ಪಿಟಿಸಿಎಲ್ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ’ ಮುಖಂಡರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿದರು.
“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಸರ್ಕಾರ ಮಂಜೂರು ಮಾಡಿದ ಜಮೀನುಗಳನ್ನು ರಕ್ಷಿಸುವ ಉದ್ದೇಶದಿಂದ 1978ರಲ್ಲಿ ಜಾರಿಗೆ ಬಂದ ಕರ್ನಾಟಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ (ಪಿಟಿಸಿಎಲ್ ಆಕ್ಟ್) ಅನ್ನು ಸಂರಕ್ಷಿಸುವುದು ಸಾಮಾಜಿಕ ನ್ಯಾಯದ ಮೂಲಭೂತ ಭಾಗವಾಗಿದೆ. ಆದರೆ 2023ರ ತಿದ್ದುಪಡಿ ಕಾಯ್ದೆಯ ನಂತರದಲ್ಲಿ ರಾಜ್ಯ ಸರ್ಕಾರ, ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಟ್ಟದ ಎಸಿ, ಡಿಸಿಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ನಡೆಯುತ್ತಿರುವ ಕೆಲವು ವ್ಯಾಖ್ಯಾನಗಳು ಮತ್ತು ಆದೇಶಗಳಿಂದ ಪರಿಶಿಷ್ಟ ಜಾತಿ / ಪಂಗಡದವರಿಗೆ ಉದ್ದೇಶಪೂರ್ವಕವಾಗಿ ಅನ್ಯಾಯ ಆಗುತ್ತಿರುವುದನ್ನು ನಾವು ವಿರೋಧಿಸುತ್ತೇವೆ” ಹೋರಾಟ ಸಮಿತಿ ಹೇಳಿದೆ.
“ಮುಖ್ಯವಾಗಿ ಪಿ.ಟಿ.ಸಿ.ಎಲ್. ಕಾಯ್ದೆ ಕಲಂ 3(1)ಬಿ.ಯಲ್ಲಿ ಬರುವ ಮಂಜೂರು ಜಮೀನುಗಳ ವಿಚಾರಗಳಲ್ಲಿ ಗೊಂದಲಗಳು ಇರುವುದರಿಂದ ಉದ್ದೇಶ ಪೂರ್ವಕವಾಗಿ ನ್ಯಾಯಾಲಯಗಳು ಸರ್ಕಾರದಿಂದ ಮಂಜೂರಾಗಿದ್ದರೂ ಸಹ (ಇನಾಂ, ಜಿ.ಎಂ.ಎಫ್, ಕನಿಷ್ಠ ಬೆಲೆ, ಮಾರುಕಟ್ಟೆ ಬೆಲಗಿಂತ ಕಡಿಮೆ ಬೆಲೆ, ನಿರ್ದಿಷ್ಟ ಬೆಲೆ ಇತ್ಯಾದಿ) ಭೂಮಿಗಳನ್ನು ಉದ್ದೇಶ ಪೂರ್ವಕವಾಗಿ ಕಾಯ್ದೆ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ವಜಾ ಮಾಡುತ್ತಿದ್ದಾರೆ. ಕಲಂ 3(1)ಬಿ.ಯಲ್ಲಿ ಎಲ್ಲ ಸರ್ಕಾರದಿಂದ ಮಂಜೂರಾದ ಜಮೀನುಗಳು ಎಂದು ಇದ್ದರೂ ಸಹ ನ್ಯಾಯಾಲಯಗಳು ದುರುದ್ದೇಶದಿಂದ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಮಂಜೂರಾದ ಭೂಮಿಗಳ ಬಗ್ಗೆ ಸ್ಪಷ್ಟಪಡಿಸಿ ತಿದ್ದುಪಡಿ ಮಾಡಬೇಕು” ಹೋರಾಟಗಾರರು ಆಗ್ರಹಿಸಿದ್ದಾರೆ.
“ಎಲ್ಲ ನ್ಯಾಯಾಲಯಗಳಲ್ಲಿ ಶೇ90 ಸರ್ಕಾರಿ ವಕೀಲರುಗಳು ಸರ್ಕಾರದ ಕಾಯ್ದೆಗಳು/ ಆದೇಶಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸರಿಯಾಗಿ ವಾದ ಮಂಡಿಸುತ್ತಿಲ್ಲವಾದ್ದರಿಂದ, ಸರ್ಕಾರ ತಂದಿರುವ ಕಾನೂನುಗಳು ಸೋಲುತ್ತಿವೆ. ಇದಕ್ಕೆ ನೇರ ಕಾರಣ ಸರ್ಕಾರಿ ವಕೀಲರೇ ಆಗಿರುವುದರಿಂದ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
“ಎಸಿ/ಡಿಸಿ/ಹೈಕೋರ್ಟ್/ಸರ್ವೋಚ್ಚ ನ್ಯಾಯಾಲಯಗಳಲ್ಲಿ ಪಿ.ಟಿ.ಸಿ.ಎಲ್. ಕಾಯ್ದೆ ವಿರುದ್ದವಾಗಿ ಆಗುತ್ತಿರುವ ಆದೇಶಗಳನ್ನು ತಡೆಗಟ್ಟಲು ಕಠಿಣ ಕಾನೂನು ರೂಪಿಸಿ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಅತಿ ಮುಖ್ಯವಾಗಿ ಕಾಲಮಿತಿ ಅನ್ವಯಿಸಿ ನೆಕ್ಕಂಟಿ ರಾಮಲಕ್ಷ್ಮೀ ಪ್ರಕರಣದಿಂದ ವಜಾ ಆಗಿರುವ 2023ರ ತಿದ್ದುಪಡಿ ಪೂರ್ವದಲ್ಲಿ ಆಗಿರುವ ಪ್ರಕರಣಗಳು ಬರುವುದಿಲ್ಲವೆಂದು 2023ರ ಪಿ.ಟಿ.ಸಿ.ಎಲ್. ಕಾಯ್ದೆ 5(1)ಡಿ, ತಿದ್ದುಪಡಿಯನ್ನು ರದ್ದುಗೊಳಿಸಿ ಕಾಲಮಿತಿ ಆಧಾರದಲ್ಲಿ ವಜಾಗೊಂಡಿರುವ ಎಲ್ಲ ಪ್ರಕರಣ ಒಳಪಡಿಸಬೇಕು” ಎಂದು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.


