ಕಳೆದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ರದ್ದುಪಡಿಸಿರುವ 2018ರ ಚುನಾವಣಾ ಬಾಂಡ್ ಯೋಜನೆಯಡಿ ರಾಜಕೀಯ ಪಕ್ಷಗಳು ಸಂಗ್ರಹಿಸಿರುವ ಎಲ್ಲಾ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಚುನಾವಣಾ ಬಾಂಡ್ ಹೆಸರಿನಲ್ಲಿ ರಾಜಕೀಯ ಪಕ್ಷಗಳು ಪಡೆದಿರುವ ಸುಮಾರು 16,518 ಕೋಟಿ ರೂಪಾಯಿ ಹಣ ದೇಣಿಗೆಯಲ್ಲ, ಬದಲಾಗಿ ಅದು ಕಾರ್ಪೋರೇಟ್ ಸಂಸ್ಥೆಗಳು ಲಾಭ ಪಡೆಯಲು (quid Pro quo) ನೀಡಿರುವುದಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಚುನಾವಣಾ ಬಾಂಡ್ ಮೂಲಕ ತಾವು ಪಡೆದ ಹಣಕ್ಕಾಗಿ ರಾಜಕೀಯ ಪಕ್ಷಗಳು ಕಾರ್ಪೋರೇಟ್ ದಾನಿಗಳಿಗೆ ಮಾಡಿಕೊಟ್ಟ ಕಾನೂನುಬಾಹಿರ ಅನುಕೂಲಗಳ ಕುರಿತಂತೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವಂತೆಯೂ ಅರ್ಜಿದಾರರು ಕೋರಿದ್ದಾರೆ.
ಒಟ್ಟು 23 ರಾಜಕೀಯ ಪಕ್ಷಗಳು ಸುಮಾರು 1,210 ಕ್ಕೂ ಹೆಚ್ಚು ದಾನಿಗಳಿಂದ ಚುನಾವಣಾ ಬಾಂಡ್ ಮೂಲಕ ಅಂದಾಜು 12,516 ಕೋಟಿ ರೂಪಾಯಿ ಪಡೆದಿದೆ. ಸುಮಾರು 21 ದಾನಿಗಳು ತಲಾ 100 ಕೋಟಿ ರೂ.ಗೂ ಅಧಿಕ ಮೊತ್ತವನ್ನು ನೀಡಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್ ಈ ವಿವರಗಳನ್ನು ತೆರದಿಟ್ಟಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿಯಲ್ಲಿನ ಪ್ರಮುಖ ಅಂಶಗಳು
ಎಲ್ಲಾ ಫಲಾನುಭವಿ ರಾಜಕೀಯ ಪಕ್ಷಗಳ 2018-2019ರಿಂದ 2023-2024ರ ವರೆಗಿನ ಆದಾಯ ಮರು ಪರಿಶೀಲಿಸಬೇಕು
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13ಎ ಅಡಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಮೊತ್ತಕ್ಕೆ ಸಂಬಂಧಿಸಿದಂತೆ ಪಕ್ಷಗಳು ಆದಾಯ ತೆರಿಗೆ ವಿನಾಯಿತಿ ಪಡೆಯಲು ಅನುಮತಿ ನೀಡಬಾರದು.
ಕ್ರಿಮಿನಲ್ ಮೊಕದ್ದಮೆ ತಪ್ಪಿಸಲು ಅಥವಾ ಒಪ್ಪಂದ ಅಥವಾ ಇತರ ನೀತಿ ನಿರೂಪಣಾ ವಿಚಾರಗಳ ಮೂಲಕ ವಿತ್ತೀಯ ಲಾಭ ಪಡೆಯುವುದಕ್ಕಾಗಿ ಕಂಪೆನಿಗಳು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ಪಾವತಿಸಿರುವುದು ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ಅದನ್ನು ನಗದೀಕರಿಸಿರುವ ವಿವರಗಳಿಂದ ತಿಳಿಯುತ್ತದೆ.
ಕಾರ್ಪೊರೇಟ್ ಸಂಸ್ಥೆಗಳ ಕ್ರಿಮಿನಲ್ ಮೊಕದ್ದಮೆಯಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ ಅಥವಾ ಸರ್ಕಾರಿ ಬೊಕ್ಕಸದ ಲೆಕ್ಕದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಸರ್ಕಾರದ ದೊಡ್ಡ ಮೊತ್ತವನ್ನು ನೀಡಿ ಅನಗತ್ಯ ಲಾಭ ಉಂಟು ಮಾಡುವ ಮೂಲಕ ಅವುಗಳಿಂದ ಹಣ ಗಿಟ್ಟಿಸಲು ಚುನಾವಣಾ ಬಾಂಡ್ ಅನ್ನು ಸಾಧನವಾಗಿ ಮತ್ತು ವಿಧಾನವಾಗಿ ರಾಜಕೀಯ ಪಕ್ಷಗಳು ಬಳಸಿಕೊಂಡಿವೆ.
ಕಾರ್ಪೋರೇಟ್ ವ್ಯಕ್ತಿಗಳು ಮತ್ತು ಸಂಸ್ಥೆಗಳು ಬಾಂಡ್ ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಫೆ.15ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ ರದ್ದುಗೊಳಿಸಿದೆ.
ಯೋಜನೆಯ ರದ್ದತಿ ವೇಳೆ ಇದು ‘ಅಸಂವಿಧಾನಿಕ ಮತ್ತು ಜನರ ಮಾಹಿತಿ ಹಕ್ಕಿಗೆ ವಿರುದ್ದವಾಗಿದೆ’ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾರತೀಯ ಚುನಾವಣಾ ಆಯೋಗಕ್ಕೆ ನೀಡಿತ್ತು. ಆ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ನೋಡಿದರೆ, ಹಲವು ಕಾರ್ಪೋರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿ ಲಾಭ ಪಡೆದುಕೊಂಡಿರುವುದು ಗೊತ್ತಾಗುತ್ತದೆ.
ಇದನ್ನೂ ಓದು : ರೈಲ್ವೆ ಲೋಕೋ ಪೈಲಟ್‌ಗಳನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ


