ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯ (ಎಂಜಿಎನ್‌ಆರ್‌ಇಜಿಎ) ಹೆಸರು ಮತ್ತು ನಿಬಂಧನಗೆಳನ್ನು ಬದಲಿಸುವ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್),2025 (ವಿಬಿ-ಜಿ ರಾಮ್ ಜಿ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ (ಡಿ.21) ಅಂಕಿತ ಹಾಕಿದ್ದಾರೆ.
ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಇತ್ತೀಚೆಗೆ ಕೊನೆಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಹೊಸ ಕಾಯ್ದೆಯ ಮೂಲಕ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಮತ್ತು ಯೋಜನೆಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿದೆ. ಇದು ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಈ ನಡೆಯ ವಿರುದ್ದ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾದ ‘ಕರ್ಮಶ್ರೀ’ ಗೆ ‘ಮಹಾತ್ಮ ಶ್ರೀ’ ಎಂದು ಮರುನಾಮಕರಣ ಮಾಡಿದ್ದಾರೆ.
ಹೊಸ ಕಾನೂನು ಒಂದು ಆರ್ಥಿಕ ವರ್ಷದ ಖಾತರಿಪಡಿಸಿದ ಉದ್ಯೋಗದ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಿದೆ. ಇದೇ ಸಂದರ್ಭದಲ್ಲಿ ರಾಜ್ಯಗಳ ಮೇಲೆ ಶೇಕಡ 40ರಷ್ಟು ಆರ್ಥಿಕ ಹೊರೆ ಹೊರಿಸಲಿದೆ.
ರಾಜ್ಯಗಳಿಗೆ ಯೋಜನೆಗೆ ಬಿಡುಗಡೆ ಮಾಡುವ ಹಣವನ್ನು ಕೇಂದ್ರ ಸರ್ಕಾರ ಮುಂಗಡವಾಗಿ ನಿರ್ಧರಿಸುವುದು, ಗ್ರಾಮಸಭೆಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳು ಯೋಜನೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಲು ಇದ್ದ ಅವಕಾಶವನ್ನು ಕಿತ್ತುಕೊಂಡಿರುವುದು. ಅಧಿಕಾರವನ್ನು ಕೇಂದ್ರೀಕರಣ ಮಾಡಿರುವುದು ಸೇರಿದಂತೆ ಹೊಸ ಕಾನೂನಿನ ಹೆಚ್ಚಿನ ನಿಬಂಧನೆಗಳಿಗೆ ವಿಪಕ್ಷಗಳು ಸೇರಿದಂತೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕೇಂದ್ರದ ಹೊಸ ಕಾನೂನು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಂಪೂರ್ಣವಾಗಿ ಹಾಳುಗಡೆವಲಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹೆಸರನ್ನು ತೆಗೆದು ಹಾಕುವ ಮೂಲಕ, ಅವರ ಆಶಯಗಳನ್ನು ನಿರ್ಣಾಮ ಮಾಡುವ ಪ್ರಯತ್ನ ಇದಾಗಿದೆ ಎಂದು ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.


