ಅಯೋಧ್ಯೆಯಲ್ಲಿ ಬುಧವಾರ ನಡೆಯುವ ಭವ್ಯ ರಾಮ ಮಂದಿರದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಮುಂದೂಡಬೇಕೆಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭ ಅತ್ಯಂತ ಕೆಟ್ಟದಾಗಿದೆ. ರಾಮ ಮಂದಿರದ ಶಿಲಾನ್ಯಾಸದ ನಿರ್ವಹಣಾ ಸಿಬ್ಬಂದಿಗೆ ಕೊರೊನಾ ಬಂದಿರುವುದೇ ಇದಕ್ಕೆ ಸಾಕ್ಷಿ. ದಯವಿಟ್ಟು ಈ ಕಾರ್ಯಕ್ರಮವನ್ನು ಮುಂದೂಡಿ ಎಂದು ಒತ್ತಾಯಿಸಿದರು.
ಅಯೋಧ್ಯೆ ವಿವಾದದ ದಶಕಗಳ ನಂತರ ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. ಪ್ರಧಾನಿ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಉನ್ನತ ನಾಯಕರು ಬುಧವಾರ ಅಯೋಧ್ಯೆಯಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ದೇವಾಲಯದ ನಿರ್ಮಾಣದ ಸಾಂಕೇತಿಕ ಆರಂಭವಾಗಿ ಪ್ರಧಾನಿ ಮೋದಿ ಬೆಳ್ಳಿ ಇಟ್ಟಿಗೆಯನ್ನು ಹೂಳುವುದು ಈ ಕಾರ್ಯಕ್ರಮದ ವಿಶೇಷವಾಗಿದೆ.
“ಮೋದಿ-ಜಿ, ಶಂಕುಸ್ಥಾಪನೆ ಮಾಡುವ ಮೂಲಕ ನೀವು ಇನ್ನೂ ಎಷ್ಟು ಜನರನ್ನು ಆಸ್ಪತ್ರೆಗೆ ಕಳುಹಿಸಲು ಬಯಸುತ್ತೀರಿ? ಯೋಗಿ-ಜಿ ನೀವು ದಯವಿಟ್ಟು ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿ. ಸನಾತನ ಧರ್ಮದ ಉಲ್ಲಂಘನೆಯನ್ನು ನೀವು ಹೇಗೆ ಅನುಮತಿಸುತ್ತೀರಿ? ಈ ಕಾರ್ಯಕ್ರಮಕ್ಕೆ ಆತುರವೇನಿದೆ?” ಎಂದು ದಿಗ್ವಿಜಯ ಸಿಂಗ್ ಪೋಸ್ಟ್ ಮಾಡಿದ್ದಾರೆ.
ಅಯೋಧ್ಯೆ ಆಚರಣೆಗಳಿಗೆ ಸಂಬಂಧಿಸಿರುವ ಪುರೋಹಿತರು, ಯುಪಿ ಸಚಿವರು, ಯುಪಿ ಬಿಜೆಪಿ ಮುಖ್ಯಸ್ಥರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ವೈರಸ್ ತಗುಲಿದೆ ಎಂದು ಅವರು ಹೇಳಿದ್ದಾರೆ.
“ಯುಪಿ ಮುಖ್ಯಮಂತ್ರಿ ಮತ್ತು ಪ್ರಧಾನಿ ತಮ್ಮನ್ನು ತಾವೇ ನಿರ್ಬಂಧಿಸಿಕೊಳ್ಳಬೇಕಲ್ಲವೇ? 14 ದಿನಗಳ ಕ್ವಾರಂಟೈನ್ ಸಾಮಾನ್ಯರಿಗೆ ಮಾತ್ರವೇ? ಪ್ರಧಾನಮಂತ್ರಿಯವರಿಗೆ ಇಲ್ಲವೇ?” ಎಂದು ಸಿಂಗ್ ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕನ ಟ್ವೀಟ್ ಬಗ್ಗೆ ಬಿಜೆಪಿಯ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. “ನಾವು ಅನಾದಿ ಕಾಲದಿಂದಲೂ ನೋಡುತ್ತಿದ್ದೇವೆ, ಏನಾದರೂ ಒಳ್ಳೆಯದೊಂದು ಸಂಭವಿಸಿದಾಗ, ‘ಅಸುರ್ಸ್’ (ರಾಕ್ಷಸರು) ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ದಿಗ್ವಿಜಯ ಕೂಡ ಅದೇ ರೀತಿ ಮಾಡುತ್ತಿದ್ದಾರೆ” ಎಂದು ಮಧ್ಯಪ್ರದೇಶ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಭೂಮಿ ಪೂಜೆ ಮಾಡುವ ಅರ್ಚಕನಿಗೆ ಕೊರೊನಾ


