ಸಾಮಾಜಿಕ ಕಾರ್ಯಕರ್ತ, ಬಹುಭಾಷಾ ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಪಂಜಾಬ್‌ನಲ್ಲಿ ಸೋಮವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಎಐಸಿಸಿ ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ಚೌಧರಿ ಮತ್ತು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದ್ದು, ಸೋನು ಸೂದ್ ಸಹೋದರಿಯನ್ನು ಮೋಗಾ ಜಿಲ್ಲೆಯ ಸೂದ್ ನಿವಾಸದಲ್ಲಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಸೋನು ಸೂದ್ ತನ್ನ ಸಹೋದರಿ ತನ್ನ ತವರು ಕ್ಷೇತ್ರವಾದ ಮೊಗಾದಿಂದ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: ’ನಾನು 2 ಬಾರಿ ರಾಜ್ಯಸಭಾ ಸ್ಥಾನ ತಿರಸ್ಕರಿಸಿದ್ದೇನೆ’- ನಟ ಸೋನು ಸೂದ್
ಈ ಕುರಿತು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚೆನ್ನಿ ತಮ್ಮ ಟ್ಟಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಮಾಳವಿಕಾ ಸೂದ್ ಅವರನ್ನು ಸ್ವಾಗತಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮತ್ತು ನಟ ಸೂನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರಿಗೆ ಪಕ್ಷಕ್ಕೆ ಸ್ವಾಗತ. ಮಾಳವಿಕಾ ಅವರು ಸಂಪೂರ್ಣ ಪ್ರಾಮಾಣಿಕತೆಯಿಂದ ಜನರಿಗೆ ಸೇವೆ ಸಲ್ಲಿಸುತ್ತಾರೆ. ಜೊತೆಗೆ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ತಳಮಟ್ಟದಲ್ಲಿ ಹರಡಲು ಸಹಾಯ ಮಾಡುತ್ತಾರೆ ಎಂದು ನನಗೆ ನಂಬಿಕೆಯಿದೆ ಎಂದಿದ್ದಾರೆ.
“ಜನಸೇವೆಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳಲು ರಾಜಕೀಯ ಧುಮುಕಿದ್ದೇನೆ” ಎಂದು ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಮಾಳವಿಕಾ ಸೂದ್ ಹೇಳಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಸೋನು ಸೂದ್ ಅವರು ಮಾಡಿದ್ದ ಸೇವೆ, ಸಾಮಾಜಿಕ ಕಾರ್ಯಗಳಿಗೆ ದೇಶಾದ್ಯಂತದ ಜನಸಾಮಾನ್ಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು.
ಸೋನು ಸೂದ್ ಅವರ ಕೆಲಸಗಳನ್ನು ರಾಜಕಾರಣಿಗಳು ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಗೌರವಿಸಿದ್ದವು. ಈ ಕುರಿತು ಯಾವಾಗಲೂ ಮಾತನಾಡುತ್ತಿದ್ದ ಅವರು, ತಮ್ಮ ಸಾಮಾಜಿಕ ಕಾರ್ಯಗಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದರು.
ಮುಂದಿನ ತಿಂಗಳ ಫೆಬ್ರವರಿ 14 ರಂದು ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.


