ಪಂಜಾಬ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 86 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಮುಖ್ಯವಾಗಿ ಚಮ್ಕೌರ್ ಸಾಹಿಬ್‌ನಿಂದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಅಮೃತಸರ ಪೂರ್ವದಿಂದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷವು ಕಣಕ್ಕಿಳಿಸಿದೆ.
ಪಂಜಾಬ್ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಅವರು ಡೇರಾ ಬಾಬಾ ನಾನಕ್‌ನಿಂದ ಮತ್ತು ಅಮೃತಸರ ಸೆಂಟ್ರಲ್‌ನಿಂದ ಓಂ ಪ್ರಕಾಶ್ ಸೋನಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ. ಈ ಇಬ್ಬರ ಕ್ಷೇತ್ರವು ಅವರು ಈಗಾಗಲೇ ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿದೆ.
ಇದನ್ನೂ ಓದಿ:ದೂರುದಾರರಿಂದ ಸುಲಿಗೆ ಆರೋಪ: ರವಿ ಚನ್ನಣ್ಣನವರ್ ಅಮಾನತಿಗೆ ಎಎಪಿ ಆಗ್ರಹ
ಇತ್ತಿಚೆಗಷ್ಟೇ ಕಾಂಗ್ರೆಸ್ ಸೇರಿದ ವಿವಾದಾತ್ಮಕ ಪಂಜಾಬಿ ಗಾಯಕ ಸಿಧು ಮುಸ್ಸೆವಾಲಾ ಅವರು ಮಾನಸಾ ಕ್ಷೇತ್ರದಿಂದ ಮತ್ತು ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಮೊಗಾದಿಂದ ಸ್ಪರ್ಧಿಸಲಿದ್ದಾರೆ.
ಪಕ್ಷದ ರಾಜ್ಯಸಭಾ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಅವರು ಗುರುದಾಸ್‌ಪುರದ ಖಾಡಿಯನ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಪ್ರಚಾರ ಸಮಿತಿ ಮುಖ್ಯಸ್ಥ ಸುನೀಲ್ ಜಾಖರ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದು, ಅವರ ಸೋದರಳಿಯ ಸಂದೀಪ್ ಜಾಖರ್ ಅವರು ಅಬೋಹರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಅದೇ ರೀತಿ ಪಂಜಾಬ್ ಸಚಿವ ಬ್ರಹ್ಮ ಮೊಹಿಂದ್ರಾ ಅವರು ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದು, ಅವರ ಮಗ ಮೋಹಿತ್ ಮೊಹಿಂದ್ರಾ ಅವರ ಕ್ಷೇತ್ರವಾದ ಪಟಿಯಾಲ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ:ಸುಭಾಷ್ ಚಂದ್ರ ಬೋಸ್ ಜನ್ಮದಿನ ಒಳಗೊಂಡಂತೆ ಗಣರಾಜ್ಯೋತ್ಸವ ಆಚರಣೆ: ವರದಿ


