Homeಮುಖಪುಟನಿಕೋಬಾರ್ ದ್ವೀಪದಲ್ಲಿ ಬಂದರು: ಒಡಲಿಗೆ ಕೊಳ್ಳಿ ಇಡುವ ಯೋಜನೆ!

ನಿಕೋಬಾರ್ ದ್ವೀಪದಲ್ಲಿ ಬಂದರು: ಒಡಲಿಗೆ ಕೊಳ್ಳಿ ಇಡುವ ಯೋಜನೆ!

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ಮಾನವನ ಅತಿಯಾದ ಹಸ್ತಕ್ಷೇಪಕ್ಕೆ ಪ್ರಕೃತಿ ತನ್ನ ಉತ್ತರವನ್ನು ನೀಡುತ್ತಿರುವುದು ನಮ್ಮೆಲ್ಲರ ಗಮನಕ್ಕೆ ಬಂದೇ ಇರುತ್ತದೆ. ಉದಾಹರಣೆಗೆ ಕೇರಳದ ವಯನಾಡು ಮತ್ತು ನಮ್ಮದೇ ಕೊಡಗಿನ ಭೂಕುಸಿತಗಳು, ಹಿಮಾಲಯದ ಮಡಿಲಲ್ಲಿ ಇರುವ ಉತ್ತರಾಖಂಡ ರಾಜ್ಯದ ಜೋಷಿಮಠದಲ್ಲಿ ಉಂಟಾದ ಭೂಕುಸಿತ ಮತ್ತು ಚಮೋಲಿಯಲ್ಲಿ ಉಂಟಾದ ಮೇಘಸ್ಫೋಟ- ಹೀಗೆ ಸಾಲುಸಾಲು ದುರಂತಗಳನ್ನು ಪಟ್ಟಿ ಮಾಡಬಹುದು. ಇವುಗಳ ಹೊರತಾಗಿಯೂ ಪರಿಸ್ಥಿತಿ ಕೈಮೀರಿದೆ ಎಂದು ಸೂಚನೆ ಕೊಡುವ ಅನೇಕ ಪ್ರಕೃತಿ ವಿಕೋಪಗಳು ನಮ್ಮ ದೇಶ ಮತ್ತು ಜಗತ್ತಿನ ಎಲ್ಲೆಡೆ ಆಗುತ್ತಲೇ ಇವೆ. ಇವೆಲ್ಲವುದರ ಹಿನ್ನೆಲೆಯಲ್ಲಿ ನಾವು ಹೆಚ್ಚುಹೆಚ್ಚು ಜಾಗರೂಕರಾಗಬೇಕಿತ್ತು. ಆದರೆ ದುರದೃಷ್ಟವಶಾತ್, ನಾವು ಇನ್ನೂ ವೇಗವಾಗಿ ವಿನಾಶದ ದಾರಿಯಲ್ಲಿ ಹೋಗುತ್ತಿದ್ದೇವೆ. ಈ ವಿನಾಶದ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆಯೇ ನಿಕೋಬಾರ್ ದ್ವೀಪದ ವಾಣಿಜ್ಯ ಹಡಗುಗಳ ಆಳಕಡಲಿನ ಬಂದರು, ವಿಮಾನ ನಿಲ್ದಾಣ, ಮೂರು ಲಕ್ಷಕ್ಕೂ ಹೆಚ್ಚು ಜನರ ವಸತಿಗಾಗಿ ನಗರದ ನಿರ್ಮಾಣ ಮತ್ತು ವಿದ್ಯುತ್ ಉತ್ಪಾದನೆಯ ಯೋಜನೆ. ಇವೆಲ್ಲ ಯೋಜನೆಗಳು ನೀತಿ ಆಯೋಗದಿಂದ ಪ್ರಸ್ತಾಪಿಸಲ್ಪಟ್ಟಿವೆ ಮತ್ತು 72000 ಕೋಟಿ ರೂಪಾಯಿ ಬೆಲೆಬಾಳುವ ಈ ಯೋಜನೆಗಳನ್ನು ಅಂಡಮಾನ್ ನಿಕೋಬಾರ್ ದ್ವೀಪ ಸಂಯೋಜಿತ ಅಭಿವೃದ್ಧಿ ನಿಗಮದ ಮೂಲಕ ಜಾರಿಗೊಳಿಸಲಾಗುತ್ತಿದೆ. ಇವುಗಳನ್ನು ಎಷ್ಟು ಕ್ಷಿಪ್ರ ಗತಿಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದರೆ ಮೇಲ್ನೋಟಕ್ಕೆ ಎಲ್ಲ ನಿಯಮಗಳನ್ನು ಪಾಲಿಸುತ್ತಿರುವಂತೆ ಕಂಡರೂ, ಎಲ್ಲ ನಿಯಮಗಳ ಮೂಲ ಆಶಯಗಳನ್ನು ಗಾಳಿಗೆ ತೂರಿ ಕಾಟಾಚಾರಕ್ಕೆ ಎಂಬಂತೆ ಅಧ್ಯಯನ, ಪರಿಶೀಲನೆ ನಡೆಸಿ ಎಲ್ಲ ಅನುಮತಿಗಳನ್ನು ಸುಲಭವೇಗದಲ್ಲಿ ನೀಡಲಾಗುತ್ತಿದೆ.

ಸರಿ, ಇವು ಅಭಿವೃದ್ಧಿ ಯೋಜನೆಗಳೇ ತಾನೇ, ಇದರಿಂದ ತೊಂದರೆ ಏನು? ಎಂಬ ಪ್ರಶ್ನೆ ನಮಗೆ ಬಂದರೆ, ಈ ದ್ವೀಪಗಳ ಜೀವ ವೈವಿಧ್ಯ, ಇಲ್ಲಿ ಕೇವಲ ಇನ್ನೂರರ ಸಂಖ್ಯೆಯಲ್ಲಿ ಇರುವ ಬುಡಕಟ್ಟು ಜನಾಂಗ, ಈ ದ್ವೀಪಗಳ ಸುತ್ತ ಇರುವ ಅಪೂರ್ವ ಹವಳದ ದಂಡೆಗಳು, ಕಡಲಜೀವಿಗಳು- ಇವೆಲ್ಲವುಗಳ ಶಾಶ್ವತ ನಾಶಕ್ಕೆ ಕಾರಣವಾಗಿ, ಇಲ್ಲಿ ಸಿಂಗಾಪುರ್ ಮಾದರಿಯ ನಗರ ನಿರ್ಮಿಸಬೇಕೇ? ಎಂಬುದು ಅದರ ಮುಂದಿನ ಪ್ರಶ್ನೆಯಾಗುತ್ತದೆ. ಅಷ್ಟೇಅಲ್ಲದೆ ನಿಕೋಬಾರ್ ಪ್ರದೇಶ ಅಪಾಯಕಾರಿ ಭೂಕಂಪ ವಲಯದಲ್ಲಿದ್ದು 2004ರ ಸುನಾಮಿಯಲ್ಲಿ ಭಾರಿ ವಿನಾಶವನ್ನು ಕಂಡಿದೆ, ಇಷ್ಟೆಲ್ಲಾ ಅಪಾಯವಿದ್ದರೂ, ಅಪಾರ ದುಡ್ಡು ಸುರಿದು ಚುಕ್ಕಿ ಗಾತ್ರದಲ್ಲಿ ಇರುವ ಈ ದ್ವೀಪದಲ್ಲಿ ಇಂತಹ ವಿನಾಶಕ್ಕೆ ಮುಂದಾಗಬೇಕೆ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಇಷ್ಟು ಚಿಕ್ಕ ದ್ವೀಪವಾದರೂ ಇಷ್ಟೆಲ್ಲಾ ಸೋಜಿಗಗಳನ್ನು ತನ್ನಲ್ಲಿ ಇಟ್ಟುಕೊಂಡಿರುವ ಈ ಒಂದು ಪುಟ್ಟದ್ವೀಪವನ್ನು ಬಿಟ್ಟು ಬೇರೆಡೆ ತಮ್ಮ ಯೋಜನೆಗಳನ್ನು ಜಾರಿಗೊಳಿಸಬಾರದೇ ಎಂಬ ಪ್ರಶ್ನೆ ಕೂಡ ಸೂಕ್ತವೇ ಆಗಿದೆ.

ಪ್ರಸ್ತುತ ಈ ಯೋಜನೆಯನ್ನು ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಜಾರಿಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ ಈ ದ್ವೀಪದಲ್ಲಿ ಭಾರತೀಯ ನೌಕಾಸೇನೆಯ ನೆಲೆಯನ್ನು ಬಿಟ್ಟರೆ, ಇಲ್ಲಿಯೇ ಹತ್ತಾರು ಸಾವಿರ ವರ್ಷಗಳಿಂದ ನೆಲೆಸಿದ, ಮುಖ್ಯವಾಗಿ ದ್ವೀಪದ ಕರಾವಳಿ ಭಾಗದಲ್ಲಿರುವ ನಿಕೋಬಾರ್ ಬುಡಕಟ್ಟು ಜನ ಹಾಗೂ ಈ ದ್ವೀಪದ ಅರಣ್ಯ ಪ್ರದೇಶದಲ್ಲಿ ಇರುವ, ಇನ್ನೂ ಹೊರಜಗತ್ತಿಗೆ ತೆರೆದುಕೊಳ್ಳದ ಕೇವಲ ಇನ್ನೂರರ ಆಸುಪಾಸಿನಲ್ಲಿ ಇರುವ ಶೋಮ್ಪೆನ್ ಬುಡಕಟ್ಟು ಜನ ಮಾತ್ರ ವಾಸವಾಗಿದ್ದರು. ಯಾವುದೇ ರೀತಿಯಲ್ಲಿ ಲೆಕ್ಕ ಹಾಕಿದರೂ 5 ಸಾವಿರ ದಾಟದ ಒಟ್ಟು ಜನಸಂಖ್ಯೆ ಇಲ್ಲಿನದು. ಇವರ ಜೊತೆ ಸಾವಿರಾರು ವರ್ಷಗಳಿಂದ ಇಲ್ಲಿ ಮಾತ್ರ ವಿಕಾಸ ಹೊಂದಿದ ಅಪರೂಪದ ಜೀವಸಂಕುಲ ಮತ್ತು ಜೀವವಿಕಾಸ ಆದಾಗಿನಿಂದ ಮಾನವನ ಹಸ್ತಕ್ಷೇಪವನ್ನೇ ಕಾಣದ ವನಸಿರಿ, ಹತ್ತಾರು ಅಡಿ ಆಳದ ಮರಳ ಕಣಗಳೂ ಕಾಣುವ ಸ್ಪಟಿಕ ಶುಭ್ರ ನೀರು ಮತ್ತು ನಿರಭ್ರವಾದ ಮರಳದಂಡೆಗಳು ಮಾತ್ರ ಇಲ್ಲಿತ್ತು. ಇಂತಹ ಸುಂದರ ದ್ವೀಪದ ಒಡಲಿಗೆ ಈ ಯೋಜನೆ ಕೊಳ್ಳಿಯನ್ನೇ ಇಡಲಿದೆ.

ನನ್ನ ಬಹುಪಾಲು ಲೇಖನಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಯಾವುದೋ ಒಂದು ಪುಸ್ತಕದ ಅಥವಾ ಅದರ ಕೆಲ ಸಾಲುಗಳ ಉಲ್ಲೇಖ ಬಂದೇಬರುತ್ತದೆ. ಕಾರಣ ಅವರ ಲೇಖನ ಮತ್ತು ಚಿಂತನೆಗಳು ಪರಿಸರ ಕುರಿತ ಕಾಳಜಿಯನ್ನು ಓದುಗರಲ್ಲಿ ಯಾವುದೋ ಒಂದು ರೂಪದಲ್ಲಿ ಪ್ರಭಾವಿಸಿಯೇ ಇರುತ್ತದೆ. ಹಾಗೆಯೇ ಇಲ್ಲಿ ಅವರ ಅಲೆಮಾರಿಯ ಅಂಡಮಾನ್ ಪುಸ್ತಕದ ಒಂದು ಅಧ್ಯಾಯ ನೆನಪಿಗೆ ಬಂತು. ಅದರಲ್ಲಿ ತೇಜಸ್ವಿ ಮತ್ತವರ ತಂಡ ಪೋರ್ಟ್-ಬ್ಲೇರ್‌ಗೆ ಬಂದಿಳಿದಾಗ ಕರ್ನಾಟಕದವರೇ ನಡೆಸುವ ಒಂದು ಹೋಟೆಲಿಗೆ ಹೋಗಿರುತ್ತಾರೆ. ಅದರ ಹೆಸರು ಮೆಗಾಪಾಡ್ ನೆಸ್ಟ್ ಎಂದು. ಮೆಗಾಪಾಡ್ ಎಂಬುದು ಹಾರಲು ಬಾರದ ಒಂದು ದೊಡ್ಡ ಕೋಳಿಪಿಳ್ಳೆ ಗಾತ್ರದ ಹಕ್ಕಿ. ಇದು ಕೇವಲ ನಿಕೋಬಾರ್ ದ್ವೀಪದಲ್ಲಿ ಬಿಟ್ಟರೆ ವಿಶ್ವದ ಬೇರೆ ಎಲ್ಲೂ ಕಂಡುಬರುವುದಿಲ್ಲ. ಇವು ಕಡಲತಡಿಯ ಅರಣ್ಯಗಳಲ್ಲಿ ನೆಲದ ಮೇಲೆ ಗೂಡು ಕಟ್ಟಿ ಮರಿ ಮಾಡುತ್ತವೆ. ಅಭಿವೃದ್ಧಿ ಮತ್ತ್ಯಾವುದೋ ಕಾರಣಕ್ಕೆ ಇವು ಒಮ್ಮೆ ನಾಶವಾಗಿ ಹೋದರೆ ಇವು ನಮಗೆ ಭೂಮಿಯ ಮೇಲೆ ಮತ್ತೊಮ್ಮೆ ನೋಡಲು ಸಿಗುವುದೇ ಇಲ್ಲ. ಅಲ್ಲದೆ ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯರ ಜೊತೆ ಬೇರೆಬೇರೆ ಪ್ರಾಣಿಗಳು ದ್ವೀಪಕ್ಕೆ ಬಂದರೆ, ಅವುಗಳಿಗೆ ತುತ್ತಾಗುವ ಮೆಗಾಪಾಡ್ ಹಕ್ಕಿ ಮತ್ತೊಂದು ಡೋಡೋ ಆಗಿ ಭೂಮಿಯಿಂದ ಶಾಶ್ವತವಾಗಿ ನಿರ್ನಾಮವಾಗುವದರಲ್ಲಿ ಸಂಶಯವೇ ಇಲ್ಲ. ಇದರ ಜೊತೆಗೆ ಇಲ್ಲಿ ಮಾತ್ರ ಕಂಡುಬರುವ ನಿಕೋಬಾರ್ ಹಾವು ಹದ್ದು, ನಿಕೋಬಾರ್ ಗೂಬೆ, ನಿಕೋಬಾರ್ ಗಿಳಿ- ಪಕ್ಷಿ ಪ್ರಬೇಧಗಳು ಅಪಾಯದ ಅಂಚಿಗೆ ನೂಕಲ್ಪಡುತ್ತವೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಮತ್ತು ಪ್ರಸ್ತುತ ನಿಕೋಬಾರ್ ಯೋಜನೆಯ ಕುರಿತಾಗಿಯೇ “The Great Nicobar Betrayal” ಎಂಬ ಪುಸ್ತಕ ಬರೆದಿರುವ ಪಂಕಜ್ ಸೇಖ್ಸಾರಿಯಾ ಅವರು ಹೇಳುವಂತೆ ನಿಕೋಬಾರಿನ ಕಾಡು ಮತ್ತು ಕಡಲಿನ ಜೀವ ವೈವಿಧ್ಯವನ್ನು ನಾವು ಅರಿತಿರುವುದೇ ಕಮ್ಮಿ; ಇಲ್ಲಿ ವಿಜ್ಞಾನಕ್ಕಿನ್ನೂ ಗೊತ್ತಿಲ್ಲದೇ ಇರುವ ಅದೆಷ್ಟೋ ಸೋಜಿಗಗಳು ಹಾಗೆಯೇ ಉಳಿದಿವೆ. ಆದರೆ ಒಮ್ಮೆ ಇಂತಹ ವಿನಾಶಕಾರಿ ಯೋಜನೆ ಬಂದರೆ ಅವೆಲ್ಲವೂ ಸಂಶೋಧನೆಗೆ ತೆರೆದುಕೊಳ್ಳುವ ಮುಂಚೆಯೇ ನಾಶವಾಗಿ ಹೋಗುತ್ತವೆ. ಈ ದ್ವೀಪದ ಇನ್ನೊಂದು ವಿಶೇಷ ಜೀವಿ ಎಂದರೆ ದೈತ್ಯ ತೊಗಲು ಬೆನ್ನಿನ ಕಡಲಾಮೆ (Giant leatherback turtle); ಇವು ಮಹಾಸಾಗರದ ಉದ್ದಕ್ಕೂ ವಲಸೆ ಹೋಗುವ ದೊಡ್ಡ ಗಾತ್ರದ ಕಡಲಾಮೆಗಳು. ಇವುಗಳ ಸಂಶೋಧನೆ ನಡೆಸಲು ಉಪಗ್ರಹದ ಮೂಲಕ ಇವುಗಳ ಚಲನೆಯನ್ನು ದಾಖಲಿಸಿದಾಗ ಇವು, ನಿಕೋಬಾರ್ ನಿಂದ ಪೂರ್ವಕ್ಕೆ ಆಸ್ಟ್ರೇಲಿಯಾ ಮತ್ತು ಪಶ್ಚಿಮಕ್ಕೆ ಮಡಗಾಸ್ಕರ್ ದ್ವೀಪಗಳಿಗೆ ಸಾವಿರಾರು ಕಿಲೋಮೀಟರ್ ನಷ್ಟು ದೂರಕ್ಕೆ ವಲಸೆ ಹೋಗಿದ್ದು ಕಂಡುಬಂದಿತ್ತು. ನಮ್ಮ ದೇಶದಲ್ಲಿ ಈ ಕಡಲಾಮೆಗಳು ಗೂಡು ಕಟ್ಟಿ ಮರಿ ಮಾಡುವ ಜಾಗ ನಿಕೋಬಾರಿನ ದ್ವೀಪಗಳಷ್ಟೇ. ಇವುಗಳು ಗೂಡು ಮಾಡುವ ಪ್ರದೇಶದ ರಕ್ಷಣೆಗೆ ಎಂದು ನಿಕೋಬಾರಿನ ಗಲಾಥಿಯಾ ಕೊಲ್ಲಿಯ 110 ಚ ಕಿಮಿ ಪ್ರದೇಶವನ್ನು (Galathea Bay National park) ರಾಷ್ಟ್ರೀಯ ಉದ್ಯಾನ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಪ್ರಸ್ತುತ ಈ ‘ಅಭಿವೃದ್ಧಿ’ ಯೋಜನೆಯ ಸಲುವಾಗಿ ಗಲಾಥಿಯಾ ಕೊಲ್ಲಿಯ ರಾಷ್ಟ್ರೀಯ ಉದ್ಯಾನದ ಪಟ್ಟವನ್ನು ತೆಗೆಯಲಾಯಿತು. ಅಂದಹಾಗೆ ಈ ಯೋಜನೆಯ ಆಳಕಡಲಿನ ಬಂದರು ಇದೇ ಗಲಾಥಿಯಾ ಕೊಲ್ಲಿಯಲ್ಲಿ ನಿರ್ಮಾಣವಾಗಲಿದೆ. ಮೂರು ಕಿಲೋ ಮೀಟರ್‌ನಷ್ಟು ಉದ್ದ ಇದ್ದ ಕಡಲತೀರದಲ್ಲಿ ಕೇವಲ 300 ಮೀಟರಿನಷ್ಟು ಬಿಟ್ಟು ಉಳಿದ ಪ್ರದೇಶದಲ್ಲಿ ಬಂದರು ನಿರ್ಮಾಣವಾಗುತ್ತದೆ. ಅಲ್ಲಿ ಬರುವ ಹಡಗುಗಳು ಸುರಿಸುವ ಎಣ್ಣೆ ಮತ್ತಿತರ ತ್ಯಾಜ್ಯ ಖಂಡಿತ ಕಡಲಾಮೆಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಸರ್ಕಾರ ನಡೆಸುವವರು ಅದೆಷ್ಟು ಬುದ್ಧಿವಂತರು ಎಂದರೆ ಈ ಉಳಿದ 300 ಮೀಟರು ಪ್ರದೇಶಕ್ಕೆ ಆಮೆಗಳ ಗೂಡು ಮಾಡುವ ಪ್ರದೇಶ ಎಂದು ಹೆಸರು ಹಲಗೆಯನ್ನು ಹಾಕುತ್ತಾರಂತೆ; ಬಹುಶಃ ಕಡಲಾಮೆಗಳು ಇದನ್ನು ಓದಿ ಬಂದರು ಪ್ರದೇಶಕ್ಕೆ ಹೋಗದಿರಲಿ ಎಂಬ ಆಲೋಚನೆಯೋ ಏನೋ. ಇನ್ನೂ ಕುಚೋದ್ಯದ ಸಂಗತಿ ಎಂದರೆ ಈ ಗಲಾಥಿಯಾ ಕೊಲ್ಲಿ ರಾಷ್ಟ್ರೀಯ ಉದ್ಯಾನದ ಪಟ್ಟವನ್ನು ಹಿಂತೆಗೆದುಕೊಂಡು 15 ದಿನಕ್ಕೆ ರಾಷ್ಟ್ರೀಯ ಕಡಲಾಮೆಗಳ ಸಂರಕ್ಷಣಾ ಯೋಜನೆಯ ರೂಪುರೇಷೆಗಳನ್ನು ಬಿಡುಗಡೆ ಮಾಡಲಾಯಿತು. ಅದರಲ್ಲಿ ಗಲಾಥಿಯಾ ಕೊಲ್ಲಿಯ ದೈತ್ಯ ತೊಗಲುಬೆನ್ನಿನ ಕಡಲಾಮೆಗಳ ಸಂರಕ್ಷಣೆಯ ಯೋಜನೆ ಕೂಡ ಇದೆ. ಈ ಅಧಿಕಾರಿಗಳು ತಮ್ಮ ಕೆಲಸದ ಬಗ್ಗೆ ಅದೆಷ್ಟು ಬದ್ಧತೆ ಹೊಂದಿದ್ದಾರೆ ಎಂದು ಇದರಿಂದ ತಿಳಿಯುತ್ತದೆ.

ಈ ಯೋಜನೆಗೆ ಅನುಮತಿ ಕೊಡಲು ಅದೆಷ್ಟು ಒತ್ತಡ ಇತ್ತೆಂದರೆ ಇದರ ಪರಿಸರ ಪರಿಣಾಮಗಳ ಅಧ್ಯಯನವನ್ನೂ ತರಾತುರಿಯಲ್ಲಿ ಮಾಡಿ ಮುಗಿಸಲಾಗಿದೆ. ಅದರ ವರದಿಯು ತಪ್ಪಿನಿಂದ ಕೂಡಿದ ಒಂದು ಅಸಂಬದ್ಧ ಮಾಹಿತಿಗಳ ಪುಸ್ತಕವಷ್ಟೇ ಆಗಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಹಸಿರು ಪೀಠದ ಅನುಮತಿ ಕೂಡ ಪಡೆಯಲಾಗಿದೆ. ಅವರದೇ ವಿಸ್ತೃತ ಯೋಜನಾ ವರದಿಯ ಪ್ರಕಾರ ಇಲ್ಲಿ ನಾಶವಾಗುವ 10 ಲಕ್ಷ ಮರಗಳಿಗೆ ಬದಲಿಯಾಗಿ ಹರಿಯಾಣ ರಾಜ್ಯದಲ್ಲಿ ಗಿಡ ಬೆಳೆಸುತ್ತಾರಂತೆ! ಲಕ್ಷಾಂತರ ವರ್ಷಗಳಿಂದ ನಾಶವಾಗದೆ ಉಳಿದಿರುವ ದಟ್ಟ ಮಳೆಕಾಡುಗಳನ್ನು, ವಿಶಿಷ್ಟ ಜೀವಿಗಳನ್ನು ಒಳಗೊಂಡ ಸ್ಫಟಿಕ ಶುಭ್ರಕಡಲ ತಟವುಳ್ಳ ನಿಕೋಬಾರ್ ದ್ವೀಪವೆಲ್ಲಿ, ಕಲ್ಲು ಕ್ವಾರಿ, ಗಣಿಗಾರಿಕೆಯಿಂದ ಮೊದಲೇ ನಾಶಗೊಂಡಿರುವ ಹರಿಯಾಣದ ಕಾಡು ಎಲ್ಲಿ. ಈ ವರ್ತನೆ, ನಿಯಮಗಳನ್ನು ತಮಗೆ ಬೇಕಾದಂತೆ ತಿರುಚಿ, ನಮ್ಮನ್ಯಾರು ಕೇಳುವರು ಎಂಬ ದಾರ್ಷ್ಟ್ಯದ ಸಂಕೇತವಲ್ಲದೆ ಮತ್ತೇನಲ್ಲ. ನಾಗರಿಕತೆಯ ಮತ್ತದರ ರಕ್ಷಣೆಯ ಬಗ್ಗೆ ಪುಂಖಾನುಪುಂಖ ಭಾಷಣ ಬಿಗಿಯುವವರು ಹತ್ತಾರು ಸಾವಿರ ವರ್ಷಗಳಿಂದ ಇಲ್ಲಿ ವಾಸವಾಗಿರುವ, ಮುಗೋಲಾಯ್ಡ್ ಜನಾಂಗದ, ಆಸ್ಟ್ರೊಲೋ ಏಷಿಯಾಟಿಕ್ ಗುಂಪಿಗೆ ಸೇರಿದ ತಮ್ಮದೇ ವಿಶಿಷ್ಟ ಭಾಷೆ ಮಾತನಾಡುವ ಬುಡಕಟ್ಟು ಜನಾಂಗವನ್ನು ಹೇಳಹೆಸರಿಲ್ಲದಂತೆ ನಿರ್ನಾಮ ಮಾಡುವ ಈ ಯೋಜನೆ ಕುರಿತು ಅದು ಹೇಗೆ ಈ ಪ್ರಭೃತಿಗಳು ಯೋಚಿಸಲೇ ಇಲ್ಲ ಎಂಬುದು ಅಚ್ಚರಿ ತರಿಸುತ್ತದೆ. ಆದರೆ ವಸ್ತುಸ್ಥಿತಿ ಎಂದರೆ ಅವರಿಗೆ ಇದೆಲ್ಲದರ ಕುರಿತ ಆಲೋಚನೆಯೇ ಇಲ್ಲ. ಯಾಕೆಂದರೆ ಈ ಯೋಜನೆ, ಪರಿಸರದ ಮೇಲೆ ಬೀರುವ ಪರಿಣಾಮ ಮತ್ತದರ ಕಾರ್ಯ ಸಾಧುತ್ವ ಬಗ್ಗೆ ಪ್ರಶ್ನೆ ಮಾಡಿದ ರಾಷ್ಟ್ರೀಯ ಬುಡಕಟ್ಟು ಆಯೋಗದ ಅಧ್ಯಕ್ಷ ಹರ್ಷ್ ಚೌಹಾನ್ ಅವರಿಂದ ಅವರ ಕಾರ್ಯಾವಧಿ ಮುಗಿಯುವ ಎಂಟು ತಿಂಗಳ ಮೊದಲೇ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆಯಲಾಯಿತು. ಇವರು 2022 ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಮತ್ತು ಬುಡಕಟ್ಟು ಜನರ ಅರಣ್ಯದ ಮೇಲಿನ ಹಕ್ಕು ಸಡಿಲಗೊಳ್ಳುವುದರ ಬಗ್ಗೆ ಪ್ರಶ್ನೆ ಮಾಡಿದ್ದರು. ಅಲ್ಲದೆ ನಿಕೋಬಾರ್ ಬುಡಕಟ್ಟಿನ ಮೇಲೆ ಈ ಯೋಜನೆಯ ಪರಿಣಾಮ ಏನು ಎಂಬುದರ ಕುರಿತು ಸ್ವತಂತ್ರ ಅಧ್ಯಯನವನ್ನು ಬುಡಕಟ್ಟು ಆಯೋಗ ಘೋಷಿಸಿತ್ತು. ಇದು ಯೋಜನೆಯ ಪ್ರತಿಪಾದಕರ ಕೆಂಗಣ್ಣಿಗೆ ಗುರಿಯಾಗಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಕೇವಲ 5 ಸಾವಿರದಷ್ಟು ಜನರು ಇರುವ ದ್ವೀಪಕ್ಕೆ ದೊಡ್ಡ ಬಂದರು, ವಿಮಾನ ನಿಲ್ದಾಣ ಮತ್ತು ಹಠಾತ್ತನೆ ಮೂರುವರೆ ಲಕ್ಷ ಜನರು ಬಂದು ಸೇರಿದರೆ ಅದರ ಪರಿಣಾಮ ಈ ಮುಗ್ಧ ಬುಡಕಟ್ಟು ಸಮುದಾಯದ ಮೇಲೆ ಹೇಗೆ ಆಗಬಹುದು ಎಂಬುದು ಚೌಹಾಣ್‌ರವರ ಆತ್ಮಸಾಕ್ಷಿಯನ್ನು ಖಂಡಿತ ಕಲಕಿರಬೇಕು.

ಇದು ಪರಿಸರದ ಕುರಿತ ಪರಿಣಾಮದ ಪ್ರಶ್ನೆಗಳಾದರೆ, ಈ ಯೋಜನೆಯ ಉಪಯೋಗವಾದರೂ ಏನು? 72000 ಕೋಟಿ ರೂಪಾಯಿ ವ್ಯಯಿಸಿ ಮಾಡುತ್ತಿರುವ ಈ ಯೋಜನೆ ಅದಕ್ಕೆ ತಕ್ಕ ಪ್ರತಿಫಲ ಕೊಡಬಲ್ಲುದೆ ಎಂಬುದರ ಮೇಲೆಯೇ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ನೌಕಾಪಡೆಯ ಮಾಜಿ ಅಡ್ಮಿರಲ್ ಒಬ್ಬರು, ಇದು ಕೇವಲ ಇಂಧನ ಮರುಪೂರಣಗೊಳಿಸುವ ತಾಣವಾಗಬಹುದೇ ಹೊರತು ಜಾಗತಿಕ ವಾಣಿಜ್ಯ ಬಂದರು ಆಗಿ ಪರಿಣಮಿಸುವುದು ಸಂಶಯವೇ ಸರಿ ಎಂದಿದ್ದಾರೆ. ಇನ್ನು ಈ ಯೋಜನೆಗೆ ರಾಷ್ಟ್ರೀಯ ರಕ್ಷಣೆಯ ಕಾರಣವನ್ನು ಕೂಡ ನೀಡಲಾಗಿದ್ದು, ಅದು ಕೂಡ ಸತ್ಯಕ್ಕೆ ದೂರ ಎಂದು ನೌಕಾಪಡೆಯ ಮಾಜಿ ಅಧಿಕಾರಿಗಳೇ ಹೇಳಿದ್ದಾರೆ; ಕಾರಣ ಇದೊಂದು ವಾಣಿಜ್ಯ ಯೋಜನೆಯಾಗಿದೆ ಮತ್ತು ನಿಕೋಬಾರ್‌ನಲ್ಲಿ ಈಗಾಗಲೇ ನೌಕಾಪಡೆಯ ಉಪಸ್ಥಿತಿ ಇದ್ದೇ ಇದೆ. ಇನ್ನು ಒಮ್ಮೆಯೇ ಮೂರುವರೆ ಲಕ್ಷ ಜನರನ್ನು ತಂದು ಇರಿಸಿದರೆ ಅವರಿಗೆ ಕುಡಿಯುವ ನೀರಿನ ಲಭ್ಯತೆ ಮತ್ತಿತರೇ ನಾಗರಿಕ ಸೌಲಭ್ಯಗಳ ಕೊರತೆ ಕೂಡ ಕಾಡಲಿದೆ.

ಇದಷ್ಟೇ ಅಲ್ಲದೇ ನಿಕೋಬಾರ್ ದ್ವೀಪವು ಅಪಾಯಕಾರಿ ಭೂಕಂಪ ವಲಯದಲ್ಲಿ ಬರುತ್ತದೆ. ವಿಶ್ವದ ಅತ್ಯಂತ ಅಪಾಯಕಾರಿ ಭೂಕಂಪನ ವಲಯ ಪೆಸಿಫಿಕ್ ರಿಂಗ್ ಆಫ್ ಫೈರ್ ಎಂಬ ವಲಯದಲ್ಲಿ ಇರುವ ಇಲ್ಲಿ ಸರಾಸರಿ ವಾರಕ್ಕೆ ಒಂದು ಭೂಕಂಪವಾದರೂ ಆಗುತ್ತದೆ. 2004ರ ಸುನಾಮಿಯ ಕೇಂದ್ರ ಬಿಂದು ನಿಕೋಬಾರ್ ದ್ವೀಪದ ಹತ್ತಿರದಲ್ಲಿಯೇ ಇತ್ತು. ಸುನಾಮಿ ಆದಾಗ ಉತ್ತರ ಭಾಗದ ಅಂಡಮಾನ್ ದ್ವೀಪ ಸಮುದ್ರದಿಂದ 5 ಅಡಿ ಮೇಲೆ ಎದ್ದರೆ, ನಿಕೋಬಾರ್ ದ್ವೀಪ ಸಮುದ್ರದ ಮಟ್ಟಕ್ಕಿಂತ 15 ಅಡಿ ಕೆಳಕ್ಕೆ ಕುಸಿಯಿತು. ಇದರ ಪುರಾವೆಯಾಗಿ, ಭಾರತದ ದಕ್ಷಿಣ ತುದಿಯಾದ ಇಂದಿರಾ ಪಾಯಿಂಟ್ ದೀಪಸ್ತಂಬವು ಸುನಾಮಿಗೂ ಮುಂಚೆ ಕಡಲದಂಡೆಯ ಮೇಲೆ ಇದ್ದರೆ, ಸುನಾಮಿಯ ನಂತರ ಅರ್ಧ ಭಾಗಕ್ಕೆ ಸಮುದ್ರದಲ್ಲಿ ಮುಳುಗಿಕೊಂಡಿದೆ. ಇಷ್ಟು ಸೂಕ್ಷ್ಮವಾದ ಪ್ರದೇಶದಲ್ಲಿ ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಜಾರಿಗೆ ತರುವುದು ಜನರ ಮತ್ತು ಅಸ್ತಿಪಾಸ್ತಿಯ ಸುರಕ್ಷತೆಯ ದೃಷ್ಟಿಯಿಂದ ಎಷ್ಟು ಸೂಕ್ತ ಎಂಬ ಪ್ರಶ್ನೆ ಕೂಡ ಮೂಡುತ್ತದೆ.

ಒಂದು ನಾಗರಿಕ ಸಮಾಜವಾಗಿ ನಾವು ನಮ್ಮ ದೇಶದ ಸಂಪತ್ತಾದ ವನ್ಯಜೀವಿ ಮತ್ತು ಜೀವ ವೈವಿಧ್ಯತೆಯ ತಾಣಗಳನ್ನು ಎಷ್ಟು ಜತನದಿಂದ ಕಾಪಾಡಿಕೊಳ್ಳಬೇಕು ಎಂದು ಹೆಚ್ಚು ಸೂಕ್ಷ್ಮತೆಯಿಂದ ಯೋಚಿಸಬೇಕು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಾವು ಇರುವ ಎಲ್ಲ ಪರಿಸರ ಕಾನೂನುಗಳನ್ನು ಸಡಿಲಗೊಳಿಸಿ ನಮ್ಮ ಕಾಡುಗಳು ಮತ್ತು ಅಲ್ಲಿನ ಜೀವಿಗಳಿಗೆ ಬೆಲೆಯೇ ಇಲ್ಲ ಎನ್ನುವ ರೀತಿಯಲ್ಲಿ ಎಲ್ಲವನ್ನು ಅಭಿವೃದ್ಧಿಯ ಹೆಸರಿನಲ್ಲಿ ಶಾಶ್ವತವಾಗಿ ನಾಶಮಾಡುವ ನಿಟ್ಟಿನಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದೇವೆ.

ಇನ್ನು ಈ ಲೇಖನದ ಕೊನೆಗೆ ಒಂದು ರಸಪ್ರಶ್ನೆ, ಇಷ್ಟು ದೊಡ್ಡ ಯೋಜನೆಯ ಗುತ್ತಿಗೆಗೆ ಭಾಗವಹಿಸಿರುವವರು ಯಾರು? ಮತ್ತು ಈ ಯೋಜನೆಯ ಗುತ್ತಿಗೆ ಮತ್ತು ಲಾಭ ಯಾರಿಗೆ ಸಿಗುತ್ತದೆ? ಈ ಪ್ರಶ್ನೆಗೆ ಉತ್ತರವನ್ನು ನೀವು ಪಟ್ ಅಂತ ಹೇಳಿಬಿಡಬಹುದು. ಅಂದಹಾಗೆ ನೀವು ಏನು ಊಹೆ ಮಾಡಿದ್ದೀರೋ ಅದು ಸರಿಯಾಗಿಯೇ ಇದೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...