ವಿವಾಹದ ಭರವಸೆ ನೀಡಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಕೇರಳ ಹೈಕೋರ್ಟ್, 25 ವರ್ಷದ ಯುವಕನ ವಿರುದ್ಧದ ಅತ್ಯಾಚಾರದ ಆರೋಪವನ್ನು ನವೆಂಬರ್ 22ರಂದು ರದ್ದುಗೊಳಿಸಿದೆ.
ತನ್ನ ಪತಿಯಿಂದ ಬೇರ್ಪಟ್ಟಿದ್ದ ಮಹಿಳೆಯು ವಿಚ್ಛೇದನ ಪ್ರಕ್ರಿಯೆಯಲ್ಲಿದ್ದರು. ಇದೇ ವೇಳೆ ಲೈಂಗಿಕ ಆರೋಪದ ಪ್ರಕರಣ ದಾಖಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರೋಪಿ ಹಾಗೂ ಅರ್ಜಿದಾರರು ಇಬ್ಬರೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಭೇಟಿಯಾದಾಗ ಆಸ್ಟ್ರೇಲಿಯಾದಲ್ಲಿದ್ದರು. ಆರೋಪಿಯು ತನ್ನನ್ನು ಮದುವೆಯಾಗುವುದಾಗಿ ನೀಡಿದ ಭರವಸೆಯ ಮೇರೆಗೆ ಆಸ್ಟ್ರೇಲಿಯದಲ್ಲಿದ್ದಾಗ ಎರಡು ಸಂದರ್ಭಗಳಲ್ಲಿ ಆತನೊಂದಿಗೆ ಸಮ್ಮತಿಯ ಲೈಂಗಿಕ ಸಂಪರ್ಕವನ್ನು ಹೊಂದಿರುವುದಾಗಿ ಮಹಿಳೆ ತಿಳಿಸಿದ್ದರು.
ತನ್ನ ಮೇಲೆ ಬಲವಂತವಾಗಿ ಲೈಂಗಿಕತೆ ನಡೆಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದರೂ, ಮೊದಲ ಮಾಹಿತಿ ಹೇಳಿಕೆಯನ್ನು (ಎಫ್‌ಐಎಸ್) ಓದುವಾಗ “ಲೈಂಗಿಕ ಸಂಬಂಧವು ಸಹಮತದ ಸ್ವರೂಪದ್ದಾಗಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಹೈಕೋರ್ಟ್ ಹೇಳಿದೆ.
“ವಿವಾಹಿತ ಮಹಿಳೆಯಾಗಿರುವ ದೂರುದಾರರು ತನ್ನ ಪತಿಗೆ ಇನ್ನೂ ವಿಚ್ಛೇದನ ನೀಡದ ಕಾರಣ ಆ ವ್ಯಕ್ತಿಯೊಂದಿಗೆ ಕಾನೂನುಬದ್ಧ ವಿವಾಹವಾಗಲು ಸಾಧ್ಯವಿಲ್ಲ. ಇದನ್ನು ತಿಳಿದಾಗ ಆ ವ್ಯಕ್ತಿಯೊಂದಿಗೆ ಸ್ವಯಂಪ್ರೇರಣೆಯಿಂದ ಲೈಂಗಿಕ ಸಂಬಂಧ ಸಾಧಿಸಿದ್ದಾರೆ” ಎಂದು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.
“ಆರೋಪಿಯು ವಿವಾಹಿತ ಮಹಿಳೆಗೆ ತಾನು ಮದುವೆಯಾಗುತ್ತೇನೆಂದು ಭರವಸೆ ನೀಡಿದ್ದನೆಂಬ ಆರೋಪವು ಕಾನೂನಿನ ಅಡಿ ಜಾರಿಯಾಗದ ಭರವಸೆಯಾಗಿದೆ” ಎಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿರಿ: ಭೀಮಾ ಕೊರೆಗಾಂವ್ – ಎಲ್ಗಾರ್ ಪರಿಷತ್ ಪ್ರಕರಣ: ಚಿಂತಕ ಆನಂದ್ ತೇಲ್ತುಂಬ್ಡೆ ಜಾಮೀನಿಗೆ ಸುಪ್ರೀಂಕೋರ್ಟ್ ಸಮ್ಮತಿ
ಅಂತಹ ಜಾರಿಗೊಳಿಸಲಾಗದ ಮತ್ತು ಕಾನೂನುಬಾಹಿರ ಭರವಸೆಯು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಕಾನೂನು ಕ್ರಮಕ್ಕೆ ಆಧಾರವಾಗುವುದಿಲ್ಲ. ಇಲ್ಲಿ, ಮದುವೆಯಾಗುವ ಭರವಸೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ ಸಂತ್ರಸ್ತೆ ವಿವಾಹಿತ ಮಹಿಳೆಯು ಕಾನೂನಿನ ಅಡಿಯಲ್ಲಿ ಆರೋಪಿಯ ಜೊತೆ ಕಾನೂನುಬದ್ಧ ವಿವಾಹವಾಗಲು ಸಾಧ್ಯವಿಲ್ಲ ಎಂದು ತಿಳಿದಿದ್ದರು ಎಂದು ನ್ಯಾಯಮೂರ್ತಿ ಎಡಪ್ಪಗತ್ ಹೇಳಿದ್ದಾರೆ.
ಈ ಕಾರಣಗಳಿಗಾಗಿ ಐಪಿಸಿಯ ಸೆಕ್ಷನ್ 376, 417 (ವಂಚನೆ), ಮತ್ತು 493 (ಕಾನೂನುಬದ್ಧ ವಿವಾಹದ ನಂಬಿಕೆಯನ್ನು ಮೋಸಗೊಳಿಸುವುದು) ಅಡಿಯಲ್ಲಿನ ಅಪರಾಧಗಳನ್ನು ಆರೋಪಿಯ ವಿರುದ್ಧ ಹೊರಿಸಲು ಸಾಧ್ಯವಿಲ್ಲ. ಆತನ ಮನವಿಯನ್ನು ಅನುಮತಿಸಲಾಗಿದೆ. ಆತನ ವಿರುದ್ಧದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರ್ಟ್ ಸೂಚಿಸಿದೆ.


