ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 13 ರಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಲಿದ್ದು, ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಮಸೀದಿಗೆ ಸ್ಥಳೀಯ ಅಧಿಕಾರಿಗಳು “ಕೇಸರಿ” ಬಣ್ಣ ಬಳಿದಿದ್ದಾರೆ ಎಂದು ಮಸೀದಿ ಸಮಿತಿಯ ಸದಸ್ಯರು ಹೇಳಿದ್ದಾರೆ.
ಮಸೀದಿಗೆ ಕೇಸರಿ ಬಣ್ಣ ಬಳಿದಿರುವ ಆರೋಪಕ್ಕೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿಲ್ಲ. ರಸ್ತೆಯಲ್ಲಿರುವ ಎಲ್ಲಾ ಕಟ್ಟಡಗಳಿಗೆ ಏಕರೂಪದ ಬಣ್ಣವನ್ನು ಬಳಿಯಲಾಗುತ್ತಿದೆ. ಅದು “ತಿಳಿ ಗುಲಾಬಿ” ಬಣ್ಣವಾಗಿದೆ ಎಂದು ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದರು.
ಮಸೀದಿಗೆ ಕೇಸರಿ ಬಣ್ಣ ಬಳಿದಿರುವುದಕ್ಕೆ ಮುಸ್ಲಿಂ ಸಮುದಾಯದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ನಂತರ, ಬುಲನಾಳ ಪ್ರದೇಶದಲ್ಲಿ ಇರುವ ಮಸೀದಿಗೆ ಮತ್ತೆ ಬಿಳಿ ಬಣ್ಣ ಬಳಿಯಲಾಗುತ್ತಿದೆ ಎಂದು ವರದಿಯಾಗಿದೆ.
“ಮಸೀದಿಯು ಮೊದಲು ಬಿಳಿ ಬಣ್ಣದ್ದಾಗಿತ್ತು. ಅದಕ್ಕೆ ಅಧಿಕಾರಿಗಳು ಕೇಸರಿ ಬಣ್ಣ ಬಳಿಸಿದ್ದರು. ಈ ವೇಳೆ ಅವರು ಮಸೀದಿ ಸಮಿತಿಯ ಸಲಹೆಯನ್ನೂ ಪಡೆದಿಲ್ಲ” ಎಂದು ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯ ಮೊಹಮ್ಮದ್ ಎಜಾಜ್ ಇಸ್ಲಾಹಿ ಹೇಳಿದ್ದಾರೆ.
ನಮ್ಮ ಅನುಮತಿಯಿಲ್ಲದೆ ಈ ಕೇಸರಿ ಬಣ್ಣ ಬಳಿಯುವ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿರುವ ಅವರು, ಕಾಶಿ ವಿಶ್ವನಾಥ ದೇವಸ್ಥಾನದ ಕಚೇರಿಗೆ ತಮ್ಮ ಆಕ್ಷೇಪಣೆ ಸಲ್ಲಿಸಿದ್ದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಆಕ್ಷೇಪಣೆಯನ್ನು ಎತ್ತಲು ಪ್ರಯತ್ನಿಸಿದ್ದೆವು. ಆದರೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಇಸ್ಲಾಹಿ ಹೇಳಿದ್ದಾರೆ.
“ನಂತರ, ಸ್ಥಳೀಯ ಆಡಳಿತವು ಇದನ್ನು ಅರ್ಥಮಾಡಿಕೊಂಡಿದೆ. ಈಗ ಮಸೀದಿಗೆ ಬಿಳಿ ಬಣ್ಣ ಬಳಿಯಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದ (ವಿಡಿಎ) ಕಾರ್ಯದರ್ಶಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ವರ್ಮಾ ಅವರು ಈ ಹಿಂದೆ ದೇಗುಲಕ್ಕೆ ಹೋಗುವ ರಸ್ತೆಯಲ್ಲಿರುವ ಕಟ್ಟಡಗಳಿಗೆ ಏಕರೂಪದ ಬಣ್ಣವನ್ನು ಬಳಿಯಲಾಗುತ್ತದೆ ಎಂದು ಹೇಳಿದ್ದರು ಎಂದು ವರದಿಯಾಗಿದೆ.
ಈ ಪ್ರದೇಶದಲ್ಲಿನ ಹೆಚ್ಚಿನ ಕಟ್ಟಡಗಳು ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ. ಇವುಗಳಿಗೆ ಬಳಿದಿರುವ ಬಣ್ಣ “ತಿಳಿ ಗುಲಾಬಿ” ಬಣ್ಣದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ಸಹ ಪ್ರಯಾಗ್‌ರಾಜ್‌ನ ಸ್ಥಳೀಯ ಅಧಿಕಾರಿಗಳು ಬಿಜೆಪಿ ಪ್ರಚಾರಕ್ಕಾಗಿ ಹಲವಾರು ಮನೆಗಳಿಗೆ ಕೇಸರಿ ಬಣ್ಣ ಬಳಿದಿದ್ದರು. ಇದರಿಂದ ಆಕ್ರೋಶಿತಗೊಂಡ ಸ್ಥಳೀಯರು ಪೊಲೀಸ್ ದೂರು ನೀಡಿದ್ದರು. ನಂತರ ಕೇಸರಿ ಬಣ್ಣದ ಮೇಲೆ ಬೇರೆ ಬಣ್ಣಗಳನ್ನು ಬಳಿಯಲಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ವಿರೋಧ ಪಕ್ಷಗಳ ಒಕ್ಕೂಟವಿಲ್ಲ: ಶಿವಸೇನೆ ಮುಖಂಡ ಸಂಜಯ್ ರಾವತ್


