ರಾಹುಲ್ ಗಾಂಧಿ ತೆರವುಗೊಳಿಸಲಿರುವ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಕಾಂಗ್ರೆಸ್ ಉನ್ನತ ಮಟ್ಟದ ನಾಯಕರ ಜೊತೆ ಸಭೆ ನಡೆಸಿದ ಬಳಿಕ, ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಗೆದ್ದಿರುವ ಎರಡು ಕ್ಷೇತ್ರಗಳ ಪೈಕಿ ರಾಹುಲ್ ಗಾಂಧಿ ರಾಯ್‌ಬರೇಲಿಯನ್ನು ಉಳಿಸಿಕೊಳ್ಳಲಿದ್ದು, ಅವರಿಂದ ತೆರವಾಗಲಿರುವ ವಯನಾಡ್ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಮೂಲಕ ಎಐಸಿಸಿ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ, ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ.
कांग्रेस पार्टी में हम सब ने मिलकर तय किया है कि श्री राहुल गांधी रायबरेली सीट से सांसद रहेंगे।
वे वायनाड से भी चुनाव लड़े, वहाँ के लोगों का प्यार भी उन्हें मिला है।
इसलिए हमने यह तय किया कि वायनाड से श्रीमती प्रियंका गांधी चुनाव लड़ेंगी। pic.twitter.com/AtPPSDE78j
— Mallikarjun Kharge (@kharge) June 17, 2024
2004ರ ಹೊತ್ತಿಗೆ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ಗಾಂಧಿ, 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾರಣಾಸಿಯಲ್ಲಿ ಎದುರಾಳಿ ಎಂದು ಬಿಂಬಿತರಾಗಿದ್ದರು. ನಂತರ ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿಯ ಉತ್ತರಾಧಿಕಾರಿಯಾಗಿ ಸ್ಪರ್ಧಿಸುವ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದರು.
2004ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋನಿಯಾ ಗಾಂಧಿ ರಾಯ್‌ಬರೇಲಿಯಿಂದ ಸ್ಪರ್ಧಿಸಿದ್ದರು. ಈ ವೇಳೆ ಅವರ ಪ್ರಚಾರದ ಉಸ್ತುವಾರಿಯನ್ನು ಪ್ರಿಯಾಂಕಾ ವಹಿಸಿದ್ದರು. ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳಿಗೆ ಆಗಾಗ ಭೇಟಿ ನೀಡುತ್ತಿದ್ದ ಪ್ರಿಯಾಂಕಾ, ಅಲ್ಲಿನ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2007ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, ರಾಹುಲ್ ಗಾಂಧಿಯವರು ರಾಜ್ಯಾದ್ಯಂತ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದರು. ಆಗ ಅಮೇಥಿ, ರಾಯ್‌ಬರೇಲಿ ಪ್ರದೇಶದ ಹತ್ತು ಸ್ಥಾನಗಳ ಮೇಲೆ ಪ್ರಿಯಾಂಕಾ ಕೇಂದ್ರೀಕರಿಸಿದ್ದರು. ಎರಡು ವಾರಗಳ ಕಾಲ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರಲ್ಲಿ ಉಂಟಾಗಿದ್ದ ಆಂತರಿಕ ಕಲಹವನ್ನು ಶಮನಗೊಳಿಸಲು ಪ್ರಯತ್ನಿಸಿದ್ದರು.
2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡ್ ಮತ್ತು ರಾಯ್‌ಬರೇಲಿ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಎರಡೂ ಕಡೆಗಳಲ್ಲಿ ಭಾರೀ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ನಿಯಮದ ಪ್ರಕಾರ ಒಂದು ಕ್ಷೇತ್ರವನ್ನು ಬಿಟ್ಟು ಕೊಡಬೇಕಾದ ಕಾರಣ, ರಾಯ್‌ಬರೇಲಿ ಉಳಿಸಿಕೊಂಡು ವಯನಾಡ್ ಅನ್ನು ಸಹೋದರಿಗೆ ಬಿಟ್ಟು ಕೊಡಲು ರಾಹುಲ್ ಮುಂದಾಗಿದ್ದಾರೆ.
ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಅಮೇಥಿ ಕ್ಷೇತ್ರಗಳು ಗಾಂಧಿ ಕುಟುಂಬದ ಭದ್ರಕೋಟೆಯಾಗಿವೆ. ಹಲವು ವರ್ಷಗಳ ಕಾಲ ರಾಯ್‌ಬರೇಲಿಯನ್ನು ಸೋನಿಯಾ ಗಾಂಧಿ ಪ್ರತಿನಿಧಿಸಿದ್ದರು. ಈ ಬಾರಿ ಮಗ ರಾಹುಲ್ ಗಾಂಧಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ರಾಹುಲ್ ಗಾಂಧಿ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೇಥಿ ಕ್ಷೇತ್ರವನ್ನು ಈ ಹಿಂದೆ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದರು. ಆದರೆ, 2019ರ ಚುನಾವಣೆಯಲ್ಲಿ ಅಲ್ಲಿ ಬಿಜೆಪಿಯಿಂದ ಸ್ಮೃತಿ ಇರಾನಿ ಗೆಲುವು ದಾಖಲಿಸಿದ್ದರು. ಈ ಮೂಲಕ ಅಮೇಥಿ ಗಾಂಧಿ ಕುಟುಂಬದ ಕೈ ತಪ್ಪಿತ್ತು. ಆದರೆ, 2024ರ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಆಪ್ತ ಕಿಶೋರಿ ಲಾಲ್ ಶರ್ಮಾ ಸ್ಮೃತಿ ಇರಾನಿಯನ್ನು ಸೋಲಿಸಿ ಕ್ಷೇತ್ರವನ್ನು ವಾಪಸ್ ಪಡೆದಿದ್ದಾರೆ.
ವಯನಾಡ್ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಈ ವರ್ಷ ಎರಡನೇ ಬಾರಿ ರಾಹುಲ್ ಗಾಂಧಿ ಇಲ್ಲಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಮುಕ್ತ ಬೆಂಬಲ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಇದೆ. ಹಾಗಾಗಿ, ಇಲ್ಲಿ ಚುನಾವಣೆ ನಡೆದರೆ ಪ್ರಿಯಾಂಕಾ ಗಾಂಧಿ ಅನಾಯಸವಾಗಿ ಗೆಲ್ಲಬಹುದು.
ಇದನ್ನೂ ಓದಿ : ‘ಎನ್‌ಸಿಇಆರ್‌ಟಿ’ಯು ಆರ್‌ಎಸ್‌ಎಸ್ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ: ಜೈರಾಮ್ ರಮೇಶ್


