ಹೃದಯಾಘಾತದಿಂದಾಗಿ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಜನಪ್ರಿಯ ತಮಿಳು ನಟ ವಿವೇಕ್ (59) ಅವರು ಚಿಕಿತ್ಸೆ ಫಲಕಾರಿಯಾಗಿದೆ ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ.
ಶುಕ್ರವಾರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಐಸಿಯು ನಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನಾಡಿಮಿಡಿತ ಕೆಲಸ ಮಾಡುತ್ತಿಲ್ಲ, ಆದರೂ ಅವರನ್ನು ಉಳಿಸಿಕೊಳ್ಳುವ ಸರ್ವಪ್ರಯತ್ನ ಮಾಡುಡುತ್ತಿದ್ದೇವೆ ಎಂದಿದ್ದರು. ಆದರೆ ಕೊನೆಗೂ ವಿವೇಕ್ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.
ನಟ ವಿವೇಕ್ ಅವರನ್ನು ಗುರುವಾರವಷ್ಟೇ ಸಾರ್ವಜನಿಕ ಆರೋಗ್ಯ ಸಂದೇಶಗಳನ್ನು ಹರಡುವ ರಾಜ್ಯ ರಾಯಭಾರಿಯಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಅಂದು ಅವರು ಸರ್ಕಾರಿ ಒಮಂದುರಾರ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಂಡು, ಎಲ್ಲರೂ ಲಸಿಕೆ ಪಡೆದುಕೊಳ್ಳಲು ಮುಂದೆ ಬರಬೇಕೆಂದು ಒತ್ತಾಯಿಸಿದ್ದರು.
“ಈ ಲಸಿಕೆಗಳಲ್ಲಿ ಯಾವುದೇ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂಬ ಬಗ್ಗೆ ಜನರು ಭಯಪಡಬಾರದು. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ಸುರಕ್ಷಿತವಾಗಿದ್ದು, ಅದು ಮಾತ್ರ ನಮ್ಮನ್ನು ಉಳಿಸುತ್ತದೆ. ಇದು ಸೋಂಕಿಗೆ ಒಳಗಾಗುವುದನ್ನು ತಡೆಯದಿದ್ದರೂ ಸಹ, ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ” ಎಂದು ಅವರು ಹೇಳಿದ್ದರು.
ತಮಿಳು ಚಿತ್ರರಂಗದ ಜನಪ್ರಿಯ ನಟನಾಗಿರುವ ವಿವೇಕ್ ಅವರನ್ನು ನಿರ್ದೇಶಕ ಕೆ. ಬಾಲಚಂದರ್ ಅವರು ಚಿತ್ರರಂಗಕ್ಕೆ ಪರಿಚಯಿಸಿದ್ದರು. ವಿವೇಕ್ ಅವರು “ರನ್” (2002), “ಸಾಮಿ” (2003), “ಪೆರಳಗನ್”(2004), “ಪಾರ್ಥಿಬನ್ ಕನವು” (2003), “ಅನ್ನಿಯನ್” (2005) ಮತ್ತು “ಶಿವಾಜಿ” (2007) ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಹಾಸ್ಯನಟರಾಗಿ ಜನಪ್ರಿಯರಾಗಿದ್ದಾರೆ.
ಸುಮಾರು 220 ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ತಮಿಳುನಾಡಿನಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದರು. ಅಂತಹ ಜನಪ್ರಿಯ ನಟ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.
ಇದನ್ನೂ ಓದಿ; ಕುಂಭಮೇಳದಲ್ಲಿ ಭಾಗವಹಿಸಿದ್ದ ಸಾಧು ಕೊರೊನಾಗೆ ಬಲಿ, 80 ಸಾಧುಗಳಿಗೆ ಸೋಂಕು ದೃಢ


