ಉತ್ತರ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.3 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಹತ್ತು ಜನರು ಸಾವನ್ನಪ್ಪಿದ್ದು, 260 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಇಂದು (ನ.3,2025) ಬೆಳಗಿನ ಜಾವ ಭೂಕಂಪ ಸಂಭವಿಸಿದ್ದು, ದೇಶದ ವಾಯುವ್ಯ, ಮಧ್ಯ, ಪಶ್ಚಿಮ, ಉತ್ತರ, ಈಶಾನ್ಯ ಮತ್ತು ಪೂರ್ವ ವಲಯಗಳು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ.
ಮಝಾರ್-ಎ-ಶರೀಫ್ ನಗರದ ಬಳಿಯ ಖೋಲ್ಮ್‌ನಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದ್ದು, ಅಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು. ಗಾಯಗೊಂಡವರಲ್ಲಿ ಅನೇಕರಿಗೆ ಚಿಕಿತ್ಸೆ ನೀಡಲಾಗಿದ್ದು, ನಂತರ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಅಫ್ಘಾನಿಸ್ತಾನದ ಭೂಕಂಪವು ಭೂಮಿಯ 23 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ದೃಢಪಡಿಸಿದೆ. ಉಜ್ಬೇಕಿಸ್ತಾನ್, ತಜಿಕಿಸ್ತಾನ್ ಮತ್ತು ಪಾಕಿಸ್ತಾನದಲ್ಲೂ ಕಂಪನದ ಅನುಭವವಾಗಿದೆ ಎಂದು ಹೇಳಿದೆ.
ಪ್ರಮುಖ ದೋಷ ರೇಖೆಗಳಲ್ಲಿ ಅಫ್ಘಾನಿಸ್ತಾನ ಇರುವುದರಿಂದ ಅಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಿರುತ್ತದೆ. ಈ ವರ್ಷದ ಆಗಸ್ಟ್ 31ರಂದು ಪೂರ್ವ ಅಫ್ಘಾನಿಸ್ತಾನದ ಪಾಕಿಸ್ತಾನ ಗಡಿಯ ಬಳಿ ಸಂಭವಿಸಿದ 6.0 ತೀವ್ರತೆಯ ಭೂಕಂಪದಲ್ಲಿ 2, 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.


