ಹೊಸದಾಗಿ ಜಾರಿಗೊಳಿಸಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರಲ್ಲಿ ಪೊಲೀಸ್ ಕಸ್ಟಡಿ ಅವಧಿಯನ್ನು ಹೆಚ್ಚಿಸಿರುವ ಸೆಕ್ಷನ್‌ಗೆ ತಿದ್ದುಪಡಿ ತರಬೇಕು ಮತ್ತು ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಮಾನವ ಹಕ್ಕುಗಳ ಸಂಘಟನೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್-1973ರ ಬದಲಿಗೆ ಜಾರಿಗೆ ಬಂದಿರುವ ನಾಗರಿಕ ಸುರಕ್ಷಾ ಸಂಹಿತೆ-2023 ಆರೋಪಿಗಳನ್ನು ಗರಿಷ್ಠ 15 ದಿನಗಳ ಬದಲಾಗಿ 60-90 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಲು ಅನುಮತಿಸುತ್ತದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಪಿಯುಸಿಎಲ್ ಕಳವಳ ವ್ಯಕ್ತಪಡಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿಯಲ್ಲಿ ಪೊಲೀಸ್ ಕಸ್ಟಡಿಯ ಅವಧಿಯು 15 ದಿನಗಳೇ ಇರಲಿದೆ ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದು, ಗರಿಷ್ಠ ಎರಡು ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ, ಒಬ್ಬ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿದ ವೇಳೆ ಆತ 15 ದಿನಗಳ ಕಾಲ ಆಸ್ಪತ್ರೆಗೆ ದಾಖಲಾದರೆ, ಆತನ ಕಸ್ಟಡಿ ಅವಧಿಯು ಮುಕ್ತಾಯವಾಗುತ್ತಿದ್ದರಿಂದ ಯಾವುದೇ ವಿಚಾರಣೆಗೆ ಅವಕಾಶ ಇರಲಿಲ್ಲ ಎಂದು ಹೇಳಿದ್ದಾರೆ. ಅಮಿತ್ ಶಾ ಅವರ ಈ ಸ್ಪಷ್ಟೀಕರಣವು ಸ್ವಾಗತಾರ್ಹವಾದರೂ, ಕಾನೂನಿನ ಬಲ ಹೊಂದಿಲ್ಲದ ಕಾರಣ ಇದು ಸಾಕಾಗುವುದಿಲ್ಲ ಎಂದು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಹೇಳಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 187 (3)ಗೆ ತಿದ್ದುಪಡಿ ತಂದು ತಕ್ಷಣ ಸ್ಪಷ್ಟೀಕರಣ ನೀಡಿದರೆ ನ್ಯಾಯಾಲಯಗಳು, ಪೋಲೀಸ್ ಮತ್ತು ಸಾರ್ವಜನಿಕ ಅಭಿಯೋಜಕರಲ್ಲಿ ಆಗುವ ಗೊಂದಲಗಳು ತಪ್ಪಲಿದೆ ಎಂದು ಗೃಹ ಸಚಿವ ಅಮಿತ್ ಶಾ ಮತ್ತು ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರಿಗೆ ಬರೆದ ಪತ್ರದಲ್ಲಿ ಪಿಯುಸಿಎಲ್ ಆಗ್ರಹಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 187 ರ ಪೊಲೀಸ್ ಕಸ್ಟಡಿಯ ವ್ಯಾಖ್ಯಾನವು ಸಿಆರ್‌ಪಿಸಿಯ ಸೆಕ್ಷನ್ 167ರ ಮೌಖಿಕ ಪ್ರತಿಯಾಗಿದೆ. ಆದರೆ, ಹೊಸ ಸೆಕ್ಷನ್‌ನಲ್ಲಿ ಎಂಟು ಪದಗಳನ್ನು ಬಿಟ್ಟು ಬಿಡಲಾಗಿದೆ. ಅವು ಪೊಲೀಸ್ ರಿಮಾಂಡ್‌ಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ವಿಭಿನ್ನವಾದ ವ್ಯಾಖ್ಯಾನ ನೀಡುತ್ತದೆ ಎಂದು ಪಿಯುಸಿಎಲ್ ತಿಳಿಸಿದೆ.
ಹಳೆಯ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನಲ್ಲಿ ಆರೋಪಿಯನ್ನು 15 ದಿನಗಳ ಬಳಿಕ ಪೊಲೀಸ್ ಕಸ್ಟಡಿಯಲ್ಲಿ ಅಥವಾ ಇತರ ರೀತಿಯಲ್ಲಿ ಬಂಧಿಸಲು ಮ್ಯಾಜಿಸ್ಟ್ರೇಟ್‌ಗೆ ಅವಕಾಶ ಇದೆ ಎನ್ನಲಾಗಿತ್ತು. ಹೊಸ ಕಾನೂನಿನಲ್ಲಿ ‘ಇತರ ರೀತಿಯಲ್ಲಿ’ ಎಂಬ ಪದವಿಲ್ಲ. ಇದು ಪೊಲೀಸರು ಆರೋಪಿಯನ್ನು 60-90 ದಿನಗಳವರೆಗೆ ಕಸ್ಟಡಿಗೆ ಪಡೆಯಲು ಅವಕಾಶ ನೀಡುತ್ತದೆ ಎಂದು ಪಿಯುಸಿಎಲ್ ಹೇಳಿದೆ.
ಪೊಲೀಸ್ ಕಸ್ಟಡಿ ಅವಧಿಯನ್ನು 15 ದಿನಗಳಿಗಿಂತ ಹೆಚ್ಚು ವಿಸ್ತರಿಸುವುದು ಕಾನೂನಿನ ನಿಯಮ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಗಂಭೀರ ಆಕ್ರಮಣವಾಗಿದೆ. ಆರೋಪಿಯನ್ನು ನೇರವಾಗಿ ಪೋಲೀಸರ ವಶದಲ್ಲಿ ಇಡುವ ಈ ಅವಧಿಯು ಪೊಲೀಸರಿಂದ ಗರಿಷ್ಠ ಒತ್ತಡವನ್ನು ಉಂಟು ಮಾಡುವ ಸಮಯವಾಗಿದೆ. ಇದು ಪೊಲೀಸರು ಆರೋಪಿಗೆ ದೈಹಿಕ ಚಿತ್ರಹಿಂಸೆ, ಭಾವನಾತ್ಮಕ ಒತ್ತಡಗಳು ಮತ್ತು ಇತರ ರೀತಿಯ ಕಾನೂನುಬಾಹಿರ ಕ್ರಮಗಳನ್ನು ಬಳಸಲು ಅವಕಾಶ ನೀಡುತ್ತದೆ ಎಂದಿದೆ.
ಗೃಹ ಸಚಿವರು ಪೊಲೀಸ್ ಕಸ್ಟಡಿ ಅವದಿ 15 ದಿನಗಳು ಮಾತ್ರ ಎಂದಿದ್ದಾರೆ. ಆದರೆ, ಹೊಸ ಕಾನೂನಿನಲ್ಲಿ 15 ದಿನಗಳ ಕಸ್ಟಡಿ ಅವಧಿಯ ಬಳಿಕ ಮ್ಯಾಜಿಸ್ಟ್ರೇಟ್ ಪೊಲೀಸ್ ಕಸ್ಟಡಿ ಅಲ್ಲದೆ ಇತರ ರೀತಿಯಲ್ಲಿ ಬಂಧಿಸಲು ಅನುಮತಿ ನೀಡುವ ಅವಕಾಶವಿಲ್ಲ. ನ್ಯಾಯಾಲದಲ್ಲಿ ಕಾನೂನಿನಲ್ಲಿ ಹೇಳಿರುವುದು ಮಾತ್ರ ಪರಿಗಣನೆಗೆ ಬರುತ್ತದೆ. ಹಾಗಾಗಿ, ಕೇಂದ್ರ ಸರ್ಕಾರ ಹೊಸ ಕಾನೂನಿಗೆ ತಿದ್ದುಪಡಿ ತಂದು ಆರೋಪಿಯ ಪೊಲೀಸ್ ಕಸ್ಟಡಿ ಅವಧಿ 15 ದಿನಗಳು ಮಾತ್ರ ಎಂದು ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಪಿಯುಸಿಎಲ್ ಆಗ್ರಹಿಸಿದೆ.
ಇದನ್ನೂ ಓದಿ : ಕೇಜ್ರಿವಾಲ್ ಜಾಮೀನಿಗೆ ತಡೆ ನೀಡಿದ್ದ ನ್ಯಾಯಾಧೀಶರು ಇಡಿ ವಕೀಲರ ಸಹೋದರ: 150 ವಕೀಲರಿಂದ ಸಿಜೆಐಗೆ ಪತ್ರ


