ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 800 ಜನರು ಸಾವನ್ನಪ್ಪಿದ್ದಾರೆ ಮತ್ತು 2,500 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ಸಂಭವಿಸಿದ 6.0 ತೀವ್ರತೆಯ ಭೂಕಂಪದಿಂದ ಪೂರ್ವ ಅಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಸಮೀಪವಿರುವ ಕುನಾರ್ ಪ್ರದೇಶದಲ್ಲಿ ವ್ಯಾಪಕ ಹಾನಿಯುಂಟು ಮಾಡಿದೆ ಎಂದು ವರದಿಯಾಗಿದೆ.
ರಾತ್ರಿ 11:47ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು ನಂಗರ್‌ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಪೂರ್ವ-ಈಶಾನ್ಯಕ್ಕೆ 27 ಕಿಲೋಮೀಟರ್ (17 ಮೈಲುಗಳು) ದೂರದಲ್ಲಿ ಪತ್ತೆಯಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಭೂಮಿಯ ಕೇವಲ 8 ಕಿಲೋಮೀಟರ್ (5 ಮೈಲುಗಳು) ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಆಳವಿಲ್ಲದ ಭೂಕಂಪಗಳು ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ. ಮೊದಲ ಪ್ರಬಲ ಕಂಪನದ ನಂತರ ಹಲವಾರು ಬಾರಿ ಭೂಮಿ ಕಂಪಿಸಿದೆ ಎಂದು ವರದಿಗಳು ಹೇಳಿವೆ.
ಕುಸಿದ ಕಟ್ಟಡಗಳ ಅವಶೇಷಗಳ ಅಡಿಯಿಂದ ಗಾಯಗೊಂಡ ಜನರನ್ನು ರಕ್ಷಿಸಿ, ಅವರನ್ನು ಸ್ಟ್ರೆಚರ್‌ನಲ್ಲಿ ಮತ್ತು ಹೆಲಿಕಾಪ್ಟರ್‌ಗಳಲ್ಲಿ ರಕ್ಷಿಸುವ ಮತ್ತು ಜನರು ತಮ್ಮ ಕೈಗಳಿಂದ ಅವಶೇಷಗಳಡಿಯಿಂದ ತಮ್ಮವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿವೆ. ಇವು ಘಟನೆಯ ಭೀಕರತೆಯನ್ನು ವಿವರಿಸುತ್ತವೆ.
ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾವಿನ ಸಂಖ್ಯೆ 800ಕ್ಕೆ ಏರಿಕೆಯಾಗಿದೆ ಮತ್ತು 2,500 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಕುನಾರ್ ಪ್ರಾಂತ್ಯದಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸಿವೆ ಎಂದು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಕಟ್ಟಡಗಳು ಸಾಮಾನ್ಯವಾಗಿ ಕಡಿಮೆ ಎತ್ತರದ ನಿರ್ಮಾಣಗಳಾಗಿದ್ದು, ಹೆಚ್ಚಾಗಿ ಕಾಂಕ್ರೀಟ್ ಮತ್ತು ಇಟ್ಟಿಗೆಗಳಿಂದ ಮಾಡಲ್ಪಟ್ಟಿರುತ್ತವೆ. ಗ್ರಾಮೀಣ ಮತ್ತು ಹೊರವಲಯದ ಪ್ರದೇಶಗಳಲ್ಲಿನ ಮನೆಗಳು ಮಣ್ಣಿನ ಇಟ್ಟಿಗೆಗಳು ಮತ್ತು ಮರದಿಂದ ಮಾಡಲ್ಪಟ್ಟಿರುತ್ತವೆ. ಅವುಗಳಲ್ಲಿ ಹೆಚ್ಚಿನವು ಹಲವು ಕಳಪೆ ನಿರ್ಮಾಣದಿಂದ ಕೂಡಿವೆ ಎಂದು ವರದಿಗಳು ಹೇಳಿವೆ.
ಕುನಾರ್‌ನಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ನುರ್ಗಲ್ ಜಿಲ್ಲೆಯ ನಿವಾಸಿಯೊಬ್ಬರು, ಬಹುತೇಕ ಇಡೀ ಗ್ರಾಮವೇ ನಾಶವಾಗಿದೆ ಎಂದು ಹೇಳಿದ್ದಾಗಿ ವರದಿಗಳು ತಿಳಿಸಿವೆ.
ಪೂರ್ವ ಅಫ್ಘಾನಿಸ್ತಾನವು ಪರ್ವತಮಯ ದುರ್ಗಮ ಪ್ರದೇಶಗಳಾಗಿವೆ. ಭೂಕಂಪದಿಂದ ಈ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ. ಅಲ್ಲಿಗೆ ರಕ್ಷಣಾ ತಂಡಗಳು ತಲುಪುದು ಕೂಡ ಸವಾಲಾಗಿದೆ.
ಅಕ್ಟೋಬರ್ 7, 2023ರಂದು ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ನಂತರ ಬಲವಾದ ಕಂಪನಗಳು ಉಂಟಾಗಿದ್ದವು. ಈ ದುರಂತದಲ್ಲಿ ಕನಿಷ್ಠ 4,000 ಜನರು ಸಾವನ್ನಪ್ಪಿದ್ದರು ಎಂದು ತಾಲಿಬಾನ್ ಸರ್ಕಾರ ಅಂದಾಜಿಸಿತ್ತು.
ವಿಶ್ವಸಂಸ್ಥೆಯು ಸುಮಾರು 1,500 ಜನರ ಸಾವಿನ ಸಂಖ್ಯೆಯನ್ನು ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಇದಾಗಿದೆ.


