ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮೂದಾಬಾದ್ ಅವರ ‘ಆಪರೇಷನ್ ಸಿಂಧೂರ’ ಕುರಿತ ಎರಡು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು ಎಫ್‌ಐಆರ್‌ಗಳ ತನಿಖೆಗಾಗಿ ರಚಿಸಲಾದ ಹರಿಯಾಣ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) “ತನ್ನನ್ನು ತಾನೇ ದಾರಿ ತಪ್ಪಿಸುತ್ತಿದೆ” ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಕೇವಲ ಎರಡು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತನಿಖೆ ಮಾಡಲು ಮಾತ್ರ ಎಸ್‌ಐಟಿಯನ್ನು ರಚಿಸಲಾಗಿದೆ ಎಂಬುವುದನ್ನು ಪುನರುಚ್ಚರಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಎಸ್‌ಐಟಿ ತನ್ನ ತನಿಖಾ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 28ರಂದು ಆದೇಶ ನೀಡಿದ್ದ ನ್ಯಾಯಾಲಯ, ಎಸ್‌ಐಟಿಯ ತನಿಖೆ ಅಲಿ ಖಾನ್ ಅವರ ಎರಡು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಹೇಳಿತ್ತು. ಆದರೆ, ಎಸ್‌ಐಟಿ ಅಲಿ ಖಾನ್ ಅವರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಕಳೆದ ಹತ್ತು ವರ್ಷಗಳ ಅವರ ವಿದೇಶ ಪ್ರವಾಸಗಳ ಬಗ್ಗೆ ಕೇಳುತ್ತಿದೆ ಎಂದು ಅಲಿ ಖಾನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಅಲಿ ಖಾನ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ನಿಜವಾದ ಅರ್ಥವನ್ನು ತಿಳಿದುಕೊಳ್ಳಲು ಮತ್ತು ಅವುಗಳಿಂದ ಯಾವ ಅಪರಾಧ ನಡೆದಿದೆ ಎಂಬುವುದನ್ನು ಸ್ಪಷ್ಟಪಡಿಸಲು ಎಸ್‌ಐಟಿಯನ್ನು ನಿರ್ದಿಷ್ಟವಾಗಿ ರಚಿಸಲಾಗಿದೆ. ಹೀಗಿರುವಾಗ ಅರ್ಜಿದಾರರ ಎಲೆಕ್ಟ್ರಾನಿಕ್ ಸಾಧನಗಳನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ? ಎಂದು ನ್ಯಾಯಾಲಯ ಪ್ರಶ್ನಿಸಿತು.
ಎಸ್‌ಐಟಿಯವರು ಯಾವ ಉದ್ದೇಶಕ್ಕೆ ಅಲಿ ಖಾನ್ ಅವರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬುವುದು ನಮಗೆ ಗೊತ್ತಾಗಬೇಕಿದೆ. ಈ ಬಗ್ಗೆ ನಾವು ಅಧಿಕಾರಿಗಳನ್ನು ಕರೆದು ಕೇಳುತ್ತೇವೆ ಎಂದು ನ್ಯಾಯಮೂರ್ತಿ ಕಾಂತ್ ಅವರು ರಾಜ್ಯ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರಿಗೆ ತಿಳಿಸಿದರು.
“ಎಸ್‌ಐಟಿ ಅಲಿ ಖಾನ್ ಅವರ ಪೋಸ್ಟ್‌ಗಳನ್ನು ಮಾತ್ರ ಪರಿಶೀಲಿಸಬೇಕಿತ್ತು. ಆದರೆ, ತನ್ನನ್ನು ತಾನೇ ದಾರಿ ಅದು ತಪ್ಪಿಸುತ್ತಿರುವುದು ಏಕೆ? ಇದು ನಮಗೆ ಗೊತ್ತಾಗಬೇಕು” ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, “ತನಿಖೆಯನ್ನು ಹೇಗೆ ನಡೆಸಬೇಕು ಎಂಬುದು ತನಿಖಾಧಿಕಾರಿಯ ವಿಶೇಷ ಹಕ್ಕು ಮತ್ತು ಅವರು ಎಲ್ಲಾ ಅಪರಾಧ ಅಂಶಗಳನ್ನು ಪರಿಶೀಲಿಸಬೇಕಿದೆ ಎಂದರು. ಇದಕ್ಕೆ ಕೌಂಟರ್ ಕೊಟ್ಟ ವಕೀಲ ಸಿಬಲ್ “ಸಂಚಾರ ವಿಚಾರಣೆ” ಸಾಧ್ಯವಿಲ್ಲ. ಅರ್ಜಿದಾರರಿಗೆ ನಾಲ್ಕು ಬಾರಿ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಅರ್ಜಿದಾರರು (ಅಲಿ ಖಾನ್) ತನಿಖೆಗೆ ಸಹಕರಿಸಿದ್ದಾರೆ ಮತ್ತು ತಮ್ಮ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಒಪ್ಪಿಸಿದ್ದಾರೆ ಎಂದು ಗಮನಿಸಿದ ನ್ಯಾಯಾಲಯ, ಅವರಿಗೆ ಮತ್ತೆ ಸಮನ್ಸ್ ನೀಡಬಾರದು ಎಂದು ನಿರ್ದೇಶಿತು. ಅಲ್ಲದೆ, “ತನಿಖೆ ನಡೆಸುವುದಕ್ಕೆ ನಿಮಗೆ ಅವರ ಅಗತ್ಯ ಇಲ್ಲ. ಒಂದು ನಿಘಂಟಿನ ಅವಶ್ಯಕತೆ ಇದೆ” ಎಂದು ಛೀಮಾರಿ ಹಾಕಿತು.
ನಂತರ, ನ್ಯಾಯಾಲಯವು ಮೇ 28 ರ ಆದೇಶವನ್ನು ಎಸ್‌ಐಟಿಗೆ ನೆನಪಿಸಿತು. ನಾಲ್ಕು ವಾರಗಳಲ್ಲಿ ತನಿಖೆಯನ್ನು ಮುಗಿಸಲು ನಿರ್ದೇಶಿಸಿತು.
ಮಧ್ಯಂತರ ಜಾಮೀನು ನೀಡುವಾಗ ವಿಧಿಸಲಾದ ಷರತ್ತುಗಳ ಪ್ರಕಾರ ಅರ್ಜಿದಾರರು ಸಬ್-ಜುಡಿಸ್ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದನ್ನು ಮಾತ್ರ ನಿರ್ಬಂಧಿಸಲಾಗಿದೆ. ಅವರು ಇತರ ವಿಷಯಗಳ ಬಗ್ಗೆ ಬರೆಯಲು ಅಥವಾ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಮೇ 21ರಂದು, ನ್ಯಾಯಾಲಯವು ಪ್ರಾಧ್ಯಾಪಕ ಅಲಿ ಖಾನ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು ಮತ್ತು ಅವರ ಎರಡು ಸಾಮಾಜಿಕ ಜಾಲತಾಣ ಪೋಸ್ಟ್‌ಗಳಲ್ಲಿ ಬಳಸಲಾದ ಕೆಲವು ಅಭಿವ್ಯಕ್ತಿಗಳ ಸರಿಯಾದ ತಿಳುವಳಿಕೆಗಾಗಿ ಮತ್ತು ಬಳಸಿದ ಪದಗುಚ್ಛಗಳ ಸಂಕೀರ್ಣತೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಹರಿಯಾಣ ಡಿಜಿಪಿಗೆ ನಿರ್ದೇಶಿಸಿತ್ತು.


