ಸರ್ಕಾರ ಜಾರಿಗೆ ತರುತ್ತಿರುವ ರೈತವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕದ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಸೇರಿ ಇಂದು ಬೆಂಗಳೂರಿನಲ್ಲಿ ಬೃಹತ್ ಐಕ್ಯ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ನುರಾರು ರೈತರು ರಸ್ತೆಯ ನಡುವೆ ಅರೆಬೆತ್ತಲೆ ಕುಳಿತು ಸರ್ಕಾರದ ರೈತವಿರೋಧಿ ಧೋರಣೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ಹೊರಟ ಹೋರಾಟಗಾರರನ್ನು ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಬಳಿ ಪೊಲೀಸರು ತಡೆದಾಗ ಹೋರಾಟಗಾರರು ರಸ್ತೆಯ ನಡುವೆಯೇ ಅರೆ ಬೆತ್ತಲೆ ಕುಳಿತು, ರಸ್ತೆ ತಡೆ ನಡೆಸಿದರು.
ಇಂದು ದೇಶಕ್ಕೆ ಅನ್ನ ಕೊಡುತ್ತಿರುವುದು ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಲ್ಲ, ಬದಲಿಗೆ ಈ ದೇಶದ ರೈತರಾಗಿದ್ದಾರೆ. ಇಂತಹ ರೈತ ವಿರೋಧಿ ಮಸೂದೆಗಳು ನಮಗೆ ಬೇಡ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇರ ಪ್ರಸಾರ ಮಾಡಲು ಇಲ್ಲಿ ಕ್ಲಿಕ್ ಮಾಡಿ
https://www.facebook.com/watch/?v=672452536704037&extid=KPO1rMRrJPYJr2rd
ರೈತರಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಅವರನ್ನು ಅತಂತ್ರಗೊಳಿಸಲಾಗುತ್ತಿದೆ. ಭುಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಭೂಮಿ ಕಿತ್ತುಕೊಳ್ಳಲಾಗುತ್ತಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಲು ರೈತರಿಗೆ ಅವಕಾಶ ನೀಡುತ್ತಿಲ್ಲ, ಇದು ರೈತ ವಿರೋಧಿ ಸರ್ಕಾರ ಎಂದು ರೈತರು ಅಸಮಾನಧಾನ ವ್ಯಕ್ತಪಡಿಸಿದರು.
ಬೃಹತ್ ಮೆರವಣಿಗೆಯನ್ನು ಪೊಲೀಸರು ತಡೆದಾಗ ಕೋಪೋದ್ರೋಕ್ತರಾದ ರೈತರು ತಮ್ಮ ಮೇಲು ಅಂಗಿಗಳನ್ನು ಕಳಚಿ ಅರೆಬೆತ್ತಲೆ ಪ್ರತಿಭಟನೆಗೆ ಮುಂದಾದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ನಂತರ ರೈತರ ಒತ್ತಾಯಕ್ಕೆ ಮಣಿದ ಪೊಲೀಸರು ಮೆರವಣಿಗೆಗೆ ಅವಕಾಶಮಾಡಿಕೊಟ್ಟರು. ರೈತರು ಇದೀಗ ಫ್ರೀಡಂ ಪಾರ್ಕ್ ಕಡೆಗೆ ಮೆರವಣಿಗೆ ಹೊರಟಿದ್ದಾರೆ. ಅಲ್ಲಿ ಸರ್ಕಾರಕ್ಕೆ ಪ್ರತಿಯಾಗಿ ಪರ್ಯಾಯ ಅಧಿವೇಶನ ನಡೆಯಲಿದೆ.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಹೋರಾಟವನ್ನು ಮುನ್ನಡೆಸಿದರು. ಇದೇ ಸಂದರ್ಭದಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷರಾದ ಯೋಗೇಂದ್ರ ಯಾದವ್‌ರವರು ಉಪಸ್ಥಿತರಿದ್ದರು.
ಇದನ್ನೂ ಓದಿ: ರೈತವಿರೋಧಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ, ಯಡಿಯೂರಪ್ಪನವರ ಕುರ್ಚಿ ಉಳಿಯುವುದಿಲ್ಲ: ಬಡಗಲಪುರ ನಾಗೇಂದ್ರ


