ಪುಣೆ ನಗರದ ಐತಿಹಾಸಿಕ ಶನಿವಾರ್ ವಾಡಾ ಕೋಟೆಯಲ್ಲಿ ಮೂವರು ಮಹಿಳೆಯರು ನಮಾಜ್ ಮಾಡಿದ ನಂತರ ಪುಣೆಯಲ್ಲಿ ಭಾರಿ ವಿವಾದ ಭುಗಿಲೆದ್ದಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆಯೊಬ್ಬರು ಗೋಮೂತ್ರದಿಂದ ನಮಾಜ್ ಮಾಡಿದ ಪ್ರದೇಶವನ್ನು ‘ಶುದ್ಧೀಕರಿಸುತ್ತಿದ್ದಾರೆ’ ಎಂದು ಕಂಡುಬಂದಿದೆ.
ಘಟನೆ ಶನಿವಾರ ನಡೆದಿರುವುದಾಗಿ ವರದಿಯಾಗಿದೆ, ನಂತರ ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ, ಕೆಲವು ಪಕ್ಷದ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಹೋಗಿ ಸ್ಥಳವನ್ನು ಶುದ್ದೀಕರಿಸಿದ್ದಾರೆ.
ಕುಲಕರ್ಣಿ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ, “ಶನಿವಾರ್ ವಾಡಾದಂತಹ ಸ್ಥಳದಲ್ಲಿ ಮುಸ್ಲಿಮರು ನಮಾಜ್ ಮಾಡಲು ಅವಕಾಶ ನೀಡಬಾರದು” ಎಂದು ಹೇಳುವ ಮೂಲಕ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. “ಇದು ದುರದೃಷ್ಟಕರ; ಶನಿವಾರ್ ವಾಡಾ ನಮಾಜ್ ಮಾಡಲು ಸೂಕ್ತ ಸ್ಥಳವಲ್ಲ. ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಆಡಳಿತವನ್ನು ಒತ್ತಾಯಿಸುತ್ತೇವೆ” ಎಂದು ಕುಲಕರ್ಣಿ ಹೇಳಿದ್ದಾರೆ.
ಆದರೆ, ಸಂದದೆ ಕುಲಕರ್ಣಿಯವರ ಕ್ರಮವು ಬಿಜೆಪಿಯ ಮಿತ್ರಪಕ್ಷಗಳಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಯಿಂದ ಟೀಕೆಗೆ ಗುರಿಯಾಗಿದೆ. ಶನಿವಾರ್ ವಾಡಾ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ರಕ್ಷಣೆಯಲ್ಲಿರುವ ಕಾರಣ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿಂಧೆ ಸೇನೆಯ ನೀಲಂ ಗೋರ್ಹೆ ಹೇಳಿಕೆ ನೀಡಿದ್ದಾರೆ.
ಅದೇ ರೀತಿ, ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಿದ್ದಕ್ಕಾಗಿ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಎನ್‌ಸಿಪಿಯ ರೂಪಾಲಿ ಪಾಟೀಲ್ ಥೋಂಬ್ರೆ ಹೇಳಿದ್ದಾರೆ. ಹಲವಾರು ಸಾಮಾಜಿಕ ಗುಂಪುಗಳು ಕುಲಕರ್ಣಿಯವರ ಕ್ರಮವನ್ನು ಪ್ರಶ್ನಿಸಿವೆ, ಅದರ ನಂತರ ಎಎಸ್‌ಐ ಇಡೀ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದೆ.
ಶನಿವಾರ್ ವಾಡಾವನ್ನು ರಕ್ಷಿಸಲಾಗಿರುವುದರಿಂದ ಎಎಸ್‌ಐ ಜೊತೆಯೂ ಮಾತನಾಡುವುದಾಗಿ ಪೊಲೀಸರು ತಿಳಿಸಿದ್ದಾರೆ. “ನಾವು ಎಎಸ್‌ಐ ಜೊತೆ ಮಾತನಾಡುತ್ತೇವೆ, ಅದರ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಪೊಲೀಸ್ ಉಪ ಆಯುಕ್ತ ಕ್ರುಶಿಕೇಶ್ ರಾವಾಲೆ ಹೇಳಿದ್ದಾರೆ.
ಶನಿವಾರ್ ವಾಡಾ 1736 ರಲ್ಲಿ ಪೇಶ್ವೆಗಳು ನಿರ್ಮಿಸಿದ 13 ಅಂತಸ್ತಿನ ಅರಮನೆಯಾಗಿತ್ತು. ಇದು ಪೇಶ್ವೆ ಅಧಿಕಾರದ ಸ್ಥಾನವಾಗಿ ಮತ್ತು ಪುಣೆಯ ಇತಿಹಾಸ ಮತ್ತು ಸಂಸ್ಕೃತಿಯ ಸಂಕೇತವಾಗಿ ಪೂಜ್ಯ ಸ್ಥಾನಮಾನವನ್ನು ಹೊಂದಿದೆ. ಇದು 1828 ರಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಾಶವಾಯಿತು. ಈ ಸ್ಥಳದಲ್ಲಿ ಉಳಿದಿರುವುದು ಕೋಟೆಯ ಗೋಡೆಗಳು ಮತ್ತು ಬೃಹತ್ ಮುಳ್ಳುಗಳಿಂದ ಕೂಡಿದ ಬಾಗಿಲುಗಳು ಮಾತ್ರ.
ಬಿಹಾರ| ರಾಜಕೀಯ ದ್ವೇಷಕ್ಕೆ ಪಾಸ್ವಾನ್ ಸಮುದಾಯದ ಯುವಕನ ಗುಂಡಿಕ್ಕಿ ಹತ್ಯೆ


