೆ. ಏಕೆಂದರೆ, ಈಗ ಕೊರೋನ ಒಂದೇ ಅದರ ಕಾರ್ಯಕ್ರಮದಲ್ಲಿ ರಾರಾಜಿಸುತ್ತಿದ್ದು, ಉಳಿದ ಅಪಾಯಕಾರಿ ಪ್ರಾಣ ತಿನ್ನುವ ರೋಗಗಳು ಮೂಲೆಗುಂಪಾಗಿವೆ. ಆರೋಗ್ಯ ರಕ್ಷಣೆಗೆ ಅಗತ್ಯವಾದ ಪೌಷ್ಟಿಕತೆ, ಉತ್ತಮ ಕೆಲಸದ ವಾತಾವರಣ, ಶುದ್ಧ ನೀರು, ಮಾಲಿನ್ಯಮುಕ್ತ ಗಾಳಿ, ಆಸ್ಪತ್ರೆ ಸೌಲಭ್ಯಗಳು, ಉದ್ಯಮವಾಗುತ್ತಿರುವ ವೈದ್ಯಕೀಯ ಕ್ಷೇತ್ರ ಇತ್ಯಾದಿ ನಿರ್ಣಾಯಕ ವಿಷಯಗಳು ಅದರ ಕಾರ್ಯಕ್ರಮ ಪಟ್ಟಿಯಿಂದ ಸಂಪೂರ್ಣವಾಗಿ ಹೊರಬಿದ್ದಂತೆ ಕಾಣುತ್ತಿದೆ.

ಡಾಲರ್ ಪ್ರಭಾವ

1971ರಲ್ಲಿ ಯುಎಸ್‌ಎ ಅಧ್ಯಕ್ಷ ರಿಚರ್ಡ್ ನಿಕ್ಸನ್ ಯುಎಸ್ ಡಾಲರನ್ನು ಚಿನ್ನದಲ್ಲಿ ಪಾವತಿ ಮಾಡಲಾಗುವುದಿಲ್ಲ ಎಂದು ಘೋಷಿಸಿದರು. ಇದಕ್ಕೆ ಮುಖ್ಯ ಕಾರಣವೆಂದರೆ ವಿಯೆಟ್ನಾಂ ಯುದ್ಧಕ್ಕಾಗಿ ಮಾಡಿದ ಸಾಲ. ಇದೇ ರೀತಿಯಲ್ಲಿ ತೈಲದ ಬದಲಾಗಿ ಡಾಲರ್ ಹೊರತು ಬೇರೆ ಯಾವುದೇ ಕರೆನ್ಸಿಗೆ ಬದಲಾಗಿ ತೈಲ ಮಾರದಂತೆ “ಒಪೆಕ್” ದೇಶಗಳ ಕೈತಿರುಚಲಾಯಿತು. ಮೇಲೊಮ್ಮೆ ವಿವರಿಸಿದ ಕೃತಕ ತೈಲ ಕೊರತೆಯ ಪರಿಣಾಮವಾಗಿ ಬಹುತೇಕ ಎಲ್ಲಾ ದೇಶಗಳು ತಮ್ಮ ನಿಧಿ ಮೀಸಲನ್ನು ಕರಗಿಸಿಕೊಂಡು ಡಾಲರ್ ರೂಪದ ಸಾಲಪಡೆಯುವುದು ಅನಿವಾರ್ಯವಾಯಿತು. ಇಂದಿಗೂ ಎಲ್ಲಾ ದೇಶಗಳು ವಿನಿಮಯ ಕರೆನ್ಸಿಯಾಗಿ ಡಾಲರನ್ನೇ ಅವಲಂಬಿಸಬೇಕಾಗಿದೆ. ಮೇಲೆ ಹೇಳಿದ ಎಲ್ಲಾ ಅಕ್ರಮ ಮಾರ್ಗಗಳಿಂದ ಅಚ್ಚುಹಾಕಲಾದ ಡಾಲರ್ ಇಂದು ವಿಶ್ವವನ್ನೇ, ಅಂದರೆ ನಮ್ಮಂತಹ ಬಡ ಜನಸಾಮಾನ್ಯರ ಜೀವನವನ್ನೇ ನಿಯಂತ್ರಿಸುತ್ತಿದೆ.

Photo Courtesy: 123RF.com

ಮೇಲೆ ಹೇಳಿದ ಪರಸ್ಪರ ತಳಕುಹಾಕಿಕೊಂಡಿರುವ ಕ್ಷೇತ್ರಗಳು ಮತ್ತು ಬಂಡವಾಳಶಾಹಿಯು ಹೇಗೆ ಐಟಿ, ಬಿಟಿ, ಬ್ಯಾಕಿಂಗ್ ಮತ್ತು ಮಾಧ್ಯಮ ಮುಂತಾದವುಗಳ ಮೂಲಕ ನಮ್ಮನ್ನು ನಿಯಂತ್ರಿಸುತ್ತಿದೆ ಎಂಬ ಬಗ್ಗೆ ವಿವರವಾದ ಲೇಖನ ಸರಣಿಗಳನ್ನೇ ಬರೆಯಬಹುದು. ಆದರೆ, ವಿಶ್ವದಾದ್ಯಂತ ನಡೆಯುತ್ತಿರುವ ರೈತ, ಕಾರ್ಮಿಕ, ದಲಿತ, ಆದಿವಾಸಿ, ಬಡಜನರ ಹೋರಾಟಗಳು ತಮ್ಮ ಮೇಲೆ ನೇರ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಈ ಅಂಶಗಳ ಕುರಿತು ಯೋಚಿಸಬೇಕು ಎಂಬ ಕುರಿತು ಗಮನ ಸೆಳೆಯುವುದೇ ಈ ಕಿರು ಬರಹದ ಉದ್ದೇಶ.

  • ನಿಖಿಲ್ ಕೋಲ್ಪೆ

ಇದನ್ನೂ ಓದಿ: ನಾವು ಯಂತ್ರಗಳನ್ನು ಜೀತದ ಆಳು ಅಂತ ತಿಳ್ಕೊಂಡಿರಬಹುದು, ಆದರೆ ಅವೇ ನಮ್ಮನ್ನು ಜೀತಕ್ಕೆ ಇಟ್ಟುಕೊಂಡರೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...