ಬಿಹಾರದ ಪ್ರಮುಖ ಕ್ಷೇತ್ರಗಳ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಬೆದರಿಸುತ್ತಿದ್ದಾರೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಮಂಗಳವಾರ ಆರೋಪಿಸಿದ್ದಾರೆ.
ಪಾಟ್ನಾದ ಶೇಖ್‌ಪುರ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿಶೋರ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೆಲೆ ಕಳೆದುಕೊಳ್ಳುವ ಭಯದಿಂದಾಗಿ ಬಿಜೆಪಿ ಒತ್ತಡ ತಂತ್ರಗಳನ್ನು ಬಳಸುತ್ತಿದೆ. ಯಾರೇ ಗೆದ್ದರೂ ನಾವು ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿ ಅಂದುಕೊಂಡಿತ್ತು. ಆದರೆ ಈ ಬಾರಿ, ಅವರ ವಿಶ್ವಾಸವನ್ನು ಜನ್ ಸುರಾಜ್ ಪಕ್ಷ ಅಲುಗಾಡಿಸಿದೆ ಎಂದು ಹೇಳಿದ್ದಾರೆ.
ದಾನಾಪುರದಲ್ಲಿ ಜನ್ ಸುರಾಜ್ ಪಕ್ಷದ ಅಭ್ಯರ್ಥಿ ಅಖಿಲೇಶ್ ಕುಮಾರ್ ಅಲಿಯಾಸ್ ಮುತೂರ್ ಶಾ ಅವರನ್ನು ಬಂಧಿಸಿಟ್ಟ ಬಿಜೆಪಿ ನಾಮಪತ್ರ ಸಲ್ಲಿಸದಂತೆ ತಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರೊಂದಿಗೆ ನಮ್ಮ ಅಭ್ಯರ್ಥಿಯನ್ನು ಇಡೀ ದಿನ ಕೂರಿಸಲಾಗಿತ್ತು ಎಂದು ಪ್ರಶಾಂತ್ ಕಿಶೋರ್ ಆರೋಪ ಮಾಡಿದ್ದಾರೆ.
“ಆರ್‌ಜೆಡಿ ಗೂಂಡಾಗಳು ನಮ್ಮ ಅಭ್ಯರ್ಥಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಜನರಿಗೆ ಹೇಳಲಾಗಿತ್ತು. ಆದರೆ, ವಾಸ್ತವವಾಗಿ ನಮ್ಮ ಅಭ್ಯರ್ಥಿ ದೇಶದ ಗೃಹ ಸಚಿವರೊಂದಿಗೆ ಕುಳಿತಿದ್ದರು. ಚುನಾವಣಾ ಆಯೋಗ ಇದನ್ನು ಗಮನಿಸಬೇಕು. ಗೃಹ ಸಚಿವರು ಅಭ್ಯರ್ಥಿಯನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಅವರು ನಾಮಪತ್ರ ಸಲ್ಲಿಸುವುದನ್ನು ತಡೆಯಲು ಹೇಗೆ ಸಾಧ್ಯ?” ಎಂದು ಕಿಶೋರ್ ಪ್ರಶ್ನಿಸಿದ್ದು, “ಇದು ಬಿಜೆಪಿಯ ನಿಜವಾದ ಮುಖ ಮತ್ತು ನಡವಳಿಕೆ” ಎಂದಿದ್ದಾರೆ.
ಮೂವರು ಜನ್ ಸುರಾಜ್ ಅಭ್ಯರ್ಥಿಗಳಿಗೆ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಒತ್ತಡ ಹಾಕುವಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಆರೋಪಿಸಿದ ಕಿಶೋರ್, ಜನ್ ಸುರಾಜ್ ಪಕ್ಷದ ಬ್ರಹ್ಮಪುರ ಅಭ್ಯರ್ಥಿ ಡಾ. ಸತ್ಯ ಪ್ರಕಾಶ್ ತಿವಾರಿ ಅವರೊಂದಿಗೆ ಧರ್ಮೇಂದ್ರ ಪ್ರಧಾನ್ ಇರುವ ಫೋಟೋ ಬಿಡುಗಡೆ ಮಾಡಿದ್ದಾರೆ.
ಪ್ರಶಾಂತ್ ಕಿಶೋರ್ ಆರೋಪಗಳ ಬಗ್ಗೆ ಬಿಜೆಪಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
“ಎಲ್‌ಜೆಪಿಯ ಪ್ರಾಬಲ್ಯ ಹೊಂದಿರುವ ಬ್ರಹ್ಮಪುರದಲ್ಲಿ ನಮ್ಮ ಅಭ್ಯರ್ಥಿ, ಪಾಟ್ನಾದಲ್ಲಿ ಪ್ರಮುಖ ಆಸ್ಪತ್ರೆ ನಡೆಸುತ್ತಿರುವ ವೈದ್ಯ ಡಾ. ತಿವಾರಿ ಮೂರು ದಿನಗಳ ಕಾಲ ಪ್ರಚಾರ ಮಾಡಿದ್ದರು. ನಂತರ ಇದ್ದಕ್ಕಿದ್ದಂತೆ ಹಿಂದೆ ಸರಿದರು. ಧರ್ಮೇಂದ್ರ ಪ್ರಧಾನ್ ಜೊತೆ ತಿವಾರಿ ಇರುವ ಫೋಟೋ ಅವರ ಮೇಲೆ ಹೇರಲಾದ ಒತ್ತಡಕ್ಕೆ ಪುರಾವೆಯಾಗಿದೆ. ಚುನಾವಣೆ ಘೋಷಣೆಯಾದ ನಂತರ ಕೇಂದ್ರ ಸಚಿವರು ಎದುರಾಳಿ ಅಭ್ಯರ್ಥಿಯನ್ನು ಭೇಟಿಯಾಗುವುದು ಆಶ್ಚರ್ಯಕರ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
“ಗೋಪಾಲ್‌ಗಂಜ್‌ನ ಬಿಜೆಪಿ ನಾಯಕರು ನಮ್ಮ ಪಕ್ಷದ ಅಭ್ಯರ್ಥಿ ಮತ್ತು ಸ್ಥಳೀಯ ರಾಜಕೀಯ ನಾಯಕ ರಘುನಾಥ್ ಪಾಂಡೆ ಅವರ ಅಳಿಯ ಡಾ. ಶಶಿ ಶೇಖರ್ ಸಿನ್ಹಾ ಅವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದ್ದಾರೆ. ಎರಡು ದಿನಗಳ ಹಿಂದಿನವರೆಗೂ ಸಿನ್ಹಾ ಅವರು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದರು. ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಲು ನನಗೆ ಕರೆ ಮಾಡಿದ್ದರು. ಆದರೆ, ಪಕ್ಷದಲ್ಲೇ ಇರುವುದಾಗಿ ತಿಳಿಸಿದ್ದರು. ಇದಾಗಿ ಎರಡು ಗಂಟೆಗಳ ನಂತರ, ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡರು. ಫೋನ್ ಸ್ವಿಚ್ ಆಫ್ ಮಾಡಿದರು. ರಾಜ್ಯಾದ್ಯಂತ ಇತರ ಅಭ್ಯರ್ಥಿಗಳು ಇದೇ ರೀತಿಯ ಒತ್ತಡ ಮತ್ತು ಬೆದರಿಕೆಯನ್ನು ಎದುರಿಸುತ್ತಿದ್ದಾರೆ” ಎಂದು ಕಿಶೋರ್ ವಿವರಿಸಿದ್ದಾರೆ.
“ಕುಮ್ರಾರ್ ಕ್ಷೇತ್ರದ ನಮ್ಮ ಅಭ್ಯರ್ಥಿ ಪ್ರೊ. ಕೆ. ಸಿ. ಸಿನ್ಹಾ ಅವರ ಮೇಲೆ ಒತ್ತಡ ಹೇರಲಾಗಿದೆ. ನಾಮಪತ್ರ ಹಿಂತೆಗೆದುಕೊಳ್ಳುವಂತೆ ಪದೇ ಪದೇ ಬೆದರಿಕೆ ಹಾಕಲಾಗುತ್ತಿದೆ. ಆದರೆ, ಅವರು ಒತ್ತಡಕ್ಕೆ ಮಣಿಯಲು ನಿರಾಕರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಜನ್ ಸುರಾಜ್‌ಗೆ ಸೇರಲು ಬಿಜೆಪಿಗೆ ರಾಜೀನಾಮೆ ನೀಡಿರುವ ಶಾಲಾ ಶಿಕ್ಷಕ ವಾಲ್ಮೀಕಿನಗರ ಅಭ್ಯರ್ಥಿ ಡಾ. ನಾರಾಯಣ್ ಪ್ರಸಾದ್ ಅವರ ರಾಜೀನಾಮೆಯನ್ನು ಇದುವರೆಗೆ ಅಂಗೀಕರಿಸಲಾಗಿಲ್ಲ. ಈಗ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರು ಎಂದು ಸ್ಥಳೀಯ ಅಧಿಕಾರಿಗಳು ಬೆದರಿಸುತ್ತಿದ್ದಾರೆ” ಎಂದು ಕಿಶೋರ್ ಆರೋಪಿಸಿದ್ದಾರೆ.
“ಚುನಾವಣಾ ಆಯೋಗವನ್ನು ಪ್ರಶ್ನಿಸಿದ ಕಿಶೋರ್, “ಅಭ್ಯರ್ಥಿಗಳಿಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗದಿದ್ದರೆ, ಇನ್ನು ಮತದಾರರನ್ನು ಹೇಗೆ ರಕ್ಷಿಸುತ್ತೀರಿ? ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯುವಂತೆ ಈ ರೀತಿ ಬೆದರಿಕೆ ಹಾಕಿದರೆ, ಮತದಾನದ ದಿನದಂದು ಪಕ್ಷಗಳು ಮತದಾರರನ್ನು ಬೆದರಿಸುವುದನ್ನು ತಡೆಯಲು ಏನು ಕ್ರಮ ಕೈಗೊಂಡಿದ್ದೀರಿ?” ಎಂದು ಕೇಳಿದ್ದಾರೆ.
“14 ಮಂದಿ ಜನ ಸುರಾಜ್ ಅಭ್ಯರ್ಥಿಗಳು ಬೆದರಿಕೆಗಳನ್ನು ಎದುರಿಸಿದ್ದಾರೆ. ಆದರೂ 240 ಮಂದಿ ಅಭ್ಯರ್ಥಿಗಳು ದೃಢವಾಗಿ ನಿಂತಿದ್ದಾರೆ. ಅವರಿಗೆ ನಾನು ನಮಸ್ಕರಿಸುತ್ತೇನೆ. ಅವರು ನಮ್ಮ ಮೇಲೆ ಬೆದರಿಕೆ, ಒತ್ತಡ ಹಾಕಬಹುದು. ಇದಕ್ಕೆ ನಾವು ಪ್ರತ್ಯತ್ತರ ಕೊಡುತ್ತೇವೆ” ಎಂದಿದ್ದಾರೆ.
“ಬಿಜೆಪಿ ಮಹಾಮೈತ್ರಿಕೂಟದ ಅಭ್ಯರ್ಥಿಗಳ ಬಗ್ಗೆ ಚಿಂತಿಸುತ್ತಿಲ್ಲ, ಬದಲಾಗಿ ಜನ ಸುರಾಜ್‌ನ ಅಭ್ಯರ್ಥಿಗಳ ಬಗ್ಗೆ ಚಿಂತಿಸುತ್ತಿದೆ. ಏಕೆಂದರೆ ನಮ್ಮ ಅಭ್ಯರ್ಥಿಗಳು ಉತ್ತಮ ವೃತ್ತಿಪರರು, ವೈದ್ಯರು ಮತ್ತು ಉದ್ಯಮಿಗಳು. ಅವರು ಬಲ ಪ್ರಯೋಗಕ್ಕೆ ಹೆದರುವವರು ಅಲ್ಲ, ಸಭ್ಯ ಜನರಿಗೆ ಹೆದರುವವರು. ಇದು ಜನ ಸುರಾಜ್‌ನ ಭಯ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
“ಜನರು ಮತ್ತೆ ವಲಸೆ ಹೋಗಬಾರದು. ಹಾಗಾಗಿ, ಪೂರ್ಣ ಶಕ್ತಿಯಿಂದ ಎದ್ದು ಈ ಸರ್ಕಾರವನ್ನು ಉರುಳಿಸಿ” ಎಂದು ಬಿಹಾರದ ಯುವಜನತೆಗೆ ಪ್ರಶಾಂತ್ ಕಿಶೋರ್ ಕರೆ ಕೊಟ್ಟಿದ್ದಾರೆ.
ಅಭ್ಯರ್ಥಿ ಆಯ್ಕೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಕಿಶೋರ್, ಜನ್ ಸುರಾಜ್ ಅತ್ಯಂತ ಹಿಂದುಳಿದ ಸಮುದಾಯಗಳ 54 ಮತ್ತು ಮುಸ್ಲಿಂ ಸಮುದಾಯದ 34 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಾವು ಅತ್ಯಂತ ಹಿಂದುಳಿದ ಗುಂಪುಗಳಿಗೆ 70 ಟಿಕೆಟ್‌ಗಳನ್ನು ನೀಡಲು ಉದ್ದೇಶಿಸಿದ್ದೆವು. ಆದರೆ, 54 ನೀಡಲು ಸಾಧ್ಯವಾಯಿತು. ಇಷ್ಟು ಟಿಕೆಟ್ ಇತರ ಯಾವುದೇ ಪಕ್ಷಗಳು ಈ ಸಮುದಾಯಗಳಿಗೆ ನೀಡಿಲ್ಲ. ನಾವು ಮುಸ್ಲಿಮರ ಬಗ್ಗೆ ನಾಟಕೀಯ ಒಲವು ತೋರಿಸುತ್ತಿದ್ದೇವೆ ಎನ್ನುವರಿಗೆ, ನಾವು ಕೊಟ್ಟ ಟಿಕೆಟ್ ಸೇರಿದಂತೆ ಸಮುದಾಯಕ್ಕೆ ನೀಡಿದ ಪ್ರಾಮುಖ್ಯತೆಯ ಇತರ ದಾಖಲೆಗಳು ಪ್ರತ್ಯುತ್ತರವಾಗಿದೆ. ಈಗಾಗಲೇ ಮುಸ್ಲಿಂ ಶಾಸಕರು ಇರುವ ಕ್ಷೇತ್ರಗಳನ್ನು ಹೊರತುಪಡಿಸಿ, ಸಾಧ್ಯವಾದಲ್ಲೆಲ್ಲಾ ನಾವು ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದ್ದೇವೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
‘ಗಾಝಾದಲ್ಲಿ ಪ್ರತಿದಿನವೂ ದೀಪಾವಳಿ’: ನರಮೇಧವನ್ನು ಸಂಭ್ರಮಿಸಿ ವಿಕೃತಿ ಮೆರೆದ ರಾಮ್ ಗೋಪಾಲ್ ವರ್ಮಾ


