ಅತ್ಯಾಚಾರಕ್ಕೆ ವಿಫಲಯತ್ನ ನಡೆಸಿ, ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯ ರಾಜ್‌ಗುರು ನಗರದಲ್ಲಿ ನಡೆದಿದೆ.
8 ಮತ್ತು 9 ವರ್ಷದ ಇಬ್ಬರು ಸಹೋದರಿಯರು ಬುಧವಾರ (ಡಿ.25) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಪೋಷಕರು ಹುಡುಕಾಡಿದಾಗ, ಅವರು ವಾಸವಿದ್ದ ಕಟ್ಟಡದ ಮೊದಲನೇ ಮಹಡಿಯಲ್ಲಿ ತಂಗಿದ್ದ ಅಡುಗೆಯವನ ಮನೆಯ ಡ್ರಮ್‌ನಲ್ಲಿ ಶವಗಳು ಪತ್ತೆಯಾಗಿವೆ.
ಘಟನೆ ನಡೆದ ರಾಜ್‌ಗುರು ನಗರದಿಂದ ಸುಮಾರು 45 ಕಿ.ಮೀ ದೂರದ ಲಾಡ್ಜ್‌ವೊಂದರಲ್ಲಿ ಗುರುವಾರ (ಡಿ.26) ಬೆಳಿಗ್ಗೆ 54 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯರ ಹತ್ಯೆ ಬಳಿಕ ಆರೋಪಿ ತನ್ನ ಊರು ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಲು ಮುಂದಾಗಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ (ಪುಣೆ ಗ್ರಾಮಾಂತರ) ರಮೇಶ್ ಚೋಪಾಡೆ ತಿಳಿಸಿದ್ದಾರೆ.
ಬಾಲಕಿಯರನ್ನು ಡ್ರಮ್ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿರುವುದನ್ನು ಮತ್ತು ಅದಕ್ಕೂ ಮುನ್ನ ಒಬ್ಬಳು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ವಿಫಲ ಯತ್ನ ನಡೆಸಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ರಮೇಶ್ ಚೋಪಾಡೆ ಹೇಳಿದ್ದಾರೆ.
ಬಂಧಿತನ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 103 (ಕೊಲೆ), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಮತ್ತು ಸೆಕ್ಷನ್ 4, 6, 8, 10 ಮತ್ತು 12 (ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ಪ್ರಕರಣದ ಸೆಕ್ಷನ್‌ಗಳು) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊಲೆಯಾದ ಬಾಲಕಿಯರ ತಂದೆ ಕನ್ಸರ್ವೆನ್ಸಿ ಸಿಬ್ಬಂದಿ ಮತ್ತು ತಾಯಿ ದಿನಗೂಲಿ ನೌಕರರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರ ಮನೆಯಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಆರೋಪಿ ಮತ್ತು ಆತನ ಸಹೋದ್ಯೋಗಿಗಳು ಇದ್ದರು. ರಜೆ ಪಡೆದು ಎಲ್ಲರೂ ಊರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಕಾರಣ, ಕೃತ್ಯ ನಡೆಯುವಾಗ ಆರೋಪಿ ಮನೆಯಲ್ಲಿ ಒಬ್ಬನೇ ಇದ್ದ. ಬಾಲಕಿಯರ ತಂದೆ-ತಾಯಿ ಕೂಡ ಕೆಲಸಕ್ಕೆ ಹೋಗಿದ್ದರು ಎಂದು ವರದಿಗಳು ಹೇಳಿವೆ.
ಆರೋಪಿ ಹಲವು ವರ್ಷಗಳಿಂದ ಕಟ್ಟಡದಲ್ಲಿ ವಾಸವಿದ್ದ ಕಾರಣ ಬಾಲಕಿಯರ ಕುಟುಂಬಕ್ಕೆ ಚೆನ್ನಾಗಿ ಪರಿಚಯವಿದ್ದ. ಬಾಲಕಿಯರಿಗೂ ಕೂಡ ಪರಿಚಿತನಾಗಿದ್ದ. ಪೋಷಕರು ಇಲ್ಲದ ಸಮಯದಲ್ಲಿ ಬಾಲಕಿಯರು ಮೊದಲನೆಯ ಮಹಡಿಯ ಆರೋಪಿಯ ಮನೆ ಬಳಿ ಆಟವಾಡುತ್ತಿದ್ದರು.
ಬುಧವಾರ ಯಾರೂ ಇಲ್ಲದಾಗ ಲಡ್ಡು ಕೊಡುವುದಾಗಿ ಹೇಳಿ ಬಾಲಕಿಯರನ್ನು ಆರೋಪಿ ತನ್ನ ಮನೆಗೆ ಕರೆಸಿಕೊಂಡಿದ್ದ. ಇಬ್ಬರು ಒಳ ಹೋದಾಗ, ಒಬ್ಬಾಕೆಯನ್ನು ಕರೆದುಕೊಂಡು ಸ್ನಾನ ಗೃಹದೊಳಗೆ ಹೋಗಿ ಬಾಗಿಲು ಹಾಕಿದ್ದಾನೆ. ಅದನ್ನು ನೋಡಿದ ಆಕೆಯ ಸಹೋದರಿ ಕಿರುಚಾಡಿದ್ದಾಳೆ. ಆಗ ಹೊರಗಡೆ ಬಂದ ಆರೋಪಿ ಪಕ್ಕದಲ್ಲೇ ಇದ್ದ ಪೈಪ್‌ನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಬಳಿಕ ನೀರಿನ ಡ್ರಮ್‌ಗೆ ಮುಳುಗಿಸಿದ್ದಾನೆ. ಆಕೆಯ ಜೀವ ಹೋದ ಬಳಿಕ, ಮತ್ತೊಬ್ಬಳನ್ನು ಸ್ನಾನಗೃಹದಿಂದ ಹೊರಗಡೆ ಕರೆ ತಂದಿದ್ದಾನೆ. ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆಕೆಯೂ ಕೂಗಿಕೊಂಡಿದ್ದಾಳೆ. ಇದರಿಂದ ಹೆದರಿದ ಆರೋಪಿ ಸಹೋದರಿಯನ್ನು ಮುಳುಗಿಸಿದ್ದ ಅದೇ ಡ್ರಮ್‌ಗೆ ಈಕೆಯನ್ನೂ ಮುಳಗಿಸಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಚೋಪಾಡೆ ವಿವರಿಸಿದ್ದಾರೆ.
ಬಾಲಕಿಯರ ಪೋಷಕರು ಮನೆಗೆ ಬಂದಾಗ, ಇಬ್ಬರೂ ನಾಪತ್ತೆಯಾಗಿದ್ದರು. ಸುತ್ತಮುತ್ತ ಹುಡುಕಿದರೂ ಕಾಣದಿದ್ದಾಗ, ಪೋಷಕರು ಸ್ಥಳೀಯ ಖೇಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರಂಭದಲ್ಲಿ ಅಪಹರಣ ಪ್ರಕರಣ ದಾಖಲಿಸಿಕೊಂಡು ಬಾಲಕಿಯರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಶೋಧ ಕಾರ್ಯಾಚರಣೆಯ ಭಾಗವಾಗಿ ಪೊಲೀಸ್ ತಂಡವು ಮೊದಲ ಮಹಡಿಯಲ್ಲಿರುವ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿದೆ. ಈ ವೇಳೆ ಆರೋಪಿಯ ಮನೆಯಲ್ಲಿ ಬಾಲಕಿಯರ ಶವಗಳು ಪತ್ತೆಯಾಗಿವೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ ಎಂದು ರಮೇಶ್ ಚೋಪಾಡೆ ತಿಳಿಸಿದ್ದಾರೆ.
ಇದನ್ನೂ ಓದಿ : ಸಾರ್ವಜನಿಕವಾಗಿ ಚಾಟಿಯಿಂದ ದಂಡಿಸಿಕೊಂಡ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ: ಕಾರಣ ಏನು?


