ಕೇಂದ್ರ ಸರ್ಕಾರದ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ಯೋಜನೆಯಡಿ 20.48 ಲಕ್ಷ ಅನರ್ಹ ಫಲಾನುಭವಿಗಳಿಗೆ 1,364 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿದೆ ಎಂದು ಮಾಹಿತಿ ಹಕ್ಕು ಅರ್ಜಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಕೃಷಿ ಸಚಿವಾಲಯ ಉತ್ತರಿಸಿದೆ ಎಂದು ದಿವೈರ್.ಇನ್ ವರದಿ ಮಾಡಿದೆ.
ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಐದು ಎಕರೆಯೊಳಗೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ನೀಡುತ್ತಾ ಬರಲಾಗುತ್ತಿದೆ.
ಆರ್.ಟಿ.ಐ ಅರ್ಜಿಗೆ ಉತ್ತರಿಸಿರುವ ಕೇಂದ್ರ ಕೃಷಿ ಸಚಿವಾಲಯವು ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಅನರ್ಹ ರೈತರು ಮತ್ತು ಆದಾಯ ತೆರಿಗೆ ಪಾವತಿಸುವವ ರೈತರಿಗೆ ಪ್ರೋತ್ಸಾಹಧನವನ್ನು ನೀಡಿದ್ದು ಇವರು ಎರಡು ವರ್ಗದ ಅನರ್ಹ ಫಲಾನುಭವಿಗಳು ಎಂಬುದನ್ನು ಗುರುತಿಸಲಾಗಿದೆ.
ಇದನ್ನೂ ಓದಿ: ವೇದಿಕೆಗೆ ನುಗ್ಗಿ ಕೃಷಿ ಕಾಯ್ದೆಗಳ ವಿರುದ್ಧ ಧಿಕ್ಕಾರ ಕೂಗಿದ ರೈತರು: ಬೆದರಿ ರೈತ ಕಾರ್ಯಕ್ರಮ ರದ್ದುಗೊಳಿಸಿದ ಹರಿಯಾಣ ಸಿಎಂ
ಸರ್ಕಾರದಿಂದ ಮಾಹಿತಿ ಪಡೆದಿರುವ ಕಾಮನ್ವೆಲ್ತ್ ಮಾನವ ಹಕ್ಕುಗಳ ಉಪಕ್ರಮದ ಆರ್.ಟಿ.ಐ. ಅರ್ಜಿದಾರ ವೆಂಕಟೇಶ್ ನಾಯಕ್ “ಈ ಅನರ್ಹ ರೈತರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಆದಾಯ ತೆರಿಗೆ ಪಾವತಿದಾರರ ವರ್ಗಕ್ಕೆ ಸೇರಿದವರು. ಉಳಿದ 44.41ರಷ್ಟು ರೈತರು ಅನರ್ಹ ರೈತ ವರ್ಗಕ್ಕೆ ಸೇರಿದವರು ಎಂದು ಹೇಳಿದ್ದಾರೆಂದು ವರದಿ ತಿಳಿಸಿದೆ.
ಮಾಧ್ಯಮ ವರದಿಗಳ ಪ್ರಕಾರ ಅನರ್ಹ ರೈತರಿಗೆ ವರ್ಗಾಯಿಸಲಾದ ಇಷ್ಟೊಂದು ಪ್ರಮಾಣದ ಹಣವನ್ನು ವಾಪಸ್ ಪಡೆಯಲು ಕ್ರಮಗಳನ್ನು ಆರಂಭಿಸಲಾಗಿದೆ ಎಂದು ನಾಯಕ್ ಹೇಳಿದ್ದಾರೆ ಎಂದು ದಿವೈರ್.ಇನ್ ವರದಿಯಲ್ಲಿ ಉಲ್ಲೇಖಿಸಿದೆ.

ಆರ್.ಟಿ.ಐ ಕಾಯ್ದೆ 2005ರ ಅಡಿಯಲ್ಲಿ ದತ್ತಾಂಶ ಪಡೆದಿದ್ದು 2019ರಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆ ಆರಂಭಗೊಂಡಾಗಿನಿಂದ ಜುಲೈ 31 ರವರೆಗೆ 1,364.13 ಕೋಟಿ ರೂಪಾಯಿಗಳನ್ನು ಅನರ್ಹ ವ್ಯಕ್ತಿಗಳಿಗೆ ಮತ್ತು ಆದಾಯ ತೆರಿಗೆ ಪಾವತಿಸುವ ರೈತರಿಗೆ ಪಾವತಿಸಲಾಗಿದೆ. ಸರ್ಕಾರ ನೀಡಿದ ದತ್ತಾಂಶದಿಂದ ಹಣ ಅರ್ಹ ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂಬ ಅಂಶ ಬೆಳಕಿಗೆ ಬರುತ್ತದೆ.
ಪಂಜಾಬ್, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ಅನರ್ಹ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದುನ್ನು ವರದಿ ಬೊಟ್ಟು ಮಾಡಿದೆ. ದೇಶಾದ್ಯಂತ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ಶೇ.23.16ರಷ್ಟು (4.74ಲಕ್ಷ) ಪಂಜಾಬ್ ರಾಜ್ಯದ ಅನರ್ಹ ರೈತರು ಹಣ ಪಡೆದಿದ್ದು ಮೊದಲ ಸ್ಥಾನದಲ್ಲಿದೆ. ಅಸ್ಸಾಂ 16.87ರಷ್ಟು (3.45) ಮಂದಿ, ಮಹಾರಾಷ್ಟ್ರ ಶೇ.13.99ರಷ್ಟು ಅನರ್ಹ ವ್ಯಕ್ತಿಗಳು ಹಣ ಪಡೆದಿದ್ದಾರೆ ಎಂದು ಆರ್.ಟಿ.ಐ. ಅರ್ಜಿಯಿಂದ ಬಹಿರಂಗಗೊಂಡಿದೆ. ಈ ಮೂರು ರಾಜ್ಯಗಳು ಅರ್ಧಕ್ಕಿಂತ ಹೆಚ್ಚು ಅಂದರೆ ಶೇ.54.03ರಷ್ಟು ಪಾಲನ್ನು ಪಡೆದಿವೆ. ಗುಜರಾತ್ ಶೇ.8.05ರಷ್ಟು ಅಂದರೆ 1.64 ಲಕ್ಷ, ಉತ್ತರಪ್ರದೇಶ ಶೇ.8.01ರಷ್ಟು ಅಂದರೆ 1.64 ಲಕ್ಷ ಅನರ್ಹ ಫಲಾನುಭವಿಗಳು ಹಣವನ್ನು ಪಡೆದಿದ್ದು ನಾಲ್ಕು ಮತ್ತು ಐದನೇ ಸ್ಥಾನವನ್ನು ಪಡೆದಿವೆ.
ಇದನ್ನೂ ಓದಿ: ರೈತರು ಬಿರಿಯಾನಿ ತಿಂದು ಹಕ್ಕಿ ಜ್ವರ ಹರಡುತ್ತಿದ್ದಾರೆ: ನಾಲಿಗೆ ಹರಿಯಬಿಟ್ಟ ಬಿಜೆಪಿ ಶಾಸಕ
ಸಿಕ್ಕಿಂ ರಾಜ್ಯದಲ್ಲಿ ಕೇವಲ ಒಂದು ಶೇಕಡ ಅನರ್ಹ ಫಲಾನುಭವಿ ಹಣ ಪಡೆದಿದ್ದಾರೆ. ಈ ರಾಜ್ಯಗಳಲ್ಲಿ 1,364.13 ಕೋಟಿ ರೂಗಳನ್ನು 68.20 ಲಕ್ಷ ಕಂತುಗಳಲ್ಲಿ ಪಾವತಿಸಲಾಗಿದೆ. ಇದರಲ್ಲಿ 49.25 ಲಕ್ಷ ಕಂತುಗಳನ್ನು ಆದಾಯ ತೆರಿಗೆ ಪಾವತಿಸುವ ರೈತರಿಗೆ ನೀಡಿದ್ದರೆ, ದೇಶಾದ್ಯಂತ ಅನರ್ಹ ರೈತರಿಗೆ 18.95 ಲಕ್ಷ ಕಂತುಗಳನ್ನು ಪಾವತಿಸಲಾಗಿದೆ ಎಂದು ಆರ್.ಟಿ.ಐ ಅಂಕಿಅಂಶಗಳನ್ನು ಉಲ್ಲೇಖಿಸಿ ತಿಳಿಸಿದೆ.
ಈ ಯೋಜನೆಯಡಿಯಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಕಂತುಗಳಲ್ಲಿ 2 ಸಾವಿರ ರೂಗಳನ್ನು ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದು ಅಧಿಕ ಆದಾಯವನ್ನು ಹೊಂದಿರುವವರನ್ನು ಹೊರಗಿಡುವ ಮಾನದಂಡಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಲಾಗಿದೆ.
ಸ್ಥಾಂಸ್ಥಿಕ ಭೂಮಾಲಿಕರು ಮಾತ್ರವಲ್ಲದೆ, ಒಂದು ಅಥವಾ ಹೆಚ್ಚಿನ ಸದಸ್ಯರು ಫಲಾನುಭವಿಗಳಲ್ಲಿರುವ ರೈತ ಕುಟುಂಬಗಳು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು, ಮಾಜಿ ಮತ್ತು ಪ್ರಸ್ತುತ ಸಚಿವರು, ಸಂಸದರು, ಶಾಸಕರು, ಎಂಎಲ್‌ಸಿಗಳು, ಮೇಯರ್‌ಗಳು, ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಹಾಲಿ ಮತ್ತು ನಿವೃತ್ತ ಸರ್ಕಾರಿ ನೌಕರರು ಆದಾಯ ತೆರಿಗೆ ಪಾವತಿದಾರರು, ವೈದ್ಯರು, ಇಂಜಿನಿಯರ್‌ಗಳು ಸೇರಿದಂತೆ ಹಲವಾರು ವರ್ಗದ ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
ಇದನ್ನೂ ಓದಿ: ಪ್ರತಿಭಟನಾ ಸ್ಥಳದಲ್ಲಿಯೇ ಈರುಳ್ಳಿ ಬಿತ್ತನೆ: ಹೋರಾಟದಲ್ಲಿಯೂ ಕೃಷಿ ಬಿಡಲೊಪ್ಪದ ರೈತರು!


