ಸಿಖ್ ಧರ್ಮ ಪ್ರಚಾರಕ, ಖಲಿಸ್ತಾನ್ ಪ್ರತಿಪಾದಕ ಅಮೃತ್‌ಪಾಲ್ ಸಿಂಗ್‌ನನ್ನು ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ಬೆಳಗ್ಗೆ ತಿಳಿಸಿದ್ದಾರೆ. ಅಮೃತಪಾಲ್ ಸಿಂಗ್ ಒಂದು ತಿಂಗಳಿಗೂ ಹೆಚ್ಚು ಕಾಲ ಪರಾರಿಯಾಗಿದ್ದನು.
ಬಂಧನದ ವಿವರಗಳನ್ನು ನಂತರ ಹಂಚಿಕೊಳ್ಳಲಾಗುವುದು ಎಂದು ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಮೃತಪಾಲ್ ಮೋಗಾದ ಗುರುದ್ವಾರದಲ್ಲಿ ಶರಣಾಗಿದ್ದಾರೆ, ಆತನನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
“ಅಮೃತ್‌ಪಾಲ್ ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಕಾಯಿದೆ) ವಿಚಾರಕ್ಕೆ ಸಂಬಂಧಿಸಿದ್ದಾನೆ. ಹೀಗಾಗಿ ಆತನನ್ನು ಅಸ್ಸಾಂನ ದಿಬ್ರುಗಢಕ್ಕೆ ಕರೆದೊಯ್ಯಲಾಗುವುದು” ಎಂದು ಅಪರಿಚಿತ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಅಮೃತ್‌ಪಾಲ್‌ನ ಎಂಟು ಸಹಾಯಕರು ಈಗಾಗಲೇ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದಿಬ್ರುಗಢದಲ್ಲಿ ಬಂಧನದಲ್ಲಿದ್ದಾರೆ.
30 ವರ್ಷ ವಯಸ್ಸಿನ ಅಮೃತ್‌ಪಾಲ್ ವಾರಿಸ್ ಪಂಜಾಬ್ ಡೆ ಸಂಘಟನೆಯ ಮುಖ್ಯಸ್ಥನಾಗಿದ್ದು ಮಾರ್ಚ್ 18ರಿಂದ ಪಂಜಾಬ್ ಪೊಲೀಸರು ಆತನ ಸಂಘಟನೆಯ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಫೆಬ್ರವರಿ 23ರಂದು ಅಮೃತ್ ಮತ್ತು ಆತನ ಬೆಂಬಲಿಗರು ಅಮೃತಸರದ ಪೊಲೀಸ್ ಠಾಣೆಗೆ ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಆತನ ಸಹಾಯಕನೊಬ್ಬನನ್ನು ಬಂಧಿಸಲಾಗಿತ್ತು. ಆಕ್ರಮಣ ಮತ್ತು ಅಪಹರಣಕ್ಕೆ ಯತ್ನಿಸಿದ ಆರೋಪದ ಮೇಲೆ ಕ್ರಮ ಜರುಗಿಸಲಾಗಿತ್ತು.
ಕಸ್ಟಡಿಯಲ್ಲಿರುವ ಅಮೃತ್‌ಪಾಲ್‌ನ ಫೋಟೋವನ್ನು ಅಧಿಕೃತ ಮೂಲಗಳಿಂದ ಹಂಚಿಕೊಳ್ಳಲಾಗಿದೆ ಎಂದು ಎಎನ್‌ಐ ಟ್ವೀಟ್ ಮಾಡಿದೆ. ಸಿಂಗ್ ಬಂಧನಕ್ಕೂ ಮುನ್ನ ಮೋಗಾದ ಗುರುದ್ವಾರದಲ್ಲಿ ಮಾತನಾಡಿರುವ ವಿಡಿಯೋಗಳನ್ನೂ ಸುದ್ದಿ ಸಂಸ್ಥೆ ಪೋಸ್ಟ್ ಮಾಡಿದೆ.
ಪಂಜಾಬ್‌ನ ಯುವಕರು ಮತ್ತು ಧರ್ಮವನ್ನು ಕೇಂದ್ರೀಕರಿಸುವ ಭಾಷಣಗಳನ್ನು ಮಾಡುವ ಮೂಲಕ ಅಮೃತ್ ಹೆಚ್ಚಿನ ಅನುಯಾಯಿಗಳನ್ನು ಗಳಿಸಿದ್ದಾನೆ. ಸಿಖ್ಖರಿಗೆ ಸ್ವತಂತ್ರ ರಾಜ್ಯವಾದ ಖಲಿಸ್ತಾನದ ಬೇಡಿಕೆಗಳನ್ನು ಬೆಂಬಲಿಸುವ ಹಲವಾರು ಸಂದರ್ಶನಗಳನ್ನು ಆತ ನೀಡಿದ್ದಾನೆ.
ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗಲಭೆ, ಸುಲಿಗೆ, ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.


